ಕೋವಿಯಿಂದ ಗುಂಡಿಕ್ಕಿ ಕೊಲೆ ಯತ್ನ ಹಾಗೂ, ಜಾತಿ ನಿಂದನೆ : ಶಿಕ್ಷೆ ಪ್ರಕಟ

Apr 29, 2026 - 10:44
 0  1.3k
ಕೋವಿಯಿಂದ ಗುಂಡಿಕ್ಕಿ ಕೊಲೆ ಯತ್ನ ಹಾಗೂ, ಜಾತಿ ನಿಂದನೆ : ಶಿಕ್ಷೆ ಪ್ರಕಟ

ಮಡಿಕೇರಿ,ಏ. 28: ಕೋವಿಯಿಂದ ಗುಂಡಿಕ್ಕಿ ಕೊಲೆ ಯತ್ನ ಹಾಗೂ ಜಾತಿ ನಿಂದನೆ ಮಾಡಿದ ಆರೋಪದಡಿ ವಿಚಾರಣೆ ಎದುರಿಸುತ್ತಿದ್ದ ವ್ಯಕ್ತಿಗೆ ನ್ಯಾಯಾಲಯ ಜೈಲು ಶಿಕ್ಷೆಯೊಂದಿಗೆ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಡಿ. ಸುಜಿತ್ ಎಂಬಾತನ ಮೇಲೆ ಕೊಲೆ ಯತ್ನ ಹಾಗೂ ಜಾತಿ ನಿಂದನೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆ ಪಿ.ಎಂ. ಗಣಪತಿ ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ.

ತಾ. 20.10.2019 ರಂದು ಡಿ. ಸುಜಿತ್ ಹಾಗೂ ಇತರರು ಕಕ್ಕೆಹೊಳೆ ಗ್ರಾಮದಲ್ಲಿ ಮಾತನಾಡಿಕೊಂಡು ನಿಂತಿರುವ ಸಂದರ್ಭದಲ್ಲಿ ಪಿ.ಎಂ. ಗಣಪತಿ ತನ್ನ ಕಾರಿನಲ್ಲಿ ಅಲ್ಲಿಗೆ ಬಂದು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಸುಜಿತ್ ಬೈದಿರುವುದನ್ನು ಖಚಿತಪಡಿಸಿಕೊಳ್ಳಲು ಮಾತನಾಡಿದ ಸಂದರ್ಭ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದೆ. ಅನಂತರ ಗಣಪತಿ ಕೋವಿ ಸಹಿತ ಕಾರಿನಲ್ಲಿ ಬಂದು ಸುಜಿತ್‌ಗೆ ಗುಂಡಿಕ್ಕಿ ಗಾಯಗೊಳಿಸಿದ್ದಾನೆ.

 ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಪ್ರಾಣಾಪಾಯದಿಂದ ಪಾರಾದ ಸುಜಿತ್ ಈ ಸಂಬಂಧ ದೂರು ನೀಡಿದ್ದರು. ಇದರನ್ವಯ ತನಿಖೆ ಕೈಗೊಂಡ ಅಂದಿನ ಸೋಮವಾರಪೇಟೆ ಡಿವೈಎಸ್‌ಪಿ ಪಿ.ಕೆ. ಮುರುಳೀಧರ್ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಮಡಿಕೇರಿಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ. ಸುರೇಂದ್ರ ಅವರು ವಿಚಾರಣೆ ನಡೆಸಿ ಕೊಲೆಯತ್ನ ಅಪರಾಧಕ್ಕಾಗಿ 10 ವರ್ಷಗಳ ಶಿಕ್ಷೆ, ಜಾತಿನಿಂದನೆಗಾಗಿ ತಲಾ 2 ವರ್ಷಗಳ ಶಿಕ್ಷೆ ಮತ್ತು ಒಟ್ಟು ರೂ. 26 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ದಂಡದ ಹಣವನ್ನು ಸುಜಿತ್ ಅವರಿಗೆ ನೀಡಬೇಕೆಂದು ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್‌ ಪರ ಸರಕಾರಿ ಅಭಿಯೋಜಕ ಎನ್‌.ಪಿ. ದೇವೇಂದ್ರ ವಾದ ಮಂಡಿಸಿದರು.

What's Your Reaction?

Like Like 0
Dislike Dislike 0
Love Love 3
Funny Funny 2
Angry Angry 0
Sad Sad 0
Wow Wow 0