ಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ; ಸಚಿವ ಬೋಸರಾಜ್ ಆಕ್ರೋಶ

Jan 20, 2026 - 12:29
Jan 20, 2026 - 15:56
 0  230
ಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ; ಸಚಿವ ಬೋಸರಾಜ್ ಆಕ್ರೋಶ

ಮಡಿಕೇರಿ: ಕೇಂದ್ರದಲ್ಲಿರುವ ಬಿಜೆಪಿ ದೇಶದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸಲು ಹುನ್ನಾರ ನಡೆಸಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಬೋಸರಾಜ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದುಗೊಳಿಸಿರುವ ಕುರಿತು ಮಾತನಾಡಿದ ಸಚಿವರು ಅಂದಿನ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರ ಗ್ರಾಮೀಣ ಪ್ರದೇಶದ ಬಡಜನರ ಕಲ್ಯಾಣ ಮತ್ತು ಗ್ರಾಮೀಣ ಪ್ರದೇಶದ ಅಭಿವೃದ್ಧಿ ಯ ಚಿಂತನೆಯೊಂದಿಗೆ ಸುಮಾರು ಆರು ತಿಂಗಳ ಕಾಲ ಎಲ್ಲಾ ರೀತಿಯ ಚರ್ಚೆಗಳು, ಸಭೆಗಳನ್ನು ನಡೆಸಿ ಮನ್ರೇಗಾ ಯೋಜನೆಯನ್ನು ಜಾರಿಗೆ ತಂದು ಕೋಟ್ಯಾಂತರ ಜನರಿಗೆ ಉದ್ಯೋಗ ನೀಡಿ ದೇಶದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಜೊತೆಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಿತು.

ಆದರೆ ಈಗ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಕೇವಲ 72 ಗಂಟೆಗಳಲ್ಲಿ ಯಾವುದೇ ಸಭೆ,ಸಂವಾಂದ ಚಿಂತನೆಗಳನ್ನು ನಡೆಸದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದುಪಡಿಸುವ ಮೂಲಕ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದಾರೆ ಎಂದು ಆರೋಪಿಸಿದರು. ದೇಶದ ಜನರ ಮನಸ್ಸಿನಿಂದ ರಾಷ್ಟ್ರ ಪಿತ ಮಹಾತ್ಮ ಗಾಂಧಿಯವರ ಹೆಸರನ್ನು ಅಳಸಿ ಹಾಕಿ ಸರ್ವಾಧಿಕಾರಿ ಆಡಳಿತದತ್ತ ದೇಶವನ್ನು ಕೊಂಡೊಯ್ಯುವ ಪ್ರಯತ್ನ ನಡೆಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದು ಮಾಹಿತಿ ನೀಡಿದರು. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಮಾತನಾಡಿ ಕೇಂದ್ರ ಸರ್ಕಾರ ಸಂವಿಧಾನಕ್ಕೆ ವಿರೋಧ ವಾಗಿ ಆಡಳಿತ ನಡೆಸುತ್ತಿದ್ದು ಪಂಚಾಯತ್ ಗಳು ಮತ್ತು ರಾಜ್ಯ ಸರ್ಕಾರಗಳನ್ನು ನಿಷ್ಕ್ರಿಯ ಗೊಳಿಸುವ ಪ್ರಯತ್ನ ಪಡುತ್ತಿದೆ ಎಂದು ಆರೋಪಿಸಿದರು.

 ಮನ್ರೆಗಾ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ದೇಶದ ಬಹುಪಾಲು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ. ಹಾಗಾದರೆ ಅಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಒಪ್ಪಿದ್ದಾರೆ ಎಂದು ಅರ್ಥವಲ್ಲವೇ ಎಂಬುದಾಗಿ ಮಾರ್ಮಿಕವಾಗಿ ಪ್ರಶ್ನೆ ಮಾಡಿದರು. ಒಕ್ಕೂಟ ವ್ಯವಸ್ಥೆಯ ಬಗ್ಗೆ ತಾತ್ಸಾರ ಹೊಂದಿರುವ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು. ವಿಶೇಷ ಅಧಿವೇಶನದಲ್ಲಿ ಚರ್ಚಿಸಿದ ನಂತರ ಹೋರಾಟವನ್ನು ನಡೆಸಲಾಗುವುದು ಎಂದು ಪೊನ್ನಣ್ಣ ವಿವರಿಸಿದರು.

 ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಬಿ.ಶಾಂತಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0