ಸೋಮವಾರಪೇಟೆಯಲ್ಲಿ ಬಿಜೆಪಿ‌‌ ಪ್ರತಿಭಟನೆ

Apr 27, 2026 - 14:12
Apr 27, 2026 - 14:12
 0  525
ಸೋಮವಾರಪೇಟೆಯಲ್ಲಿ ಬಿಜೆಪಿ‌‌ ಪ್ರತಿಭಟನೆ

ಸೋಮವಾರಪೇಟೆ :- ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆಯೆಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಆರೋಪಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ವಿಳಂಬದೋರಣೆ ತೋರುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಪಟ್ಟಣದ ತಾಲೂಕು ಪಂಚಾಯಿತಿ ಎದುರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ಮುಖ್ಯಮಂತ್ರಿ ಕುರ್ಚಿ ವಿಚಾರದಲ್ಲಿಯೇ ಬಿಜಿಯಾಗಿದೆ, ಬಿಟ್ಟಿಭಾಗ್ಯಗಳಿಂದ ಆರ್ಥಿಕವಾಗಿ ದಿವಾಳಿಯಾಗಿದ್ದು ಕೆಎಸ್ಆರ್ಟಿಸಿ ಸೇರಿದಂತೆ ಹಲವು ಇಲಾಖೆಯ ಸಿಬ್ಬಂದಿಗಳಿಗೆ ಸಂಬಳ ನೀಡಲು ಹಣವಿಲ್ಲದಂತಾಗಿದೆ ಎಂದು ಆರೋಪಿಸಿದರು.

 ಗ್ರಾಮ ಪಂಚಾಯತಿ ಅವಧಿ ಮುಗಿದಿದೆ,ತಾಲೂಕು ಪಂಚಾಯತ್ ಅವಧಿ ಮುಗಿದು ಹಲವು ವರ್ಷಗಳಾಗಿವೆ ಆದರೂ ಸರ್ಕಾರ ಸುಮ್ಮನೆ ಕುಳಿತಿದೆ ಇವರಿಗೆ ಚುನಾವಣೆ ನಡೆಸಲು ಹಣವಿಲ್ಲ ಅದಕ್ಕೆ ಎಂದು ವ್ಯಂಗ್ಯವಾಡಿದರು. ಜಿಲ್ಲೆಯ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದೆ ಆದರೂ ಗುಂಡಿ ಮುಚ್ಚದೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ ಹಿಂದಿನ ಸರ್ಕಾರಗಳು ಜನಸಾಮಾನ್ಯರಿಗೆ ಅದಿಕಾರ ನೀಡುವ ನಿಟ್ಟಿನಲ್ಲಿ ಅದಿಕಾರ ವಿಕೇಂದ್ರೀಕರಣ ಗೊಳಿಸಿದರು ಇಂದಿನ ಸರ್ಕಾರ ಚುನಾವಣೆ ನಡೆಸದೆ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.

ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಭಾರತೀಶ್ ಮಾತನಾಡಿ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಜನರಲ್ಲಿ ಕಾಡತೊಡಗಿದೆ,ಮತ್ತೊಂದು ಕಡೆ ಸರ್ಕಾರಿ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಡೆಸದಿರುವುದರಿಂದ ರಾಜ್ಯದಲ್ಲಿ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.

 ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಕಳೆದು ಕೊಂಡಿರುವ ರಾಜ್ಯಸರ್ಕಾರ ಜನರ ಅದಿಕಾರ ವಿಕೇಂದ್ರೀಕರಣದ ಹಕ್ಕನ್ನು ಕಸಿದುಕೊಂಡಿದೆ ಎಂದು ಆರೋಪಿಸಿದರು. ಇಂದು ಸೋಮವಾರ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು ಅಲ್ಲದೆ ಪ್ರತಿಭಟನೆ ನಡೆಸುತ್ತಿದ್ದರೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕಚೇರಿಯಲ್ಲಿಲ್ಲದೆ ದರ್ಪ ತೋರಿದ್ದಾರೆ,ಮುಂದೆ ಹೀಗಾದರೆ ಕಚೇರಿಗೆ ಬೀಗ ಜಡಿದು,ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಸಂದರ್ಭ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ,ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರುಗಳಾದ ವಿ.ಕೆ.ಲೋಕೇಶ್, ಮನುಕುಮಾರ್ ರೈ,ಅನಂತ್ ಕುಮಾರ್,ಮಂಡಲ ಬಿಜೆಪಿ ಮಹಿಳಾಘಟಕದ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಉಪಾಧ್ಯಕ್ಷೆ ಸವಿತಾ ಸತೀಶ್,ಮಂಡಲ ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಸುನೀಲ್, ಎಸ್.ಸಿ.ಮೋರ್ಚಾ ಅಧ್ಯಕ್ಷ ರಾಮಕೃಷ್ಣ,ಯುವ ಮೋರ್ಚಾ ಅಧ್ಯಕ್ಷ ಮೋಹಿತ್,ಮಂಡಲ ಬಿಜೆಪಿ ಕಾರ್ಯ ದರ್ಶಿಗಳಾದ ಇಂದಿರಾ ಮೋನಪ್ಪ,ಮೋಹಿತ್ ರಾಜ್, ದರ್ಶನ್ ಹಾಗೂ ಮುಂತಾದವರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0