ಕನ್ನಡದ ಜೊತೆಗೆ ಕೊಡಗಿನಲ್ಲಿ ಕೊಡವ ಸಾಹಿತ್ಯ ಕೂಡ ಬೆಳೆಯುತ್ತಿದೆ; ಸಾಹಿತಿ ಕಾವೇರಿ ಅಭಿಪ್ರಾಯ

ಕನ್ನಡದ ಜೊತೆಗೆ ಕೊಡಗಿನಲ್ಲಿ ಕೊಡವ ಸಾಹಿತ್ಯ ಕೂಡ ಬೆಳೆಯುತ್ತಿದೆ; ಸಾಹಿತಿ ಕಾವೇರಿ  ಅಭಿಪ್ರಾಯ

ವರದಿ :ಝಕರಿಯ ನಾಪೋಕ್ಲು ನಾಪೋಕ್ಲು: ಕೊಡಗಿನಲ್ಲಿ ಸಾಹಿತ್ಯಕ್ಕೆ ನೆಲೆ ಇಲ್ಲ ಬೆಲೆ ಇಲ್ಲ ಎಂದು ಹೇಳುತ್ತಿದ್ದ ಕಾಲ ಒಂದಿತ್ತು. ಈಗ ಕನ್ನಡದ ಜೊತೆ ಜೊತೆಗೆ ಕೊಡವ ಸಾಹಿತ್ಯ ಕೂಡ ಬೆಳೆಯುತ್ತಿದೆ ಮನೆಮನೆಗಳಲ್ಲಿ ಓದುಗರಿದ್ದಾರೆ, ಪುಸ್ತಕ ಭಂಡಾರಗಳಿವೆ ಎಂದು ಸಾಹಿತಿ ಸಿ.ಕೆ ಕಾವೇರಿ ಅಭಿಪ್ರಾಯಪಟ್ಟರು.

ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾಗಿದ್ದ 2025 -26ರ ಸಾಲಿನ ದಿವಂಗತ ಕೆ.ಟಿ. ಸುಬ್ಬರಾವ್ ದತ್ತಿ ಹಾಗೂ ದಿವಂಗತ ದಂಬೆಕೋಡಿ ಚಿಣ್ಣಪ್ಪ ದತ್ತಿ ಉಪನ್ಯಾಸ ಹಾಗೂ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಕೊಡಗಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ವಿಷಯದ ಕುರಿತು ದತ್ತಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಸಾಹಿತಿಗಳು ಕೇವಲ ಮನರಂಜನೆಗಾಗಿ ಬರಹಗಳನ್ನು ಸೀಮಿತಗೊಳಿಸದೆ ಸಮಾಜದ ಮಾರ್ಗದರ್ಶಕರಾಗಿರಬೇಕು. ಬರಹಗಳು ಜನರಲ್ಲಿ ನೈತಿಕತೆ ,ಜ್ಞಾನ ಮತ್ತು ಸಾಮಾಜಿಕ ಜಾಗೃತಿಯನ್ನು ಬೆಳೆಸಿಕೊಳ್ಳಬೇಕು ಸಾಹಿತ್ಯವು ರಾಷ್ಟ್ರಭಕ್ತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿ ಆಗಬೇಕು. ಕೊಡಗಿನ ವಿಶಿಷ್ಟ ಸಂಸ್ಕೃತಿ, ಪರಂಪರೆ ಮತ್ತು ಪ್ರಕೃತಿ ಸೌಂದರ್ಯಕ್ಕೆ ಎಂಥವರನ್ನೂ ಕವಿಯಾಗಿ ಮಾಡುವ ಶಕ್ತಿ ಇದೆ, ಈ ಪವಿತ್ರ ನೆಲದಲ್ಲಿ ಕಾವೇರಿ ನದಿಗೆ ಸಿಕ್ಕಿರುವ ಪೂಜನೀಯ ಸ್ಥಾನ ಕನ್ನಡ ಭಾಷೆಗೂ ದೊರಕುವಂತಾಗಬೇಕು ಎಂದರು.

 9ನೇ ಶತಮಾನದಲ್ಲಿ ರಾಜ್ಯಭಾರ ಮಾಡಿದ ಗಂಗರು, ಕೊಂಗಾಳ್ವರು, ಹೊಯ್ಸಳರು ಹಾಗೂ ಹಾಲೇರಿ ಅರಸರು ಹಳಗನ್ನಡದಲ್ಲಿ ರಚಿಸಿದ ಶಾಸನಗಳು ಕೊಡಗಿನಲ್ಲಿ ಕನ್ನಡದ ಬೆಳವಣಿಗೆಗೆ ನಾಂದಿ ಹಾಡಿತು, ಆನಂತರದ ದಿನಗಳಲ್ಲಿ ಹಲವು ಬರಹಗಾರರು ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ಅಪ್ಪನೆರವಂಡ ಅಪ್ಪಚ್ಚಕವಿ, ಪಂಜೆ ಮಂಗೇಶರಾಯರು ನಡಿಕೇರಿಯಂಡ ಚಿಣ್ಣಪ್ಪ, ಡಾ ಐ.ಮಾ ಮುತ್ತಣ್ಣ ,ಬಿ.ಡಿ. ಗಣಪತಿ, ಬಿ.ಡಿ ಸುಬ್ಬಯ್ಯ ಎಸ್ ಆರ್ ನಾರಾಯಣರಾವ್ ಸೇರಿದಂತೆ ಹಲವರು ಕೊಡಗಿನ ಸಾಹಿತ್ಯದ ಬೆಳವಣಿಗೆ ಕಾರಣಕರ್ತರಾಗಿದ್ದಾರೆ ಎಂದರು.

ಕೊಡಗಿನಲ್ಲಿ ಪತ್ರಿಕೆಗಳು ಕೂಡ ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು ಸಾಹಿತ್ಯ ಪರಿಷತ್ತಿನ ಹಲವು ಸಮ್ಮೇಳನಗಳು ಕೊಡಗಿನಲ್ಲಿ ಆಯೋಜಿಸಲ್ಪಟ್ಟಿದೆ ಕೊಡಗಿನಲ್ಲಿ ಸಾಹಿತ್ಯಕ್ಕೆ ಸಾಕಷ್ಟು ಉತ್ತೇಜನ ಇದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನೇತಾಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಮಾತನಾಡಿ ಕನ್ನಡ ಸ್ನೇಹಜೀವಿ ಭಾಷೆ. ಇದಕ್ಕೆ 2500 ವರ್ಷಗಳ ಇತಿಹಾಸವಿದೆ.ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯನ್ನು ಅಭಿಮಾನದಿಂದ ಬಳಸಬೇಕಾಗಿದೆ ಎಂದರು.

 ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಪ್ರಸ್ತಾವಿಕವಾಗಿ ಮಾತನಾಡಿ ಕನ್ನಡ ನಾಡು ನುಡಿಯ ಪರಂಪರೆಯ ರಕ್ಷಣೆ ಆಗಬೇಕಿದೆ. ಇದಕ್ಕಾಗಿ ಸಾಹಿತ್ಯ ಪರಿಷತ್ತು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ .ಶಾಲೆಗಳಲ್ಲಿ ದತ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಬಗ್ಗೆ ಅಭಿಮಾನ ಮೂಡಿಸುತ್ತಿದೆ. ವರ್ಷದಲ್ಲಿ 42 ದತ್ತಿ ಕಾರ್ಯಕ್ರಮಗಳನ್ನು ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುತ್ತಿದೆ. ವಿದ್ಯಾರ್ಥಿಗಳ ಪ್ರತಿಭೆ ಹೊರತರಲು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆಗೆ ದಿನಪತ್ರಿಕೆಗಳನ್ನು ಓದಬೇಕು. ಹೆಚ್ಚು ಕಲಿತಷ್ಟು ಜ್ಞಾನ ವೃದ್ಧಿಯಾಗುತ್ತದೆ. ಪಠ್ಯಪುಸ್ತಕದ ಹೊರತಾಗಿ ಕಲಿಯುವುದು ಬೇಕಾದಷ್ಟಿದೆ. ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಮಡಿಕೇರಿತಾಲೂಕು ಕನ್ನಡಸಾಹಿತ್ಯಪರಿಷತ್ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ಸ್ಥಳೀಯ ಭಾಷೆ ಸಂಸ್ಕೃತಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವ ಸದುದ್ದೇಶದಿಂದ ಶಾಲೆಗಳಲ್ಲಿ ದತ್ತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವುದರ ಮೂಲಕ ಉತ್ತಮ ಫಲಿತಾಂಶವನ್ನು ತರುವಂತಾಗಬೇಕು ಎಂದರು.

ಕೊಡಗು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ, ಪುದಿಯನೆರವನ ರೇವತಿ ರಮೇಶ್ ,,ನೇತಾಜಿವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಸಿ.ಎಸ್.ಸುರೇಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಂಘಟನಾ ಕಾರ್ಯದರ್ಶಿ ಬಿ.ಎನ್ ವಾಸು ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 2024- 25ರ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಡಿಕೇರಿ ತಾಲೂಕಿಗೆ ಗರಿಷ್ಟ ಅಂಕ ಪಡೆದ ಗಾಳಿಬೀಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕೆ.ಪಿ.ಶ್ರಾವ್ಯ ಅವರಿಗೆ ಗೌರವ ಪುರಸ್ಕಾರ ವಿತರಿಸಲಾಯಿತು. ಶಿಕ್ಷಕ ರವಿಕುಮಾರ್ ಎ ಪೂಜಾರ್ ಸ್ವಾಗತಿಸಿದರು .ಎಂ.ಬಿ. ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಎನ್ .ಕೆ.ಮಹಬೂಬ್ ಸಾಬ್ ವಂದಿಸಿದರು. ವಿದ್ಯಾರ್ಥಿಗಳು ಹಚ್ಚೇವು ಕನ್ನಡದ ದೀಪ ಗೀತೆಯನ್ನು ಹಾಡಿದರು.