ಕುಡ್ಪಿ ಅರವಿಂದ ಶೆಣೈ ಅವರಿಂದ ಅಮ್ಮತ್ತಿ–ಪಾಲಿಬೆಟ್ಟ ಲಯನ್ಸ್ ಕ್ಲಬ್‌ಗಳಿಗೆ ವಾರ್ಷಿಕ ಭೇಟಿ
ಸಿದ್ದಾಪುರ: ಅಮ್ಮತ್ತಿ–ಪಾಲಿಬೆಟ್ಟ ಲಯನ್ಸ್ ಕ್ಲಬ್‌ಗಳ ವಾರ್ಷಿಕ ಭೇಟಿ ಕಾರ್ಯಕ್ರಮವು ಪಾಲಿಬೆಟ್ಟ ಅನುಗ್ರಹ ಲಯನ್ಸ್ ಭವನದಲ್ಲಿ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ವಿಶ್ವದ 210ಕ್ಕೂ ಹೆಚ್ಚು ದೇಶಗಳಲ್ಲಿ ಸೇವಾ ಕಾರ್ಯ ನಡೆಸುತ್ತಿರುವ ಮಹತ್ವದ ಸಂಸ್ಥೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಕ್ಲಬ್‌ಗಳು ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಮತ್ತು ಪರಿಸರ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಐವತ್ತು ವರ್ಷ ಪೂರೈಸಿರುವ ಪಾಲಿಬೆಟ್ಟ ಲಯನ್ಸ್ ಕ್ಲಬ್ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು.
ಅಮ್ಮತ್ತಿ ಲಯನ್ಸ್ ಕ್ಲಬ್ ಕೂಡ ಕಳೆದ ಎಂಟು ವರ್ಷಗಳಿಂದ ಉತ್ತಮ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾಲಿಬೆಟ್ಟ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಎಸ್. ಸುಬ್ರಮಣಿ ಮಾತನಾಡಿ, ಸದಸ್ಯರ ಸಹಕಾರದಿಂದ ಆರೋಗ್ಯ ಶಿಬಿರಗಳು, ಶಿಕ್ಷಣ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು. ಇದೇ ವೇಳೆ ಪಾಲಿಬೆಟ್ಟ ಹಾಗೂ ಅಮ್ಮತ್ತಿ ಲಯನ್ಸ್ ಕ್ಲಬ್ ವತಿಯಿಂದ ಗವರ್ನರ್ ಕುಡ್ಪಿ ಅರವಿಂದ ಶೆಣೈ ಹಾಗೂ ಮಮತಾ ಶೆಣೈ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂತ್ಯ ಅಧ್ಯಕ್ಷ ಡಾ. ಕೋಟೆರ ಪಂಚಮ್ ತಿಮ್ಮಯ್ಯ, ಅಮ್ಮತ್ತಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಎಸ್. ಪೂಣಚ್ಚ, ಕಾರ್ಯದರ್ಶಿ ಯು.ಟಿ. ಕಾರ್ಯಪ್ಪ, ಖಜಾಂಚಿ ಕೋಡೀರ ದಿನೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.