ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಮೇಲಿನ ಆರೋಪ ಸತ್ಯಕ್ಕೆ ದೂರ; ಡಿ.ಬಿ.ಧರ್ಮಪ್ಪ
ಶನಿವಾರಸಂತೆ:ಏ23:-ಕೊಡಗಿನಲ್ಲಿ ಸಹಕಾರ ಸಂಸ್ಥೆಗಳನ್ನು ಅಭಿವೃದ್ದಿ ಪಡಿಸುತ್ತಿರುವ ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರ ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಅನಾಮಧೇಯ ಪತ್ರದ ಮೂಲಕ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು ಈ ಆರೋಪವನ್ನು ಸಹಕಾರ ಸಂಸ್ಥೆಗಳು ಖಂಡಿಸುತ್ತದೆ ಎಂದು ಶನಿವಾರಸಂತೆ ಎಪಿಸಿಎಂಎಸ್ ಅಧ್ಯಕ್ಷ ಡಿ.ಡಿ.ಧರ್ಮಪ್ಪ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಸಹಕಾರ ವಲಯದಲ್ಲಿ ಪಾರದರ್ಶಕವಾಗಿ ವ್ಯವಹರಿಸುತ್ತಾ ಮತ್ತು ಕೊಡಗಿನ ಸಹಕಾರ ಬ್ಯಾಂಕ್, ಕೃಷಿ ಪತ್ತಿನ ಸಂಘ ಸೇರಿದಂತೆ ವಿವಿಧ ಸಹಕಾರ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ತಂದುಕೊಡುವ ಮೂಲಕ ಅಭಿವೃದ್ದಿಗೆ ಕಾರಣರಾಗಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರ ಮೇಲೆ ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಸತ್ಯಕ್ಕೆ ದೂರವಾದ ಮತ್ತು ಅವರನ್ನು ಮಾನಸಿಕವಾಗಿ ಕುಗ್ಗಿಸಲು ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಅಷ್ಟೆ ಅಲ್ಲದೆ ಇಲ್ಲಸಲ್ಲದ ಆರೋಪ ಮಾಡಲಾಗಿ ಇದಕ್ಕೆ ಸಂಬಂಧಪಟ್ಟಂತೆ ಬಾಂಡ್ ಗಣಪತಿ ಅವರು ಮಾಧ್ಯಮದಲ್ಲಿ ಸರಿಯಾದ ಹೇಳಿಕೆ ನೀಡಿದ್ದರು.
ಆದರೆ ಈಗ ಮತ್ತೆ ಅನಾಮಧೇಯ ವ್ಯಕ್ತಿಯೊಬ್ಬ ಅನಾಮಧೇಯ ಪತ್ರದಲ್ಲಿ ಬಾಂಡ್ ಗಣಪತಿಯವವರು ಬ್ಯಾಂಕ್ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ, ಸಿಬ್ಬಂದಿಗಳನ್ನು ಹೆದರಿಸುತ್ತಿದ್ದಾರೆ ಇನ್ನು ಮುಂತಾದ ಇಲ್ಲಸಲ್ಲದ ಆರೋಪಗಳನ್ನು ಮಾಡಿರುವ ಪತ್ರವನ್ನು ಶನಿವಾರಸಂತೆ, ನಿಡ್ತ, ಹಂಡ್ಲಿ ಸೇರಿದಂತೆ ವಿವಿಧ ಸಹಕಾರ ಸಂಸ್ಥೆಗಳಾದ ಪ್ಯಾಕ್ಸ್, ಎಪಿಸಿಎಂಎಸ್ ಸಂಸ್ಥೆಗಳಿಗೆ ಅಂಚೆ ಮೂಲಕ ರವಾನಿಸಿದ್ದಾರೆ.
ಆದರೆ ಅವರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು ಸಹಕಾರ ಸಂಸ್ಥೆಗಳನ್ನು ಬೆಳೆಸುತ್ತಿರುವ ಮತ್ತು ಡಿಸಿಸಿ ಬ್ಯಾಂಕ್‌ಗೆ ರಾಜ್ಯ ಪ್ರಶಸ್ತಿ ಬಂದಿರುವುದಕ್ಕೆ ಕಾರಣರಾಗಿರುವ ಬಾಂಡ್ ಗಣಪತಿ ಅವರ ಸಾಧನೆಯನ್ನು ಸಹಿಸದ ಕೆಲವರು ಅನಾಮೇಧಿಯವಾಗಿ ಆರೋಪ ಮಾಡುತ್ತಿರುವುದನ್ನು ಸಹಕಾರ ವಲಯ ಖಂಡಿಸುತ್ತದೆ ಮತ್ತು ಅವರಿಗೆ ಬೆಂಬಲವಾಗಿ ನಾವಿದ್ದೇವೆ ಎಂದರು.
ಹಂಡ್ಲಿ ಪ್ಯಾಕ್ಸ್ ಅಧ್ಯಕ್ಷ ಎಸ್.ಎಸ್.ಚಿದಾನಂದ್ ಮಾತನಾಡಿ,ಪ್ರಾಮಾಣಿಕ ವ್ಯಕ್ತಿಯಾದ ಬಾಂಡ್ ಗಣಪತಿ ಅವರ ಪ್ರಾಮಾಣಿಕತೆಯನ್ನು ಸಹಿಸದ ವ್ಯಕ್ತಿಗಳು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದರು.
ಶನಿವಾರಸಂತೆ ಎಪಿಸಿಎಂಎಸ್ ಮಾಜಿ ನಿರ್ದೇಶಕ ಎಸ್.ಜೆ.ರವಿಕುಮಾರ್ ಮಾತನಾಡಿ,ಬಾಂಡ್ ಗಣಪತಿ ಅವರ ಮೇಲಿನ ಆರೋಪ ನಿರಾಧಾರವಾಗಿದ್ದು ಅವರ ಸಾಧನೆಯನ್ನು ಸಹಿಸದ ವ್ಯಕ್ತಿಗಳು ಅವರನ್ನು ಮಾನಸಿಕವಾಗಿ ಕುಗ್ಗಿಸಲು ಪ್ರಯತ್ನಿಸುದ್ದಾರಷ್ಟೆ ಎಂದು ಹೇಳಿದರು.
ನಿಡ್ತ ಪ್ಯಾಕ್ಸ್ ಉಪಾಧ್ಯಕ್ಷೆ ಎಸ್.ಎ.ಪೂಜಾ ವಿಜಯ್ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ನಿಡ್ತ ಪ್ಯಾಕ್ಸ್ ನಿರ್ದೆಕ ಜಿ.ಜಿ.ಪರಮೇಶ್, ಎಪಿಸಿಎಂಎಸ್ ಉಪಾಧ್ಯಕ್ಷ ಎಚ್.ಎನ್.ಕುಮಾರ್, ನಿಡ್ತ ಪ್ಯಾಕ್ಸ್ ಅಧ್ಯಕ್ಷ ಡಿ.ಎಸ್.ಮಲ್ಲೇಶ್ ಪ್ರಮುಖರಾದ ವಿಜಯ್‌ಕುಮಾರ್, ಸಂದೀಪ್, ದೀಪಕ್ ಮುಂತಾದವರು ಹಾಜರಿದ್ದರು.