ಹಿಂದೂ ಜಾಗರಣಾ ವೇದಿಕೆ ವತಿಯಿಂದ "ಅಖಂಡ ಭಾರತ ಸಂಕಲ್ಪ ದಿನ": ಜಿಲ್ಲೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧ
ಮಡಿಕೇರಿ:ಆಗಸ್ಟ್ 08ರಿಂದ ದಿನಾಂಕ 14ರವರೆಗೆ ಕೊಡಗು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ “ಅಖಂಡ ಭಾರತ ಸಂಕಲ್ಪ ದಿನದ" ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಂಡಿದ್ದು, ಸದರಿ ಮೆರವಣಿಗೆಯು ಸಮಯ ಸಂಜೆ 06.00 ಗಂಟೆಗೆ ಪ್ರಾರಂಭವಾಗಿ ನಗರ/ಪಟ್ಟಣಗಳ ಮುಖ್ಯ ರಸ್ತೆಯಲ್ಲಿ ಹಾದು ಹೋಗಲಿದೆ. ಮೆರವಣಿಗೆಯಲ್ಲಿ ವಿವಿಧ ಸಂಘಟನೆಗಳು ಕಾರ್ಯಕರ್ತರು ಸೇರಲಿದ್ದು, 1000 ರಿಂದ 2000 ಜನ ಸೇರಿವ ಸಾಧ್ಯತೆಗಳಿರುತ್ತದೆ ಹಾಗೂ ಮೆರವಣಿಗೆಯಲ್ಲಿ 400 ರಿಂದ 600 ಉರಿಯುವ ಪಂಜಗಳನ್ನು ಉಪಯೋಗಿಸುವ ಮಾಹಿತಿ ಇರುತ್ತದೆ. ಮೆರವಣಿಗೆ ನಂತರ ಸಭಾ ಕಾರ್ಯಕ್ರಮ ಏರ್ಪಡಿಸಿದ್ದು ಸದರಿ ಕಾರ್ಯಕ್ರಮದಲ್ಲಿ ಇತರೇ ಜಿಲ್ಲೆಯ ಭಾಷಣಕಾರರು ಭಾಷಣ ಮಾಡುವ ಬಗ್ಗೆ ಮಾಹಿತಿ ಇದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಬೇಕಾಗಿ ಪೊಲೀಸ್ ಅಧೀಕ್ಷಕಕರು, ಕೊಡಗು ಜಿಲ್ಲೆ, ಮಡಿಕೇರಿ ರವರು ಕೋರಿದ್ದಾರೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಸದರಿ ದಿನಾಂಕಗಳಂದು ಮದ್ಯ ಮಾರಾಟವನ್ನು ನಿಷೇಧಿಸುವುದು ಸೂಕ್ತವೆಂದು ಕಂಡುಬಂದ ಕಾರಣ 08-08-2025 ರಿಂದ ದಿನಾಂಕ 14-08-2025 ರವರೆಗೆ ಕೊಡಗು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಡೆಸಲ್ಪಡುವ "ಅಖಂಡ ಭಾರತ ಸಂಕಲ್ಪ ದಿನದ" ಹಿನ್ನಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅಬಕಾರಿ ಕಾಯ್ದೆ 1965ರ ಕಲಂ 21 ರಲ್ಲಿ ಜಿಲ್ಲಾಧಿಕಾರಿ ಅವರು ಈ ಕೆಳಗಿನ ಸ್ಥಳಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಿದ್ದಾರೆ.
1. ದಿನಾಂಕ 08-08-2025 ರಂದು ಸಮಯ ಬೆಳಿಗ್ಗೆ 06.00 ಗಂಟೆಯಿಂದ ಮಧ್ಯರಾತ್ರಿ 12.00 ಗಂಟೆಯವರೆಗೆ ಮಡಿಕೇರಿ ನಗರ ವ್ಯಾಪ್ತಿಯ ಸುಮಾರು 10. ಕಿ.ಮೀ. ವ್ಯಾಪ್ತಿಯಲ್ಲಿ
2. ದಿನಾಂಕ 09-08-2025 ರಂದು ಸಮಯ ಬೆಳಿಗ್ಗೆ 06.00 ಗಂಟೆಯಿಂದ ಮಧ್ಯ ರಾತ್ರಿ 12.00 ಗಂಟೆಯವರೆಗೆ ಮಾದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಾಗೂ ಐಗೂರು ಗ್ರಾಮ ಪಂಚಾಯ್ತಿ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ
3. ದಿನಾಂಕ 10-08-2025 ರಂದು ಸಮಯ ಬೆಳಿಗ್ಗೆ 06.00 ಗಂಟೆಯಿಂದ ಮಧ್ಯ ರಾತ್ರಿ 12.00 ಗಂಟೆಯವರೆಗೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಕೊಡ್ಲಿಪೇಟೆ ಪಟ್ಟಣದ ಸುತ್ತಮುತ್ತಲಿನ 10. ಕಿ.ಮೀ ವ್ಯಾಪ್ತಿಯಲ್ಲಿ
4. ದಿನಾಂಕ 13-08-2025 ರಂದು ಸಮಯ ಬೆಳಿಗ್ಗೆ 06.00 ಗಂಟೆಯಿಂದ ಮಧ್ಯ ರಾತ್ರಿ 12.00 ಗಂಟೆಯವರೆಗೆ ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ
5. ದಿನಾಂಕ 14-08-2025 ರಂದು ಸಮಯ ಬೆಳಿಗ್ಗೆ 06.00 ಗಂಟೆಯಿಂದ ಮಧ್ಯ ರಾತ್ರಿ 12.00 ಗಂಟೆಯವರೆಗೆ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ