ಅನುದಾನಿತ ಕಾಲೇಜುಗಳ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ
ವಿರಾಜಪೇಟೆ : ಸರ್ಕಾರಿ ಕಾಲೇಜುಗಳಿಗೆ ನಿಯೋಜನೆ ಸೇರಿದಂತೆ, ಅನುದಾನಿತ ಕಾಲೇಜುಗಳ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಸೋಮವಾರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಖಜಾಂಚಿ ಡಾ. ಹೇಮಂತ್ ಕುಮಾರ್ ಅವರು ಮಾತನಾಡಿ, ಕಾರ್ಯಭಾರದ ಕೊರತೆಯಿರುವ ಅನುದಾನಿತ ಕಾಲೇಜುಗಳ ಉಪನ್ಯಾಸಕರನ್ನು ಕಾರ್ಯಭಾರ ಹೊಂದಿರುವ ಕಾಲೇಜುಗಳಿಗೆ ನಿಯೋಜಿಸಲಾಗುತ್ತಿದೆ. ಇದರಿಂದ ಕೆಲ ಉಪನ್ಯಾಸಕರು ವಾರದ 3 ದಿನಗಳು ಸಾಕಷ್ಟು ದೂರದ ಊರುಗಳಲ್ಲಿನ ಅನುದಾನಿತ ಕಾಲೇಜಿಗೆ ತೆರಳಿ ಕಾರ್ಯನಿರ್ವಹಿಸುವಂತಾಗಿದೆ. ಕೆಲ ಉಪನ್ಯಾಸಕರಿಗೆ ನಿಯೋಜನೆ ಸ್ಥಳಾವಕಾಶವು ಇಲ್ಲವಾಗಿದೆ. ಆದ್ದರಿಂದ ನಿಗದಿತ ಕಾರ್ಯಭಾರವಿಲ್ಲದ ಉಪನ್ಯಾಸಕರನ್ನು ಈ ಹಿಂದೆ ಇದ್ದಂತೆ ಸಮೀಪದ ಸರ್ಕಾರಿ ಕಾಲೇಜುಗಳಿಗೆ ನಿಯೋಜಿಸಿದರೆ ಉಪನ್ಯಾಸಕರಿಗೆ ಅನುಕೂಲವಾಗಲಿದೆ. ಇದರಿಂದ ಸರ್ಕಾರಕ್ಕೂ ಆರ್ಥಿಕ ಹೊರೆ ಆಗುವುದಿಲ್ಲ ಎಂದರು.
ಜಿಲ್ಲಾ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿ ಮಾಲೇಟಿರ ರಶ್ಮಿ ಅವರು ಮಾತನಾಡಿ, ಅನುದಾನಿತ ಕಾಲೇಜಿನ ಉಪನ್ಯಾಸಕರ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.
ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಈ ಕುರಿತು ಸಚಿವರೊಂದಿಗೆ ಮಾತನಾಡಿ, ಈ ಕುರಿತ ಸರ್ಕಾರದ ಚಿಂತನೆಯನ್ನು ಅರಿತು, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಸಂಘದ ಪದಾಧಿಕಾರಿಗಳಾದ ಜೋಮನ್ ಥೋಮಸ್, ನೋಹ ವಿವೇಕ್ ಹಾಗೂ ನಾಚಪ್ಪ ಅವರು ಉಪಸ್ಥಿತರಿದ್ದರು.