Kodagu

ಭಾಗಮಂಡಲ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ಕ್ರೀಡಾಕೂಟಕ್ಕೆ ಚಾಲನೆ

admincoorgdaily

ಭಾಗಮಂಡಲ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ಕ್ರೀಡಾಕೂಟಕ್ಕೆ ಚಾಲನೆ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು:ತುಂತುರು ಮಳೆಯ ನಡುವೆ ಭಾಗಮಂಡಲ ವಲಯ ಪ್ರೌಢಶಾಲಾ ವಿಭಾಗದ ಬಾಲಕರ ಕ್ರೀಡಾಕೂಟಕ್ಕೆ ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಭಾಗಮಂಡಲ ವಲಯಕ್ಕೆ ಒಳಪಟ್ಟ ಆರು ಶಾಲೆಗಳ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಕ್ರೀಡಾ ಸಾಮರ್ಥ್ಯ ಮೆರೆದರು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಪಿ.ಎಂ. ಸುಬ್ಬಯ್ಯ ಮಾತನಾಡಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬಹುದು ಎಂದು ಹೇಳಿದರು. ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಭಾಗಮಂಡಲ ವಲಯ ಪ್ರೌಢಶಾಲಾ ವಿಭಾಗದ ಬಾಲಕರ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿಯಿಂದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ಯಶಸ್ಸನ್ನು ಸಾಧಿಸಬೇಕು ಎಂದರು. ಅರುಣ ಪದವಿ ಪೂರ್ವ ಕಾಲೇಜಿನಪ್ರಾಂಶುಪಾಲರಾದ ಕೆ.ಆರ್. ರಮೇಶ್ ಮಾತನಾಡಿ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಮುಖ್ಯ ಸೋಲು ಗೆಲುವು ಸಾಮಾನ್ಯ. ಎರಡನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದರು.

 ಮುಖ್ಯ ಶಿಕ್ಷಕ ಸಿ.ಆರ್. ಲೋಕೇಶ್ ಮಾತನಾಡಿ ಭಾಗಮಂಡಲ ವಲಯದ ವಿವಿಧ ಶಾಲೆಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು ಸಾಮರಸ್ಯದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕುಟ್ಟೇಟಿರ ಕುಂಙಪ್ಪ ಮಾತನಾಡಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಗಣನೀಯವಾಗಿ ಇಳಿಮುಖಗೊಂಡಿದೆ. ಇತ್ತೀಚೆಗೆ ಹಲವರು ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ. ಮೊಬೈಲ್ ಬಳಕೆಗೆ ಕಡಿವಾಣ ಹಾಕಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಸಿ ಕೊಂಡರೆ ಮಾನಸಿಕವಾಗಿ ಶಾರೀರಿಕವಾಗಿ ಸದೃಡರಾಗಬಹುದು ಎಂದರು.

 ಭಾಗಮಂಡಲ ವಲಯದ ಅಟಲ್ ಬಿಹಾರಿ ವಾಜಪೇಯಿ ಶಾಲೆ,ಭಾಗಮಂಡಲದ ಕಾವೇರಿ ಪ್ರೌಢಶಾಲೆ,ಚೇರಂಬಾಣೆಯ ಅರುಣ ಪ್ರೌಢಶಾಲೆ, ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆ,,ಬೆಟ್ಟಗೇರಿಯ ಉದಯ ಪ್ರೌಢಶಾಲೆ ಹಾಗೂ ಕೋರಂಗಾಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಬ್ಬಡ್ಡಿ ಪಂದ್ಯಾಟದಲ್ಲಿ ಅಟಲ್ ಬಿಹಾರಿ ವಾಜಪೇಯಿ ಶಾಲಾ ವಿದ್ಯಾರ್ಥಿಗಳ ತಂಡ ,ಖೊಖೊ ಪಂದ್ಯಾಟದಲ್ಲಿ ಚೇರಂಬಾಣೆಯ ಅರುಣ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡ, ವಾಲಿಬಾಲ್ ಪಂದ್ಯಾಟದಲ್ಲಿ ಅಟಲ್ ಬಿಹಾರಿ ವಾಜಪೇಯಿ ಶಾಲಾ ವಿದ್ಯಾರ್ಥಿಗಳ ತಂಡ ಹಾಗೂ ಥ್ರೋಬಾಲ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಶಾಲಾ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆಯಾದರು. ಉದ್ಘಾಟನಾ ಸಮಾರಂಭದಲ್ಲಿ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ನಾಟೋಳಂಡ ವಿಜು ದೇವಯ್ಯ, ಮುಖ್ಯ ಶಿಕ್ಷಕ ಕುದುಪಜೆ ಕವನ್,ದೈಹಿಕ ಶಿಕ್ಷಣ ಶಿಕ್ಷಕ ಅಯ್ಯಪ್ಪ, ವಿವಿಧ ಪ್ರೌಢಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು. ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ನೇತೃತ್ವದಲ್ಲಿ ಕ್ರೀಡಾಕೂಟ ನಡೆಯಿತು.