ಶನಿವಾರಸಂತೆಯಲ್ಲಿ ಒಕ್ಕಲಿಗರ ನೂತನ ಸಂಘದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

May 6, 2026 - 12:17
 0  251
ಶನಿವಾರಸಂತೆಯಲ್ಲಿ ಒಕ್ಕಲಿಗರ ನೂತನ ಸಂಘದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

ಶನಿವಾರಸಂತೆ;ಕುಲ ಗುರುಗಳು ಹೇಳಿಕೊಟ್ಟ ಸಂಸ್ಕೃತಿ ಸಂಸ್ಕಾರ ಅಡಿಪಾಯದಲ್ಲಿ ನಾವು ಮುನ್ನಡೆದರೆ ಮಾತ್ರ ಸಮುದಾಯವೊಂದು ಬೆಳೆಯಲು ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಹಾಸನ ಮತ್ತು ಕೊಡಗು ಶಾಖಾ ಮಠದ ಶ್ರೀ ಶಂಬುನಾಥ ಸ್ವಾಮೀಜಿ ಹೇಳಿದರು.

 ಅವರು ಶನಿವಾರಸಂತೆ ಒಕ್ಕಲಿಗರ ನೂತನ ಸಂಘದ ಉದ್ಘಾಟನೆ ಮತ್ತು ಚಿನ್ನಳ್ಳಿಯಲ್ಲಿ ನಿರ್ಮಾಣವಾಗಲಿರುವ ಸಂಘದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಪಟ್ಟಣದ ಯಶಸ್ವಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.

 ಆದಿಚುಂಚನಗಿರಿ ಸಂಸ್ಥಾನದ ಮೂಲ ಗುರುಗಳ ಕೃಪಾಕಟಾಕ್ಷಗಳಿಂದ ಮತ್ತು ಸಂಸ್ಥಾನ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಕುಲದ ಬೆಳವಣಿಗೆ ಮತ್ತು ಸಮಾಜದ ಬೆಳವಣಿಗೆಗೆ ಮಾಡಿಕೊಟ್ಟಿರುವ ದೂರದೃಷ್ಟಿ, ಮಾರ್ಗದರ್ಶನದ ದಾರಿಯಲ್ಲಿ ಒಕ್ಕಲಿಗ ಸಮೂದಾಯ ಮುನ್ನಡೆಯಬೇಕಿದೆ .ಅಲ್ಲದೆ ಬೆಂಗಳೂರು ನಿರ್ಮಿಸಿದ ಕೆಂಪೇಗೌಡರ ಆದರ್ಶ, ಚಿಂತನೆಗಳು ಹಾಗೂ ಸಮಾಜದ ಬೆಳವಣಿಗೆಯ ಚಿಂತನೆಯನ್ನು ಕುಲ ಬಾಂಧವರು ಬೆಳೆಸಿಕೊಂಡರೆ ಒಕ್ಕಲಿಗರ ಸಂಘ ಮತ್ತು ಸಂಘಟನೆ ಹಾಗೂ ಸಮೂದಾಯವೂ ಬೆಳೆಯುತ್ತದೆ ಎಂದು ಹೇಳಿದರು.

ರಾಜ್ಯಕ್ಕೆ ಒಕ್ಕಲಿಗರ ಸಮುದಾಯ ನೀಡಿದ ಕೊಡುಗೆ ಅಪಾರವಾದದ್ದು ಈ ದಿಸೆಯಲ್ಲಿ ಆದಿಚುಂಚನಗಿರಿ ಸಂಸ್ಥಾನದ ಶಾಖಾ ಮಠದ ಮೂಲಕ ಹಾಸನ ಕೊಡಗು ಜಿಲ್ಲೆಯಲ್ಲಿ ಶಾಲಾ ಕಾಲೇಜು, ವಸತಿ ನಿಲಯಗಳು ಸೇರಿದಂತೆ ಹಾಸನದಲ್ಲಿ ಹೆಣ್ಣು ಮಕ್ಕಳ ವಿದ್ಯಾಬ್ಯಾಸಕ್ಕೆ ಪೂರಕವಾಗಿ ವಸತಿ ನಿಲಯವನ್ನು ನಿರ್ಮಿಸಿಕೊಟ್ಟಿದೆ ಎಂದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವಿಂದ್ರ ಮಾತನಾಡಿ,ಬೆಂಗಳೂರು ನಿರ್ಮಾಣಕರ್ತ ಕೆಂಪೇಗೌಡರು, ಆದಿಚುಂಚನಗಿರಿ ಸಂಸ್ಥಾನ ಮಠ, ಮಾಜಿ ಪ್ರಧಾನಿ ದೇವೇಗೌಡ, ಎಸ್.ಎಂ.ಕೃಷ್ಣರಂತಹ ರಾಜಕೀಯ ಕಲಿಗಳು ಇನ್ನು ಮುಂತಾದವರು ಒಕ್ಕಲಿಗ ಸಮುದಾಯದಲ್ಲಿ ಜನಿಸಿರುವುದು ನಮಗೆ ಹೆಮ್ಮೆಯಾಗುತ್ತದೆ ಎಂದ ಅವರು ರಾಜ್ಯ ಒಕ್ಕಲಿಗರ ಸಂಘವು ಸಮೂದಾಯದ ವಿದ್ಯಾರ್ಥಿ ನಿಲಯ ಮತ್ತು ಸಂಘದ ಬೆಳವಣಿಗೆಗೆ ಸರಕಾರದಿಂದ 10 ಕೋಟಿ ಅನುದಾನ ನೀಡಿದೆ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಒಕ್ಕಲಿಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಂಘಟನೆಯ ಬೆಳವಣಿಗೆಗೆ ಇಲ್ಲಿ ಸಂಘದ ಅವಶ್ಯಕತೆ ಇತ್ತು.ಈಗ ಇದು ಅಸ್ತಿತ್ವಕ್ಕೆ ಬಂದಿರುವುದು ಶ್ಲಾಘನಿಯ ಎಂದರು.

ಮಾಜಿ ಶಾಸಕ ಮತ್ತು ಸಕಲೇಶಪುರ ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಎಂ,ವಿಶ್ವನಾಥ್ ಮಾತನಾಡಿ, ಸಂಘ, ಸಂಘಟನೆ ಪ್ರಬಲವಾದರೆ ಸಮೂದಾಯವೂ ಪ್ರಬಲಗೊಳ್ಳುತ್ತದೆ ಮಲೆನಾಡು ವ್ಯಾಪ್ತಿಯಲ್ಲಿ ಸಮೂದಾಯದ ಬಾಂಧವರು ಆರ್ಥಿಕವಾಗಿ ಸಹಾಯ ಮಾಡುವಂತಹ ಮನೋಭಾವನೆ ಉಳ್ಳವರಾಗಿದ್ದು ಈ ನಿಟ್ಟಿನಲ್ಲಿ ಸದರಿ ಸಂಘದ ಬೆಳವಣಿಗೆಗೆ ಕುಲಬಾಂಧವರು ಆರ್ಥಿಕವಾಗಿ ಕೈಜೋಡಿಸುವಂತೆ ಮನವಿ ಮಾಡಿದರು.

ಸಮಾರಂಭದಲ್ಲಿ ಒಕ್ಕಲಿಗರ ಸಂಘದ ಹಾಸನ ಜಿಲ್ಲಾಧ್ಯಕ್ಷ ಮುದ್ದೇಗೌಡ, ಕೊಡಗು ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ, ಸಕಲೇಶಪುರ ಮಾಜಿ ತಾ.ಪಂ.ಅಧ್ಯಕ್ಷ ನಾಗರಾಜ್ ಮಾತನಾಡಿದರು. ಶನಿವಾರಸಂತೆ ಒಕ್ಕಲಿಗರ ಸಂಘದ ಅಧ್ಯಕ್ಷ ಕೇಶವೇಗೌಡ ಅಧ್ಯಕ್ಷತೆವಹಿಸಿದ ಸಮಾರಂಭದಲ್ಲಿ ಸಂಘದ ಕಾರ್ಯದರ್ಶಿ ಹರೀಶ್‌ಕುಮಾರ್, ಒಕ್ಕಲಿಗ ಪ್ರಮುಖರಾದ ವಿನೋದ್‌ಚಂದ್ರ, ಚೈತ್ರ, ಮುತ್ತಣ್ಣ, ಗಿರೀಶ್ ಮಲ್ಲಪ್ಪ, ಭರತ್‌ಕುಮಾರ್, ಚಂದ್ರಿಕಾಕುಮಾರ್ ಇನ್ನು ಮುಂತಾದ ಪ್ರಮುಖರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0