ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಅರಮೇರಿಯ ಕಳಂಚೇರಿ ಮಠದಲ್ಲಿ ‘ಕೊಡವ ಪುಸ್ತಕ ಪತ್ತಾಯ’ ಕಾರ್ಯಕ್ರಮ
ಮಡಿಕೇರಿ ಆ.17:-ಕೊಡಗಿನ ನೆಲದಲ್ಲಿ ಶಿಕ್ಷಣ ಸಂಸ್ಥೆಗಳು ಹಾಲೇರಿ ಅರಸರಾದಿಯಾಗಿ ಬ್ರಿಟೀಷರ ಕಾಲದಲ್ಲಿ ಸ್ಥಾಪನೆಗೊಂಡರೂ, ಅನಾದಿ ಕಾಲದಿಂದ ವಿಭಿನ್ನ ಸಂಸ್ಕøತಿಯೊಂದಿಗೆ ಸಂಸ್ಕಾರ ಯುತವಾದ ಸಾಮಾಜಿಕ ಬದುಕು ಹುಟ್ಟಿಕೊಂಡು ಬಂದಿರುವುದು ಈ ನೆಲದ ಪಾವಿತ್ರ್ಯತೆಯಾಗಿದೆ.
ಇಲ್ಲಿ ಸರ್ವರೂ ಸಹೋದರತೆ, ಸೌಹಾರ್ದತೆ ಹಾಗೂ ಸಮಾನತೆಯಿಂದ ಬದುಕು ರೂಪಿಸಿಕೊಂಡಿರುವುದು ದೇಶಕ್ಕೆ ಮಾದರಿ. ಶಾಲಾ ಜೀವನದಲ್ಲೇ ಮಕ್ಕಳು ಇವನ್ನೆಲ್ಲ ಅರಿತುಕೊಂಡು ಭವಿಷ್ಯನ್ನು ರೂಪಿಸಿಕೊಳ್ಳಬೇಕು. ಅದಕ್ಕಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ನೂತನ ಯೋಜನೆಯಾಗಿ ‘ಕೊಡವ ಪುಸ್ತಕ ಪತ್ತಾಯ’ವನ್ನು ವಿದ್ಯಾಸಂಸ್ಥೆಗಳಲ್ಲಿ, ಐನ್‍ಮನೆಗಳಲ್ಲಿ, ಸಂಘ-ಸಂಸ್ಥೆ, ಸಮಾಜಗಳಲ್ಲಿ ಸ್ಥಾಪಿಸಲಾಗುತ್ತಿದೆ. ಇದರಿಂದ ಜನಪದೀಯವಾದ ಕೊಡವ ಸಾಹಿತ್ಯವು ಜೀವಂತವಾಗಿರಲು ಸಾಧ್ಯವಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಹೇಳಿದರು.
ಅರಮೇರಿ ಕಳಂಚೇರಿಯಲ್ಲಿನ ಶ್ರೀ ಶಾಂತಮಲ್ಲ ಸ್ವಾಮೀಜಿ ವಿದ್ಯಾಸಂಸ್ಥೆಯಲ್ಲಿ ಅಕಾಡೆಮಿಯ 17ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮವನ್ನು ಸಂಸ್ಥೆರ ಸಂಸ್ಥಾಪಕರಾದ ಶಾಂತಮಲ್ಲ ಸ್ವಾಮೀಜಿಯವರ 29ನೇ ಗುರುಸ್ಮರಣೆಯ ದಿನ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಪಠ್ಯದ ಜೊತೆಗೆ ಜೀವನ ಮೌಲ್ಯ ತಿಳಿದುಕೊಳ್ಳುವ ಸಲುವಾಗಿ ದಿನಕ್ಕೆ ಅರ್ಧ ಗಂಟೆಯಾದರೂ ಮಕ್ಕಳನ್ನು ಗ್ರಂಥಾಲಯಗಳಲ್ಲಿ ಕತೆ, ಕಾದಂಬರಿಯಂತಹ ಸಾಹಿತ್ಯವನ್ನು ಓದಲು ಬಿಡುವು ಮಾಡಿಕೊಡಬೇಕಾದದ್ದು ಇಂದಿನ ಅವಶ್ಯಕತೆಯಾಗಿದೆ ಎಂದರು.
ಬದುಕಿನ ಹಲವು ಮಗ್ಗುಲಗಳನ್ನು ತಿಳಿದುಕೊಳ್ಳಲು ಕತೆ, ಕಾದಂಬರಿ, ವೈಚಾರಿಕ ಲೇಖನಗಳ ಸಾಹಿತ್ಯವು ಅನುಕೂಲವಾಗಿದ್ದು, ಶಿಕ್ಷಣವೆಂಬುದು ಕೇವಲ ಪಠ್ಯದೊಂದಿಗಿನ ಸಮ್ಮಿಲನವಾಗಿರಬಾರದು ಎಂದು ಅಭಿಪ್ರಾಯಪಟ್ಟರು.
ಪುಸ್ತಕ ಪತ್ತಾಯವನ್ನು ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅನಾವರಣಗೊಳಿಸಿದರು. ಈ ವೇಳೆ ಅಕಾಡೆಮಿ ವತಿಯಿಂದ ನೋಂದಣಿ ಪತ್ರವನ್ನು ಸಂಸ್ಥೆಯ ಪ್ರಾಂಶುಪಾಲರಾದ ಬಲ್ಲಚಂಡ ಕುಸುಂ ಟಿಟೊ ಅವರಿಗೆ ನೀಡಲಾಯಿತು. ವಿದ್ಯಾಸಂಸ್ಥೆ ವತಿಯಿಂದ ಅಕಾಡೆಮಿಗೆ ರೂ. ಹತ್ತು ಸಾವಿರದ ಚೆಕ್ ಪತ್ತಾಯದ ಪ್ರಯುಕ್ತ ನೀಡಲಾಯಿತು.
ಇದೇ ಸಂದರ್ಭದಲ್ಲಿ ಅಲ್ಲಪ್ಪಿರ ಹಾಗೂ ಮಂಡೇಟಿರ ಕುಟುಂಬಸ್ಥರಿಗೆ ಅಕಾಡೆಮಿ ವತಿಯಿಂದ ದುಡಿಗಳನ್ನು ಮಠಾಧೀಶರ ಮುಖೇನ ಗೌರವಪೂರ್ವಕವಾಗಿ ಹಸ್ತಾಂತರಿಸಲಾಯಿತು.
ಸತ್‍ಚಿಂತನೆ ವಿಕಸಿತ ಭಾರತಕ್ಕೆ ನಾಂದಿ: ಶಾಂತಮಲ್ಲಿಕಾರ್ಜುನ ಸ್ವಾಮೀಜಿ
ಬಳಿಕ ಮಾತನಾಡಿದ ವಿದ್ಯಾಸಂಸ್ಥೆಯ ಮುಖ್ಯಸ್ಥರೂ, ಮಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಕೊಡವ ಭಾಷೆಯು ಸಾಮಾಜಿಕ ಸಂವಹನವಾಗಿದ್ದು, ಇದರ ಮೂಲಕ ಸಮಾಜದೊಂದಿಗೆ ಬೆರೆತುಕೊಳ್ಳಲು ಅನುಕೂಲವಾಗುತ್ತದೆ. ಜತೆಗೆ ಸರ್ವರ ಪ್ರೀತಿ ಸಂಪಾದಿಸಲು ಸಾಧ್ಯವಾಯಿತು ಎಂದರು.
ಕೊಡವ ಬಾಷೆಯು ಪ್ರಾಚೀನವಾಗಿದ್ದು, ಕೃಷಿ ಆಧಾರಿತ ಸಂಸ್ಕೃತಿಯೊಂದಿಗೆ ಈ ನಾಡು ಕೊಡಗಿನಲ್ಲಿ ಪ್ರಮುಖವಾದ ಹಬ್ಬಗಳು ಇಲ್ಲಿನ ಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಸಾಕ್ಷಿಯಾಗಿದೆ. ಸ್ವಚ್ಛಂಧವಾದ, ಸುಸ್ಥಿರವಾದ ಸಮಾಜವನ್ನು ಕಟ್ಟುವ, 1947ರ ಒಳಗೆ ವಿಕಸಿತ ಭಾರತವನ್ನು ಕಟ್ಟುವ ಕೆಲಸ ಪ್ರತಿಯೊಬ್ಬರದ್ದಾಗಿದೆ. ಇದು ನಮ್ಮ ನಮ್ಮಿಂದಲೇ ಆಗಬೇಕಲ್ಲದೆ ಇನ್ನೊಬ್ಬರಿಂದ ಅಪೇಕ್ಷಿಸಿ ಕಾಣುವ ಬದಲಾವಣೆಯಲ್ಲ. ಸ್ವತಃ ಒಳ್ಳೆಯ ಯೋಚನೆ, ಒಳ್ಳೆಯ ಮಾತು, ಒಳ್ಳೆಯ ಪರಿಸರವನ್ನು ಇಟ್ಟುಕೊಂಡಲ್ಲಿ ಒಳ್ಳೆಯ ಸಮಾಜ ಸೃಷ್ಟಿಯಾಗುತ್ತದೆ. ಇದರಿಂದ ದೇಶದ ಪ್ರಗತಿ ಎಂದರೆ ವಿಕಸಿತ ಭಾರತವನ್ನು ಕಾಣಲು ಸಾಧ್ಯ ಎಂದರು.
ಮಕ್ಕಳಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ: ಮಲ್ಲೇಶ ಸ್ವಾಮೀಜಿ
ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ ತಮ್ಮ ಮಾತುಗಳಲ್ಲಿ, ಶಿಕ್ಷಣವೆಂಬುವುದು ಕೇವಲ ಅಂಕಗಳಿಗಷ್ಟೇ ಸೀಮಿತವಾಗಿರಬಾರದು. ಹೆಚ್ಚಿನ ಅಂಕ ಗಳಿಸಿದ ಮಕ್ಕಳನ್ನು ಶಿಕ್ಷಕರು ಮೆಚ್ಚುತ್ತಾರೆ. ಆದರೆ ಅದರೊಂದಿಗೆ ಒಳ್ಳೆಯ ಸಂಸ್ಕಾರ ಬೆಳೆಯಬೇಕಿದೆ ಎಂದರು.
ಶಿಕ್ಷಣದಲ್ಲಿ ಹೆಚ್ಚಿನ ಅಂಕ, ಒಳ್ಳೆಯ ಉದ್ಯೋಗ. ಮಕ್ಕಳೆಲ್ಲ ದೇಶ ಬಿಟ್ಟು ಹೊರ ರಾಷ್ಟ್ರಗಳಲ್ಲಿ ಉನ್ನತ ಹುದ್ದೆಯೊಂದಿಗೆ ಕೈತುಂಬಾ ಸಂಬಳ ಪಡೆಯಬಹುದು, ಆದರೆ, ಅದೇ ವಿದ್ಯೆ ನೀಡಿದ ಪೋಷಕರು, ಉತ್ತಮ ಶಿಕ್ಷಣ ನೀಡಿದ ಶಿಕ್ಷಕರು, ಈ ನೆಲದ ಸಂಸ್ಕತಿಯಿಂದ ದೂರವಿದ್ದು, ಒಂದು ದಿನ ತಮ್ಮ ಪೋಷಕರ ಅಂತಿಮ ದಿನಗಳಲ್ಲಿ ಜೊತೆಗಿಲ್ಲದಿದ್ದರೆ ಏನು ಫಲ? ಅಂತಿಮ ದಿನಗಳಲ್ಲೂ ರಜೆ ಇಲ್ಲವೆಂಬ ಸಬೂಬಿನೊಂದಿಗೆ ಅಂತಿಮ ದರ್ಶನವನ್ನು ಮೊಬೈಲ್ ಮೂಲಕ ನೋಡುವುದಾದರೆ ಅಂತಹ ಶಿಕ್ಷಣದಿಂದ ಸಂಸ್ಕಾರವೆಲ್ಲಿ? ಎಂದು ಬೇಸರ ವ್ಯಕ್ತಪಡಿಸಿದರು.
ಕೊಡಗಿನ ಹಲವೆಡೆಗಳಲ್ಲಿ ಮಠಗಳ ಆಸ್ತಿಯಿದ್ದು ಅವನ್ನೆಲ್ಲ ಕಾಪಾಡಿಕೊಂಡು ಹೋಗುವ ಕೆಲಸವಾಗಬೇಕಿದೆ. ಅರಮೇರಿ ಮಠದ ಸ್ವಾಮೀಜಿಗಳು ‘ಕೊಡವ ಸ್ವಾಮೀಜಿ’ಗಳಾಗಿದ್ದು ಅವರಿಗೆ ಕೊಡವ ಭಾಷೆ ಹಾಗೂ ಇಲ್ಲಿನ ಜನ ಜೀವನದ ಅರಿವಿದೆ ಎಂದು ಪ್ರಶಂಸಿಸಿದರು.
ಆಯಾಯ ಪ್ರದೇಶಗಳ ವಿಭಿನ್ನ ಸಂಸ್ಕøತಿ, ಜೀವನ ಕ್ರಮಗಳನ್ನು ಮಕ್ಕಳು ಅರಿತುಕೊಳ್ಳಬೇಕು. ಪೋಷಕರು ಕಲಿಸಬೇಕು. ಶಿಕ್ಷಕರು ತಿಳಿಹೇಳಬೇಕು. ಅಂತಹ ಮಕ್ಕಳಲ್ಲಿ ತನ್ನ ಊರು, ನಾಡು, ದೇಶದ ಮೇಲಿನ ಪ್ರೀತಿ, ಭಕ್ತಿ ಅಚಲವಾಗಿರಲು ಕಾರಣವಾಗುತ್ತದೆ ಎಂದರು.
ವೇದಿಕೆಯಲ್ಲಿ ಮಹಂತ ಶಿವಲಿಂಗ, ಬಸವಲಿಂಗ ಶಿವಯೋಗಿ ಸ್ವಾಮಿಜಿ, ನಿಶ್ಚಲ ನಿರಂಜನ ದೇಶಿಕೇಂದ್ರ, ಮುತ್ತಿನಕಂತೆ ಸ್ವಾಮೀಜಿ, ಅಕಾಡೆಮಿ ಸದಸ್ಯರಾದ ನಾಪಂಡ ಗಣೇಶ, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಕಂಬೆಯಂಡ ಡೀನಾ ಬೋಜಣ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ, ಪೊನ್ನಿರ ಯು.ಗಗನ್, ಕುಡಿಯರ ಕಾವೇರಪ್ಪ ಇನ್ನಿತರರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
