ಬಾಳುಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ 'ಅಬಾಕಸ್' ಗಣಿತ ಭಾಗ್ಯ
ಕುಶಾಲನಗರ, ಆ.25 : ಕುಶಾಲನಗರ ಸಮೀಪದ ಚಿಕ್ಕಬೆಟ್ಟಗೇರಿಯಲ್ಲಿರುವ ಬಾಳುಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಮತ್ತು ದಾನಿಗಳ ಸಹಯೋಗದಲ್ಲಿ 'ಸ್ಮಾರ್ಟ್ ಬ್ರೈನ್' ಶಿಕ್ಷಣ ಸಂಸ್ಥೆ ವತಿಯಿಂದ ಉಚಿತ ಅಬಾಕಸ್ ಶಿಕ್ಷಣಕ್ಕೆ ಚಾಲನೆ ನೀಡಲಾಗಿದೆ.
ಗ್ರಾಮೀಣ ಭಾಗದ ಮಕ್ಕಳಿಗೆ ಗಣಿತದ ಮೇಲಿನ ಭೀತಿ ಹೋಗಲಾಡಿಸಿ, ಅವರಲ್ಲಿ ಲೆಕ್ಕಾಚಾರದ ಚುರುಕುತನ ಮೂಡಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಗುಡ್ಡೆಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ ಅಬಾಕಸ್ ತರಗತಿಗಳು ನಡೆಯುತ್ತಿದೆ. ಶಾಲೆಯ 24 ವಿದ್ಯಾರ್ಥಿಗಳಿಗೆ ಅಬಾಕಸ್ ತರಗತಿಗಳನ್ನು ಕಡ್ಡಾಯಗೊಳಿಸಲಾಗಿದೆ.
ಸ್ಮಾರ್ಟ್ ಬ್ರೈನ್ ಸಂಸ್ಥೆಯ ವತಿಯಿಂದ ಪ್ರತಿ ವಾರ ಒಟ್ಟು 4 ತರಗತಿಗಳನ್ನು ನಡೆಸಲಾಗುತ್ತದೆ. ಕಾರ್ಯಕ್ರಮದ ಭಾಗವಾಗಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಬಾಕಸ್ ಪುಸ್ತಕ ಹಾಗೂ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ದಾನಿ ಹಾಗೂ ನೀರಾವರಿ ಇಲಾಖೆಯ ಅಭಿಯಂತರ ಸೈಜನ್ ಪೀಟರ್ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮಾರ್ಟ್ ಬ್ರೈನ್ ಸಂಸ್ಥೆಯ ಮುಖ್ಯಸ್ಥೆ ಕುಸುಮಾ ಸುಕೇಶ್ ರಾಜ್, "ಗಣಿತವೆಂದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಕಷ್ಟಕರ ಎಂದು ಭಾಸವಾಗುತ್ತದೆ, ಆದರೆ ಅಬಾಕಸ್ ಕಲಿಕೆಯಿಂದ ಗಣಿತ ಅತ್ಯಂತ ಸರಳ, ವೇಗ ಹಾಗೂ ಕಲಿಕಾ ಆಸಕ್ತಿ ಹೆಚ್ಚಿಸುತ್ತದೆ" ಎಂದರು.
ಅಬಾಕಸ್ ಶಿಕ್ಷಣವನ್ನು ಕಳೆದ 3-4 ವರ್ಷಗಳಿಂದ ದಾನಿಗಳ ನೆರವಿನಿಂದ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಗುಡ್ಡೆ ಹೊಸೂರು ಹಾಗೂ ಕೂಡ್ಲೂರು ಸರಕಾರಿ ಶಾಲೆಗಳಲ್ಲಿ ಈ ಸೌಲಭ್ಯ ನೀಡಲಾಗಿತ್ತು. ಈಗ ಬಾಳುಗೋಡು ಸರಕಾರಿ ಪ್ರಾಥಮಿಕ ಶಾಲೆಗೂ ವಿಸ್ತಾರಗೊಂಡಿದ್ದು , ಶಿಕ್ಷಕರ ಗೌರವಧನವನ್ನು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾಗುತ್ತದೆ ಎಂದು ಗುಡ್ಡೆಹೊಸೂರು ಗ್ರಾ.ಪಂ. ಪಿಡಿಒ ಸುಮೇಶ್ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ದಾನಿಗಳಾದ ಶೈಜನ್ ಪೀಟರ್, ಕುಸುಮಾ ಸುಕೇಶ್ ರಾಜ್, ಮುಖ್ಯ ಶಿಕ್ಷಕಿ ರಮ್ಲತ್ ವಿ.ಪಿ, ಸಹಶಿಕ್ಷಕರಾದ ಭವ್ಯ ಬಿ.ಕೆ, ಇಂದ್ರಾಣಿ ಸಿ, ಎಸ್ ಡಿ ಎಂ ಸಿ ಸದಸ್ಯೆ ಅನಿತಾ, ವಿದ್ಯಾರ್ಥಿಗಳು , ಶಾಲಾ ಸಿಬ್ಬಂದಿ ಹಾಜರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
