ಮನುಕುಲದ ಒಳಿತಿಗೆ ಪ್ರಕೃತಿ ಸಂರಕ್ಷಿಸಲು ಭಾರತೀಯ ಶಿಕ್ಷಣ ಮಂಡಲ ಅಧ್ಯಕ್ಷ ಬಿ.ಆರ್.ಶಂಕರಾನಂದ್ ಕರೆ: ಕೊಡಗು ವಿವಿಯಲ್ಲಿ ಜೀವವೈವಿಧ್ಯ ಸಂರಕ್ಷಣೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ಮನುಕುಲದ ಒಳಿತಿಗೆ ಪ್ರಕೃತಿ ಸಂರಕ್ಷಿಸಲು  ಭಾರತೀಯ ಶಿಕ್ಷಣ ಮಂಡಲ ಅಧ್ಯಕ್ಷ ಬಿ.ಆರ್.ಶಂಕರಾನಂದ್ ಕರೆ:  ಕೊಡಗು ವಿವಿಯಲ್ಲಿ  ಜೀವವೈವಿಧ್ಯ ಸಂರಕ್ಷಣೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ಕುಶಾಲನಗರ : ಪ್ರಕೃತಿಯನ್ನು ತಾಯಿಯಂತೆ ಪೂಜಿಸಿ ಆರಾಧಿಸಿದಲ್ಲಿ ಮಾತ್ರ ಜೀವ ವೈವಿಧ್ಯತೆ ಸಂರಕ್ಷಿಸಲು ಸಾಧ್ಯ ಎಂದು ಭಾರತೀಯ ಶಿಕ್ಷಣ ಮಂಡಲ ಅಧ್ಯಕ್ಷ ಬಿ.ಆರ್. ಶಂಕರಾನಂದ ಆಶಿಸಿದರು.

ಕೊಡಗು ವಿಶ್ವವಿದ್ಯಾಲಯದ ಹಾರಂಗಿ ಸಭಾಂಗಣದಲ್ಲಿ ಸೋಮವಾರ " ಹಸಿರು ಸಂರಕ್ಷಣೆಯಲ್ಲಿ ಕೊಡಗಿನ ಜೀವವೈವಿಧ್ಯ " ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಸ್ವಾರ್ಥದಿಂದಾಗಿ ಪ್ರಕೃತಿ ಇಂದು ವಿನಾಶದ ಅಂಚಿನಲ್ಲಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಮೇಲಾಗುತ್ತಿರುವ ಅತ್ಯಾಚಾರದಿಂದಾಗಿ ಪ್ರಕೃತಿ ಮುನಿಯತೊಡಗಿದ್ದು, ಭೂಕಂಪ, ಪ್ರವಾಹಗಳು ಮನುಷ್ಯನ ನೆಮ್ಮದಿ ಹಾಳಾಗಿದೆ. ಆದರೂ ಕೂಡ ಪಾಠ ಕಲಿಯದ ಮನುಷ್ಯ ತನ್ನ ವೈಭೋಗದ ಜೀವನ ಶೈಲಿಗೆ ಪ್ರಕೃತಿಯನ್ನು ಮನಬಂದಂತೆ ದುರ್ಬಳಕೆ ಮಾಡತೊಡಗಿದ್ದಾನೆ.

 ಕರವಸ್ತ್ರವನ್ನು ಹೊಂದದೇ ಟಿಷ್ಯು ಸಂಸ್ಕೃತಿಯಿಂದಾಗಿ ಹೇರಳವಾಗಿ ಮರಗಳ ಹನನವಾಗುತ್ತಿದೆ. ದೇವರು ನಮಗೆ ಕೊಟ್ಟಿರುವ ಐದು ಕೈಬೆರಳುಗಳ ಬದಲಾಗಿ ಚಮಚಗಳ (ಸ್ಪೂನ್) ಬಳಕೆಯಿಂದಾಗಿಯೂ ಮರಹನನವಾಗುತ್ತಿದೆ. ಹಾಗಾಗಿ ಪ್ರಕೃತಿಯ ಸೂಕ್ಷ್ಮತೆ ಅರಿಯದ ಮನುಷ್ಯ ತಾನು ಮಾಡುವ ಪ್ರತಿಯೊಂದು ಸಣ್ಣ ತಪ್ಪುಗಳಿಂದ ಪ್ರಕೃತಿ ಬಳಲುತ್ತಿದೆ. ಹಾಗಾಗಿ ನಾವುಗಳು ಪ್ರಕೃತಿಯ ಮೇಲೆ ಸೂಕ್ಷ್ಮಸಂವೇದನೆ ಹೊಂದುವ ಮೂಲಕ, ಅದನ್ನು ಮಾತೃ ಸ್ವರೂಪದಲ್ಲಿ ಪೂಜಿಸುವ ಮೂಲಕ ಸಂರಕ್ಷಿಸಬೇಕಿದೆ. ಅಂತರಿಕ್ಷದ ಶಾಂತಿ ಹಾಗೂ ವಿಶ್ವಶಾಂತಿ ಗಿಂತಲೂ ಪ್ರಮುಖವಾಗಿ ಮನುಷ್ಯನಲ್ಲಿ ಆಂತರಿಕ ಶಾಂತಿ ಭಾರತೀಯರ ಕರ್ತವ್ಯವಾಗಬೇಕಿದೆ.

ಜನರನ್ನು ಬಲಿ ಪಡೆವ ಮದ್ದು ಗುಂಡುಗಳು, ಬಾಂಬುಗಳ ಸದ್ದು ಅಡಗಲು ಶಾಂತಿ ಮಂತ್ರ ಎಲ್ಲೆಡೆ ಮೊಳಗಬೇಕಿದೆ ಎಂದು ಶಂಕರಾನಂದ್ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಇರುವ ಪಶ್ಚಿಮ ಘಟ್ಟಗಳ ಸಾಲುಗಳು ಸೇರಿದಂತೆ ಕೊಡಗಿನ ಜನರು ಬೆಳೆಸಿ ಸಂರಕ್ಷಿಸಿರುವ ಹಸಿರಿನ ಸಮೃದ್ದ ಜೀವ ವೈವಿಧ್ಯವು ಅರ್ಧ ಭಾರತ ದೇಶಕ್ಕೆ ಶುದ್ಧ ಗಾಳಿಯನ್ನು ನೀಡಲು ಸಾಧ್ಯವಾಗುತ್ತಿದೆ. ಕೊಡಗಿನ ಪರಿಸರ, ಜೀವ ಜಲದ ಸಂರಕ್ಷಣೆಯಲ್ಲಿ ಕೊಡಗಿನ ಜನರಲ್ಲಿ ಇರುವ ಸದ್ಭಾವನೆ ಹಾಗೂ ಸತ್ಪಾತ್ರ ಇಡೀ ಮನುಕುಲಕ್ಕೆ ಮಾದರಿಯಾಗಬೇಕಿದೆ.

 ದೇಶಸೇವೆಗೆ ವೀರಯೋಧರನ್ನು ಕೊಟ್ಟ ಕೊಡಗು ನಾಡಿಗೂ ಕಾವೇರಿ ನದಿಯ ಮೂಲಕ ಶುದ್ಧ ಜೀವ ಜಲ ಪೂರೈಸುತ್ತಿದೆ ಎಂದರು.

 ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಚೇರ್ಮನ್ ಡಾ.ಎ.ಹೆಚ್.ರಾಜಾಸಾಬ್ ಮಾತನಾಡಿ, ಕೊಡಗಿನಲ್ಲಿ ಇರುವ ಸಮೃದ್ದವಾದ ಜೀವ ವೈವಿಧ್ಯತೆಗೆ ಇಲ್ಲಿನ ದೇವರ ಕಾಡುಗಳು ಹಾಗೂ ಔಷಧೀಯ ಗುಣಗಳನ್ನು ಹೊಂದಿದ ಟೆಂಪಲ್ ಟ್ರೀ ಗಳ ಪಾತ್ರ ಮುಖ್ಯವಾದುದು‌. ಪ್ರಕೃತಿಗೆ ಕಂಟಕ ಎದುರಾಗುವ ಲಕ್ಷಣಗಳು ಗೋಚರವಾದಾಗ ಪೂರ್ವಜರು ಪ್ರಕೃತಿಯನ್ನು ಸಂರಕ್ಷಿಸಲು ಅರಣ್ಯಕ್ಕೆ ದೇವರ ಕಾಡುಗಳ ಸ್ವರೂಪ ಕೊಟ್ಟಿರುವುದು ಮಾತ್ರ ವಿಶೇಷವಾದ ಸಂಗತಿಯಾಗಿದೆ. ಇಂದು ಪ್ರಕೃತಿಯ ಸಂರಕ್ಷಣೆಯ ದೃಷ್ಟಿಯಿಂದ ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ಜಾಗೃತಿ ಅತಿ ಮುಖ್ಯ ಎಂದರು.

 ಕೊಡಗು ವಿವಿ ವಿಶೇಷಾಧಿಕಾರಿ ಡಾ.ರವಿಶಂಕರ್ ಪ್ರಾಸ್ತಾವಿಕ ಮಾತನಾಡಿ, ಕೊಡಗಿನ ಪೂರ್ವಜರು ತಮ್ಮ ಉಡುಪು, ಆಚಾರ ವಿಚಾರ ಹಾಗೂ ಸಂಸ್ಕೃತಿಗಳ ಭಾಗವಾಗಿ ಅರಣ್ಯವನ್ನೂ ಕೂಡ ಪಾಲನೆ ಮಾಡಿದ್ದರ ಫಲವಾಗಿ ಇಂದು ಕೊಡಗಿನಲ್ಲಿ ಜೀವ ವೈವಿಧ್ಯ ಹೇರಳವಾಗಿದೆ. ಆದಾಗ್ಯೂ ಮುಂದಿನ ಪೀಳಿಗೆಗೆ ಇದನ್ನು ಜತನವಾಗಿ ಒಯ್ಯಬೇಕಾದ್ದು ಇಂದಿನ ಎಲ್ಲರ ಆದ್ಯ ಕರ್ತವ್ಯ ವಾಗಬೇಕೆಂದರು.

 ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಆರ್.ಗಂಗಾಧರ, ಹಾವೇರಿ ವಿವಿ ಕುಲಪತಿ ಡಾ.ಸುರೇಶ್ ಹೆಚ್.ಜಂಗಮಶೆಟ್ಟಿ, ಹಾಸನ ವಿವಿ ಕುಲಪತಿ ಡಾ.ಸಿ.ತರೀಕೆರೆ ತಾರನಾಥ್, ಬಾಗಲಕೊಟೆ ವಿವಿ ಕುಲಪತಿ ಡಾ. ಆನಂದ್ ದೇಶಪಾಂಡೆ, ಬೆಂಗಳೂರಿನ ಮೆಟೀರಿಯಲ್ ಇಂಜಿನಿಯರಿಂಗ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರೊ.ಪ್ರವೀಣ್ ಸಿ.ರಾಮಮೂರ್ತಿ, ಪ್ರೊ.ಚಂದ್ರಶೇಖರ್ ಬಿರಾದಾರ್, ಐಐಎಸ್ಸಿ ಜಂಟಿ ನಿರ್ದೇಶಕ ಡಾ.ಕೆ.ವೀರಣ್ಣ, ಸುಬ್ಬಾರೆಡ್ಡಿ, ವಿ.ಆರ್.ಸೌಮಿತ್ರಿ, ಗಂಗಾ ಅಂಕದ್ ಜೀವ ವೈವಿಧ್ಯತೆಯ ಕುರಿತಾಗಿ ವಿಶೇಷ ಮಾಹಿತಿ ನೀಡಿದರು. ಕೊಡಗು ವಿವಿ ಮೌಲ್ಯಮಾಪನ ವಿಶೇಷಾಧಿಕಾರಿ ಡಾ.ರವಿಶಂಕರ್ ಸ್ವಾಗತಿಸಿದರು. ಉಪನ್ಯಾಸಕ ಸುದರ್ಶನ್ ಕುಮಾರ್ ಎನ್.ಕೆ. ನಿರೂಪಿಸಿದರು. ಕುಲಸಚಿವ (ಮೌಲ್ಯಮಾಪನ) ಆದ ಪ್ರೊ. ಎಂ.ಸುರೇಶ್ ವಂದಿಸಿದರು.