ಮಾಲಂಬಿಯಲ್ಲಿ ವಾಲಿಬಾಲ್ ಅಂಕಣಕ್ಕೆ ಆಸ್ಟ್ರೋ ಟರ್ಫ್: ಶಾಸಕ ಮಂತರ್ ಗೌಡ ವೈಯಕ್ತಿಕ ಕೊಡುಗೆ
ಶನಿವಾರಸಂತೆ, ಜೂ. 22: ಕ್ರೀಡಾ ಕ್ಷೇತ್ರದ ಅಭಿವೃದ್ಧಿ ಹಾಗೂ ಯುವ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಮಾಲಂಬಿ ಗ್ರಾಮದ ವಾಲಿಬಾಲ್ ಅಂಕಣಕ್ಕೆ ಆಸ್ಟ್ರೋ ಟರ್ಫ್ ಅಳವಡಿಸಲು ವೈಯಕ್ತಿಕವಾಗಿ 2.20 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ.
ಆಲೂರುಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಾಲಂಬಿ ಗ್ರಾಮದ ಯುವಕ ಸಂಘದ ಆಟದ ಮೈದಾನದಲ್ಲಿ ಉತ್ತಮ ಗುಣಮಟ್ಟದ ಆಸ್ಟ್ರೋ ಟರ್ಫ್ ಅಳವಡಿಕೆ ಹಾಗೂ ಇಂಟರ್ಲಾಕ್ ಕಾಮಗಾರಿಗೆ ಶಾಸಕರು ಹಣ ನೀಡಿದ್ದಾರೆ. ಈಗಾಗಲೇ ಟರ್ಫ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ಇಂಟರ್ಲಾಕ್ ಅಳವಡಿಕೆ ಕಾಮಗಾರಿ ಮಾತ್ರ ಬಾಕಿ ಇದೆ. ಶೀಘ್ರದಲ್ಲೇ ಮೈದಾನ ಸುಸಜ್ಜಿತ ವಾಲಿಬಾಲ್ ಅಂಕಣವಾಗಿ ಸಿದ್ಧವಾಗಲಿದೆ.
ಪ್ರತಿ ನಿತ್ಯ ಯುವಕರು ಇಲ್ಲಿ ವಾಲಿಬಾಲ್ ಆಡುತ್ತಿದ್ದು, ಪ್ರತಿ ವರ್ಷ ಕ್ರೀಡಾಕೂಟವನ್ನೂ ಆಯೋಜಿಸುತ್ತಿದ್ದಾರೆ. ಮೈದಾನ ಅಭಿವೃದ್ಧಿಗೆ ಮನವಿ ಮಾಡಿದ್ದ ಯುವ ಸಮೂಹ ಈಗ ಶಾಸಕರಿಗೆ ಅಭಿನಂದನೆ ಸಲ್ಲಿಸಿದೆ ಎಂದು ಆಲೂರು ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ, ಗ್ರಾ.ಪಂ. ಮಾಜಿ ಅಧ್ಯಕ್ಷ ಅಶೋಕ್ ಎಂ.ವಿ. ತಿಳಿಸಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ್ದಾಗ ಮೈದಾನ ಅಭಿವೃದ್ಧಿಪಡಿಸುವುದಾಗಿ ಶಾಸಕರು ಭರವಸೆ ನೀಡಿದ್ದರು. ಅದರಂತೆ ನಿರೀಕ್ಷೆಗೂ ಮೀರಿ ಮೈದಾನ ನಿರ್ಮಾಣ ಮಾಡಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹೆಚ್.ಟಿ. ಕೋಮರಪ್ಪ ಗ್ರಾಮಸ್ಥರ ಪರವಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

