ಜಿಲ್ಲಾಡಳಿತದಿಂದ ಅಂಬಿಗರ ಚೌಡಯ್ಯ ಜಯಂತಿ
ಮಡಿಕೇರಿ :-ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ, ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ, ಇಂತೀ ಹಲವು ಚಿಂತೆಯಲ್ಲಿ ಇರ್ಪುವರ ಕಂಡೆನು, ಶಿವನ ಚಿಂತೆಯಲ್ಲಿದ್ದವರೊಬ್ಬರನ್ನೂ ಕಾಣೆನೆಂದಾತ... ಎಂದು ನಿಜಶರಣ ಅಂಬಿಗರ ಚೌಡಯ್ಯ ಅವರು ವಚನದ ಮೂಲಕ ಸಾರಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಸಂದರ್ಭದಲ್ಲಿ ನಗರದ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಶ್ರುತಿಶ್ರೀ ಡಿ. ಅವರು ವಾಚಿಸಿದರು.
12 ನೇ ಶತಮಾನದಲ್ಲಿ ಬಸವಣ್ಣ ಅವರು ಸೇರಿದಂತೆ ಎಲ್ಲಾ ವಚನಕಾರರ ಬಗ್ಗೆ ಮಾಹಿತಿ ತಿಳಿದುಕೊಳ್ಳುವಂತಾಗಬೇಕು. ಅಂಬಿಗರ ಚೌಡಯ್ಯ ಅವರು ಸಮಾಜಕ್ಕೆ ನೀಡಿರುವ ಸುಧಾರಣೆ ಮತ್ತು ಸಂದೇಶಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಹೇಳಿದರು.
ಹನ್ನೆರಡನೇ ಶತಮಾನದಲ್ಲಿ ಬಂದ ಶರಣರು ಭಾಷಿಕವಾಗಿ, ಧಾರ್ಮಿಕವಾಗಿ, ತಾತ್ವಿಕವಾಗಿ, ಸಾಮಾಜಿಕವಾಗಿ ಬಹಳ ಅಪರೂಪದ ಕ್ರಾಂತಿಯನ್ನೇ ಮಾಡಿದರು. ಬಸವಣ್ಣನವರ ನೇತೃತ್ವದಲ್ಲಿ ಅವರು ಹುಟ್ಟು ಹಾಕಿದ ಮಹಾಮನೆ, ದಾಸೋಹ, ಇಷ್ಟಲಿಂಗ, ಕಾಯಕದಂತಹ ಪರಿಕಲ್ಪನೆಗಳು ಜಗತ್ತಿನ ಯಾವ ಗ್ರಂಥದಲ್ಲೂ ಸಿಗುವುದಿಲ್ಲ. ಅವರು ತಮ್ಮ ಅಂತರಂಗವನ್ನು ಶುದ್ಧಗೊಳಿಸುತ್ತ ಸಮಾಜವನ್ನು ತಿದ್ದಿದವರು ಎಂದು ನುಡಿದರು.
ಶತಶತಮಾನಗಳಿಂದಲೂ ಹತ್ತಾರು ರೀತಿಯ ಮೌಢ್ಯಗಳನ್ನು ಹೊತ್ತು ನಲುಗುತ್ತಿದ್ದ ಸಮಾಜಕ್ಕೆ ವೈಚಾರಿಕತೆಯನ್ನು ಕೊಟ್ಟ ಕ್ರಾಂತಿವೀರರು ನಮ್ಮ ಶರಣರು. ಅಂತಹ ಕ್ರಾಂತಿಕಾರಿ ಶರಣರಲ್ಲಿ ಎದ್ದು ಕಾಣುವ ಹೆಸರು ಅಂಬಿಗರ ಚೌಡಯ್ಯನವರು ಎಂದು ವಿವರಿಸಿದರು.
ಅಂಬಿಗ ಎನ್ನುವ ಪರಿಕಲ್ಪನೆಯೇ ಬಹಳ ವಿಶೇಷವಾದುದು. ಅದು ಹೊಳೆಯನ್ನು ದಾಟಿಸುವ ಅಣ್ಣನೊಬ್ಬನ ಉಪಕಾರ. ಹಾಗೆಯೇ ಭವದ ಹೊಳೆಯನ್ನು ದಾಟಿಸಿ ಸುರಕ್ಷಿತವಾದ ದಡವನ್ನು ಸೇರಿಸುವ ಯೋಗಿಯೊಬ್ಬನ ತಾತ್ವಿಕ ಅನುಸಂಧಾನವೂ ಹೌದು. ಅಂಬಿಗ ನಾ ನಿನ್ನ ನಂಬಿದೆ ಎನ್ನುವಲ್ಲಿ ನಂಬುವವರನ್ನು ದಡ ಸೇರಿಸುವ ಉಪಕಾರಿಯಾಗಿ ಕಾಣುವ ಈ ಕಲ್ಪನೆ ನಮ್ಮ ದೇಶದಲ್ಲಿ ಬಹಳ ವಿಶಿಷ್ಟವಾದುದು.
ತಹಶೀಲ್ದಾರರಾದ ಶ್ರೀಧರ್ ಅವರು ಮಾತನಾಡಿ ಜಗತ್ತಿನಲ್ಲಿ ಮೊದಲ ಬಾರಿಗೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶರಣರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಸಮಾಜದಲ್ಲಿನ ಮೌಢ್ಯಗಳನ್ನು ಹೋಗಲಾಡಿಸಿ ಸಮಾನತೆಯ ಆಂದೋಲನವನ್ನೇ ಹುಟ್ಟು ಹಾಕಿದ ನಿಜ ಚಳುವಳಿ ಎಂದರೆ ಅದು ವಚನ ಚಳುವಳಿ ಎಂದು ಅವರು ವರ್ಣಿಸಿದರು.
ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು, ನಂಬಿದರೆ ಒಂದೆ ಹುಟ್ಟಲಿ ಕಡೆಯ ಹಾಯಿಸುವನಂಬಿಗರ ಚೌಡಯ್ಯ ಎಂದು ಹೇಳುತ್ತಾರೆ ಎಂದು ನುಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಅವರು ಮಾತನಾಡಿ ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಮೋಳಿಗೆ ಮಾರಯ್ಯ, ಮಡಿವಾಳ ಮಾಚಯ್ಯ, ಕುಂಬಾರ ಗುಂಡಯ್ಯ, ಮಾದಾರ ಚೆನ್ನಯ್ಯ, ಸೂಳೆ ಸಂಕವ್ವೆಯವರೆಗೂ ತಮ್ಮ ವೃತ್ತಿಗಳನ್ನು ಹೇಳಿಕೊಳ್ಳುವ ಈ ಪರಂಪರೆ ಎಷ್ಟೊಂದು ಅದ್ಭುತ ಎಂದರು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪದ್ಮಾವತಿ ಇತರರು ಇದ್ದರು. ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು, ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.