ಮೂರು ತಿಂಗಳಿಂದ ಅಂಗನವಾಡಿ ಕಾರ್ಯಕರ್ತರಿಗೆ ಪಾವತಿಯಾಗದ ವೇತನ

Jan 20, 2026 - 17:06
 0  895
ಮೂರು ತಿಂಗಳಿಂದ ಅಂಗನವಾಡಿ ಕಾರ್ಯಕರ್ತರಿಗೆ ಪಾವತಿಯಾಗದ ವೇತನ
ಸುಮಿತ್ರ

ಗೋಣಿಕೊಪ್ಪ: ಅಂಗನವಾಡಿ ಕಾರ್ಯಕರ್ತರಿಗೆ ಮೂರು ತಿಂಗಳಿಂದ ವೇತನ ಪಾವತಿಯಾಗುತ್ತಿಲ್ಲ ಎಂದು ಕಾರ್ಯಕರ್ತರು ತಮ್ಮ ಆರ್ಥಿಕ ಸಂಕಷ್ಟವನ್ನು ಬಹಿರಂಗಪಡಿಸಿದ್ದಾರೆ.

ಈ ವಿಚಾರವಾಗಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷ ಸುಮಿತ್ರ ಮಾತನಾಡಿ, ಕಳೆದ ಮೂರು ತಿಂಗಳಿಂದ ಅಂಗನವಾಡಿ ಕಾರ್ಯಕರ್ತರಿಗೆ ವೇತನ ಪಾವತಿಯಾಗುತ್ತಿಲ್ಲ. ಇದರಿಂದ, ಕೌಟುಂಬಿಕ ಬದುಕಿಗೆ ಆರ್ಥಿಕ ಹಿನ್ನಡೆ ತಂದಿದೆ. ಇದು ಮಾನಸಿಕ ತೊಳಲಾಟಕ್ಕೂ ಕಾರಣವಾಗಿದೆ. ವೇತನ ವಿಚಾರವಾಗಿ ಒಂದು ತಿಂಗಳ ಸಮಯವನ್ನು ಮುಂದೂಡಬಹುದು. ಆದರೆ, ನಿರಂತರ ಮೂರು ತಿಂಗಳು ವೇತನ ಇಲ್ಲದೆ ಇರುವುದು ಸಂಕಷ್ಟದ ಬದುಕಿನೊಳಗೆ ಕಾರ್ಯಕರ್ತರನ್ನು ತಳ್ಳಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಂಗನವಾಡಿ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳು, ಕಚೇರಿ ಸಭೆಗಳು ಎಂದು ಅಂಗನವಾಡಿ ಶಿಕ್ಷಕರು ಮತ್ತು ಸಹಾಯಕರು ಕೆಲಸದ ಜವಾಬ್ದಾರಿಯ ಒತ್ತಡದಲ್ಲಿ ಇರುತ್ತಾರೆ. ಆದರೆ ಸಂಬಳ ಬಾರದಿರುವುದು ಕರ್ತವ್ಯ ನಿರ್ವಹಿಸಲು ಕೆಲವರಿಗೆ ಹಿನ್ನಡೆಯಾಗುತ್ತಿದೆ ಎಂದು ವೇತನ ಪಾವತಿ ಆಗದಿರುವ ಸಂಕಷ್ಟದ ಸ್ಥಿತಿಯ ಗಾಂಭೀರ್ಯತೆಯನ್ನು ತಿಳಿಸಿದರು.

ಸಹಾಯಕಿಯರು ಮೂರು ತಿಂಗಳ ಹಣ ಬಾರದೆ ಇರುವುದರಿಂದ ಕಾಫಿ ಕೊಯ್ಲುಲು ಕಡೆ ತೆರಳುತ್ತಿದ್ದಾರೆ. ಈ ಸಂದರ್ಭ ಅಂಗನವಾಡಿಯನ್ನು ನಿಯಂತ್ರಿಸುವುದು ಅಸಾಧ್ಯವಾಗಿದೆ. ತುರ್ತು ಸಭೆಗಳು ಮತ್ತು ಇನ್ನಿತರ ಕಾರ್ಯ ಚಟುವಟಿಕೆಗಳಿಗೆ ಇಲಾಖೆ ಕಚೇರಿಗೆ ಶಿಕ್ಷಕರು ತೆರಳಿದಾಗ ಅಂಗನವಾಡಿಯನ್ನು ನಿಯಂತ್ರಿಸುವುದು ಅಸಾಧ್ಯ ಸಾಧನೆಯಾಗುತ್ತಿದೆ.

ಸಹಾಯಕಿಯರು ಇಲ್ಲದೆ, ಶಿಕ್ಷಕಿಯರು ಇಲ್ಲದೆ ಅಂಗನವಾಡಿ ಕಾರ್ಯ ನಿರ್ವಹಿಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಸರಿಯಾದ ಸಮಯಕ್ಕೆ ವೇತನ ಪಾವತಿಯಾದರೆ ಈ ಸಮಸ್ಯೆ ಎದುರಾಗುವುದಿಲ್ಲ ಎಂದು ತಿಳಿಸಿದರು. ಸರ್ಕಾರ ಅಂಗನವಾಡಿ ಕಾರ್ಯಕರ್ತರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಬೇಕು ಎಂದು ಮನವಿ ಮಾಡಿದರು. ಕಾರ್ಯದರ್ಶಿ ನಳಿನಾಕ್ಷಿ, ಖಜಾಂಜಿ ರಾಜೇಶ್ವರಿ ಇದ್ದರು.

What's Your Reaction?

Like Like 1
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 0