Kodagu

ಹಲ್ಲೆ ಪ್ರಕರಣದ ಆರೋಪಿ ಮಡಿಕೇರಿ ಜೈಲಿನಲ್ಲೇ ಸಾವು‌

admincoorgdaily

ಹಲ್ಲೆ ಪ್ರಕರಣದ ಆರೋಪಿ ಮಡಿಕೇರಿ ಜೈಲಿನಲ್ಲೇ ಸಾವು‌

ಮಡಿಕೇರಿ: ಜಿಲ್ಲಾ ಕೇಂದ್ರದ ಅಂಚಿನ ಕರ್ಣಂಗೇರಿ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಡಿಕೇರಿ ತಾಲ್ಲೂಕಿನ ಮೂರ್ನಾಡು ಎಂ.ಬಾಡಗದ ನಿವಾಸಿ ಹರೀಶ್ (47) ಎಂಬವರು ಜೈಲಿನಲ್ಲಿಯೇ ಮೃತಪಟ್ಟಿದ್ದಾರೆ.

2026ರ ಏಪ್ರಿಲ್ 3ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ ನ್ಯಾಯಾಂಗ ಬಂಧನದಲ್ಲಿದ್ದರು. ಬುಧವಾರ ರಾತ್ರಿ ಊಟ ಮುಗಿಸಿ ಬ್ಯಾರಕ್‌ನಲ್ಲಿ ಮಲಗಿದ್ದ ಹರೀಶ್, ಗುರುವಾರ ಬೆಳಗ್ಗೆ ಎದ್ದಿರಲಿಲ್ಲ. ಸಹ ಕೈದಿಗಳು ಎಬ್ಬಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಜೈಲು ಸಿಬ್ಬಂದಿಗೆ ಮಾಹಿತಿ ನೀಡಿದರು. ಪರಿಶೀಲಿಸಿದಾಗ ಹರೀಶ್ ಮೃತಪಟ್ಟಿರುವುದು ಕಂಡುಬಂದಿದೆ.

 ವಿಚಾರಣಾಧೀನ ಕೈದಿ ನ್ಯಾಯಾಂಗ ಬಂಧನದಲ್ಲಿಯೇ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಚಂದ್ರಶೇಖರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳ ಮಹಜರು ನಡೆಸಿದ್ದಾರೆ.

ಜೈಲು ನಿಯಮದಂತೆ ನ್ಯಾಯಾಧೀಶರ ಆದೇಶದನ್ವಯ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷಾ ವರದಿಯ ಬಳಿಕ ತಿಳಿಯಲಿದೆ.