ಚಿಕ್ಕಮಗಳೂರು ಮೆಡಿಕಲ್‌ ಕಾಲೇಜಿನಲ್ಲಿ ಲೈಂಗಿಕ ಕಿರುಕುಳದ ಆರೋಪ; ಅನಾಟಮಿ ಪ್ರೊಫೆಸರ್ ವಿರುದ್ಧ ವಿದ್ಯಾರ್ಥಿನಿಯಿಂದ ದೂರು

Nov 25, 2025 - 23:59
 0  525
ಚಿಕ್ಕಮಗಳೂರು ಮೆಡಿಕಲ್‌ ಕಾಲೇಜಿನಲ್ಲಿ ಲೈಂಗಿಕ ಕಿರುಕುಳದ ಆರೋಪ; ಅನಾಟಮಿ ಪ್ರೊಫೆಸರ್ ವಿರುದ್ಧ ವಿದ್ಯಾರ್ಥಿನಿಯಿಂದ ದೂರು
Photo credit: TV09 (ಪ್ರೊಫೆಸರ್ ‌ವಿರುದ್ಧ ದೂರು)

ಚಿಕ್ಕಮಗಳೂರು, ನ. 25: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಮೆಡಿಕಲ್‌ ಕಾಲೇಜು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಅನಾಟಮಿ ವಿಭಾಗದ ಪ್ರೊ. ಗಂಗಾಧರ್ ಅವರು 3ನೇ ವರ್ಷದ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಹೊರಬಿದ್ದಿದ್ದು, ವಿದ್ಯಾರ್ಥಿನಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

2023ರಲ್ಲಿ ನಡೆದಿದ್ದ ಹಳೆಯ ಪ್ರಕರಣಕ್ಕೆ ಈ ದೂರು ಹೊಸ ರೂಪ ಪಡೆದಿದೆ.

ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ,

“ಪ್ರೊ. ಗಂಗಾಧರ್ ಅವರು ನಿರಂತರವಾಗಿ ಅಶ್ಲೀಲ ವಾಟ್ಸ್ಆ್ಯಪ್ ಸಂದೇಶ ಕಳುಹಿಸುತ್ತಿದ್ದರು. ಒಂಟಿಯಾಗಿ ಚೇಂಬರ್‌ಗೆ ಬರುವಂತೆ ಬಲವಂತ ಮಾಡುತ್ತಿದ್ದರು. ಈ ಬಗ್ಗೆ ಡೀನ್‌ರಿಗೆ ತಿಳಿಸಿದ್ದರೂ ಯಾವುದೇ ಕ್ರಮಕೈಗೊಳ್ಳಲಿಲ್ಲ. ಬದಲಿಗೆ ಕಾಲೇಜಿಗೆ ಬರದಂತೆ ಮಾಡಿ, ಪರೀಕ್ಷೆ ಬರೆಯುವ ಹಕ್ಕನ್ನೇ ಕಿತ್ತುಕೊಂಡರು,” ಎಂದು ದೂರಿದರು.

“ನನ್ನ ಗಂಡ ಕೂಡ ಇದೇ ಕಾಲೇಜಿನ ಪ್ರೊಫೆಸರ್; ಅವರಿಗೆ ಸಹ ಕಿರುಕುಳ ನೀಡಲಾಗಿದೆ. ನೈತಿಕ ಬೆಂಬಲ ಸಿಕ್ಕ ನಂತರವೇ ದೂರು ನೀಡಲು ಬಂದಿದ್ದೇನೆ,” ಎಂದೂ ಅವರು ಹೇಳಿದರು.

2023ರಲ್ಲಿ ಇದೇ ಪ್ರೊಫೆಸರ್ ವಿರುದ್ಧ ವಾಟ್ಸ್ಆ್ಯಪ್ ಚಾಟ್ ಆಧಾರದ ಮೇಲೆ ಕಿರುಕುಳದ ಆರೋಪ ಕೇಳಿಬಂದಿತ್ತು. ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬಳು ಸಹ ಆಗಲೇ ದೂರು ನೀಡಿದ್ದರು. ಈ ಪ್ರಕರಣಗಳ ಕುರಿತು ಡೀನ್‌ಗೆ ಮಾಹಿತಿ ಇದ್ದರೂ, ಕ್ರಮಕೈಗೊಳ್ಳದೇ ಪ್ರೊಫೆಸರ್‌ರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆಯೇ ಎಂಬ ಪ್ರಶ್ನೆ ಈಗ ಮತ್ತೆ ಎತ್ತಲಾಗಿದೆ.

ಪರೀಕ್ಷೆ ಸಮೀಪಿಸುತ್ತಿರುವಾಗ, ಹಾಜರಾತಿ ಕೊರತೆ ಉಲ್ಲೇಖಿಸಿ ಕೆಲ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡದಿದ್ದುದೂ ವಿವಾದಕ್ಕೆ ಕಾರಣವಾಗಿದೆ. ಇದು ವೈಯಕ್ತಿಕ ದ್ವೇಷದ ಪರಿಣಾಮವಷ್ಟೇ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. 

ವಿದ್ಯಾರ್ಥಿನಿಯ ವೈರಲ್ ಆಗಿರುವ ವಾಟ್ಸ್ಆ್ಯಪ್ ಸ್ಕ್ರೀನ್‌ಶಾಟ್‌ಗಳ ನಡುವೆ, ಕಾಲೇಜಿನ ಡೀನ್ ಹಾಗೂ ನಿರ್ದೇಶಕ ಹರೀಶ್ ಅವರು ಪ್ರೊ. ಗಂಗಾಧರ್‌ಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.

ಮೂರು ದಿನಗಳಲ್ಲಿ ಲಿಖಿತ ಉತ್ತರ ನೀಡುವಂತೆ ಸೂಚಿಸಲಾಗಿದ್ದು, ಸಮರ್ಪಕ ಸ್ಪಷ್ಟನೆ ನೀಡದಿದ್ದಲ್ಲಿ ಶಿಸ್ತಿನ ಕ್ರಮಕ್ಕೆ ಗಂಗಾಧರ್ ಅವರನ್ನು ಶಿಫಾರಸು ಮಾಡಲಾಗುವುದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0