ನಾಪೋಕ್ಲುವಿನಲ್ಲಿ ಪ್ರಾಥಮಿಕ ಹೋಬಳಿ ಮಟ್ಟದ ಶಾಲಾ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ; ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವುದು ಮುಖ್ಯ-ಕೆ.ಎ.ಹಾರಿಸ್
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು: ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವುದು ಮುಖ್ಯ ಎಂದು ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಸಿವಿಲ್ ಕಾಮಗಾರಿ ಉಪ ಸಮಿತಿ ಅಧ್ಯಕ್ಷ ಕೆ.ಎ. ಹಾರಿಸ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಡಿಕೇರಿ ತಾಲೂಕು ಕೊಡಗು ಜಿಲ್ಲೆ ಮತ್ತು ಕುಂಜಿಲ ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲುವಿನ ಕೆ.ಪಿ.ಎಸ್. ಶಾಲಾ ಆಟದ ಮೈದಾನದಲ್ಲಿ ನಡೆದ 2026- 27ನೇ ಸಾಲಿನ ನಾಪೋಕ್ಲು ಪ್ರಾಥಮಿಕ ಹೋಬಳಿ ಮಟ್ಟದ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಅವರು
ಪ್ರಾಥಮಿಕ ವಿಭಾಗ ಆಟ ಪಾಠಗಳ ಸುಂದರ ಸಂಗಮ,ಓದು ಮೆದುಳಿಗೆ ಜ್ಞಾನ ತುಂಬಿದರೆ, ಕ್ರೀಡೆ ದೇಹಕ್ಕೆ ಬಲ ತುಂಬುತ್ತದೆ ಮತ್ತು ಮನಸ್ಸಿಗೆ ಮನೋಲ್ಲಾಸ ನೀಡುತ್ತದೆ.
ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶಿಸ್ತು, ಬಾಂಧವ್ಯ, ಸಮಯ ಪಾಲನೆ ತಾನಾಗಿಯೇ ಮೈಗೂಡಿಕೊಳ್ಳುತ್ತದೆ.ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯ ಅಲ್ಲ ಭಾಗವಹಿಸುವಿಕೆ ಮುಖ್ಯ, ವಿಜೇತರು ಸಂಭ್ರಮಿಸಿದರೆ ಸೋತವರಿಗೆ ಒಂದು ಪಾಠ ಕೂಡ,
ಕ್ರೀಡೆಯಲ್ಲಿ ನಿರಂತರ ಶ್ರಮ ಹಾಗೂ ಧನಾತ್ಮಕ ಮನೋಭಾವದ ಅಗತ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಶುಭ ಹಾರೈಸಿದರು.
ಆಕ್ಸ್‌ಫರ್ಡ್ ಶಾಲೆಯ ಅಧ್ಯಕ್ಷರಾದ ಮೆಹಬೂಬ್ ಸಾಬ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡಾಕೂಟದ ಉದ್ದೇಶ ಹಾಗೂ ಶಾಲಾ ಹಂತದಲ್ಲಿ ಕ್ರೀಡೆಯ ಮಹತ್ವವನ್ನು ತಿಳಿಸಿಕೊಟ್ಟು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ನುಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾದ ಶಾಹಿದ್ ಅಲಿ ಅವರು ಮಾತನಾಡಿ, "ಶಿಕ್ಷಣದ ಜೊತೆಗೆ ಕ್ರೀಡೆಯು ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕ. ವಿದ್ಯಾರ್ಥಿಗಳು ಸೋಲು-ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಸಾಧನೆಯತ್ತ ಸಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮವು ಕ್ರೀಡಾಜ್ಯೋತಿಯ ಪ್ರಜ್ವಲನೆ ಹಾಗೂ ಕ್ರೀಡಾಪಟುಗಳ ಆಕರ್ಷಕ ಪಥ ಸಂಚಲನದ ಮೂಲಕ ವೈಭವೋಪೇತವಾಗಿ ಚಾಲನೆ ಪಡೆಯಿತು. ಕ್ರೀಡಾಪಟುಗಳು ಕ್ರೀಡಾ ನಿಯಮಗಳನ್ನು ಗೌರವಿಸಿ, ಪ್ರಾಮಾಣಿಕತೆಯಿಂದ ಸ್ಪರ್ಧಿಸುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಕಾರ್ಯಕ್ರಮದ ಮೊದಲಿಗೆ ಕುಂಜಿಲ ಆಕ್ಷ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶಬ್ರೀನ್ ಫಾತಿಮಾ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವ ಅತಿಥಿಗಳನ್ನು ಹಾಗೂ ಕ್ರೀಡಾಪಟುಗಳನ್ನು ಆದರದಿಂದ ಸ್ವಾಗತಿಸಿದರು.
ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಧನ್ಯ ಅವರು ಕಾರ್ಯಕ್ರಮದ ಕೊನೆಯಲ್ಲಿ ಕೃತಜ್ಞತಾ ಪೂರ್ವಕ ವಂದನಾರ್ಪಣೆ ಸಲ್ಲಿಸಿದರು. ತದನಂತರ ವಿದ್ಯಾರ್ಥಿಗಳ ವಿವಿಧ ಕ್ರೀಡಾ ಸ್ಪರ್ಧೆಗಳು ಅತ್ಯಂತ ಪ್ರೋತ್ಸಾಹದಾಯಕ ವಾತಾವರಣದಲ್ಲಿ ಯಶಸ್ವಿಯಾಗಿ ಜರುಗಿದವು.
ಕ್ರೀಡಾಕೂಟದಲ್ಲಿ ನಾಪೋಕ್ಲು ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
