ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಗೆ ಯತ್ನ ನಡೆದಿದೆ; ಕೊಡಗು ಜಿಲ್ಲಾ ಕಾಂಗ್ರೆಸ್ ಆರೋಪ

ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಗೆ ಯತ್ನ ನಡೆದಿದೆ; ಕೊಡಗು ಜಿಲ್ಲಾ ಕಾಂಗ್ರೆಸ್ ಆರೋಪ

ಮಡಿಕೇರಿ; ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ಅಸ್ಮಿತೆಯನ್ನು ಹೊಸಕಿ ಹಾಕುವ ದುರುದ್ದೇಶ ಹಾಗೂ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣೆಯಲ್ಲಿ ಸೋಲು ತಪ್ಪಿಸಿಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರಗೃಹ ಸಚಿವ ಅಮಿತ್ ಶಾ ಜೋಡಿ ಷಡ್ಯಂತರ ನಡೆಸಿದ್ದು ಬಿಜಿಪಿ ಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಗೆ ಪ್ರಯತ್ನ ನಡೆದಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಆರೋಪಿಸಿದ್ದಾರೆ.

ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲು ನೀಡುವುದು ಕಾಂಗ್ರೆಸ್ ಪಕ್ಷದ ಬಹುದೊಡ್ಡ ಕನಸಾಗಿದ್ದು ಸ್ಥಳೀಯ ಸಂಸ್ಥೆಗಳಲ್ಲಿ ಅಂದಿನ ಪ್ರಧಾನಿ ದಿವಗಂತ ರಾಜೀವ್ ಗಾಂಧಿಯವರ ಪ್ರಯತ್ನದ ಫಲವಾಗಿ 1992 ರಲ್ಲಿಯೇ ಮೀಸಲು ನೀಡಿ ಇತಿಹಾಸ ನಿರ್ಮಿಸಲಾಗಿದೆ. ಹಾಗಾಗಿ 2023 ರಲ್ಲಿ ಈ ಬಿಲ್ ಮಂಡನೆಯಾದಾಗ ಕಾಂಗ್ರೆಸ್ ಪಕ್ಷ ವಿರೋಧಿಸಲಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಮೂರು ವರ್ಷಗಳಿಂದ ಅದನ್ನು ಜಾರಿಗೊಳಿಸದೆ 2011 ರ ಜನಗಣತಿ ಆಧಾರದಲ್ಲಿ ಕ್ಷೇತ್ರ ವಿಂಗಡನೆಯ ಉದ್ದೇಶದಿಂದ ಮತ್ತೆ ಮಸೂದೆ ಮಂಡನೆಗೆ ಪ್ರಯತ್ನ ಪಟ್ಟಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಯುಪಿಎ ಒಕ್ಕೂಟ ಮಸೂದೆಯನ್ನು ವಿರೋಧಿಸುವ ಮೂಲಕ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಜೀವಂತವಾಗಿರಿಸಿದ್ದಾರೆ.ಇದರಿಂದ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ,ತಮಿಳುನಾಡು,ಕೇರಳ, ಆಂದ್ರಪ್ರದೇಶ, ತೆಲಂಗಾಣದಂತಹ ರಾಜ್ಯಗಳಿಗೆ ಆಗುತ್ತಿದ್ದ ಬಹುದೊಡ್ಡ ಅಪಾಯವನ್ನು ತಪ್ಪಿಸಿದ್ದಾರೆ ಎಂದು ತೆನ್ನಿರ ಮೈನಾ ವ್ಯಾಖ್ಯಾನಿಸಿದ್ದಾರೆ.

 2023 ರಲ್ಲಿ ಅಂಗೀಕರಿಸಲಾದ ಮೂಲ ಮಹಿಳಾ ಕೋಟ ಜಾರಿಗೆ ತಂದರೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಬೆಂಬಲಿಸಲಿದ್ದೇವೆ ಎಂದು ರಾಹುಲ್ ಗಾಂಧಿಯವರು ಸ್ಪಷ್ಟಪಡಿಸಿದ್ದರೂ ಉತ್ತರ ಭಾರತದ ಅದರಲ್ಲೂ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕ್ಷೇತ್ರ ವಿಂಗಡನೆಯ ಮೂಲಕ ಹೆಚ್ಚು ಸ್ಥಾನಗಳನ್ನು ರಚಿಸಿ ತಮ್ಮ ರಾಜಕೀಯ ಹಿತರಕ್ಷಣೆಗಾಗಿ ಮೋದಿ ಮತ್ತು ಅಮಿತ್ ಶಾ ಜೋಡಿ ಕುತಂತ್ರ ಮಾಡಿ ಬಿಲ್ ಪಾಸ್ ಮಾಡಿಸಲು ಯತ್ನ ನಡೆಸಿ ವಿಫಲರಾಗಿದ್ದಾರೆ.

ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುವ ಮತ್ತು ಮಾರಕವಾಗಿರುವ ಈ ಮಸೂದೆಯನ್ನು ಕರ್ನಾಟಕದಿಂದ ಆಯ್ಕೆಯಾಗಿರುವ ಬಿ.ಜೆ.ಪಿ ಸಂಸದರು ವಿರೋಧಿಸುವ ಬದಲು ಉತ್ತರ ಭಾರತೀಯರ ಲಾಬಿಗೆ ಮಣಿದು ಸಮರ್ಥನೆ ಮಾಡಿರುವುದು ಕರ್ನಾಟಕ ರಾಜ್ಯದ ದುರಂತವಾಗಿದೆ. ಇಂತಹ ನಾಡದ್ರೋಹಿ ಗಳಿಗೆ ರಾಜ್ಯದ ಜನತೆ ತಕ್ಕ ಪಾಠವನ್ನು ಮುಂದಿನ ದಿನಗಳಲ್ಲಿ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ತೆನ್ನಿರ ಮೈನಾ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.