ಕಾಲ್‌ಸೆಂಟರ್ ಸಿಬ್ಬಂದಿ ಅಪಹರಣ | ಹೆಡ್ ಕಾನ್ಸ್ಟೇಬಲ್ ಸೇರಿ 8 ಮಂದಿ ಪೊಲೀಸ್ ಬಲೆಗೆ

Nov 23, 2025 - 21:13
 0  519
ಕಾಲ್‌ಸೆಂಟರ್ ಸಿಬ್ಬಂದಿ ಅಪಹರಣ |  ಹೆಡ್ ಕಾನ್ಸ್ಟೇಬಲ್ ಸೇರಿ 8 ಮಂದಿ ಪೊಲೀಸ್  ಬಲೆಗೆ
Photo credit:Etv Bharath (ಫೋಟೋ: ಅಪಹರಣಕ್ಕೆ ಬಳಸಿದ್ದ ಕಾರು)

ಬೆಂಗಳೂರು: ನಗರದ ಕೋರಮಂಗಲದಲ್ಲಿ ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಹೆಡ್ ಕಾನ್ಸ್ಟೇಬಲ್ ಸೇರಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಬೆಳಗಿನ ಜಾವ 1 ಗಂಟೆ ಸಂದರ್ಭದಲ್ಲಿ ಕೋರಮಂಗಲದಲ್ಲಿರುವ ಗ್ಲೋಬಲ್ ಕನೆಕ್ಟ್ ಟೆಲಿಕಾಂ ಪ್ರೈ.ಲಿ. ಕಾಲ್‌ಸೆಂಟರ್‌ಗೆ ಬಂದಿದ್ದ ಆರೋಪಿಗಳು ‘ನಾವು ಪೊಲೀಸರು’ ಎಂದು ಸಿಬ್ಬಂದಿಯನ್ನು ಬೆದರಿಸಿದ್ದಾರೆ. ನಂತರ ಪವನ್, ರಾಜ್ವೀರ್, ಆಕಾಶ್ ಮತ್ತು ಅನಸ್ ಎಂಬ ನಾಲ್ವರನ್ನು ಕೆಳಗೆ ಕರೆದುಕೊಂಡು ಹೋಗಿ ಅಪಹರಿಸಲಾಗಿದೆ.

ಆರೋಪಿಗಳು 25 ಲಕ್ಷ ರೂ. ಬೇಡಿಕೆ ಇಟ್ಟಿದ್ದು, ಕಂಪೆನಿಯ ಆಪರೇಷನಲ್ ಮ್ಯಾನೇಜರ್ ಖಾತೆಯಿಂದ 18 ಲಕ್ಷ ರೂ. ಆನ್‍ಲೈನ್ ಮೂಲಕ ವರ್ಗಾಯಿಸಲಾಗಿದೆ. ಬೆಳಗ್ಗೆ 4 ಗಂಟೆ ವೇಳೆಗೆ ಸಿಬ್ಬಂದಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತನಿಖೆಗೆ ನಾಲ್ಕು ತಂಡ ರಚಿಸಿದ ಪೊಲೀಸರು, ಹೊಸಕೋಟೆಯ ಲಾಡ್ಜ್‌ನಲ್ಲಿ ಆರೋಪಿಗಳು ಅಡಗಿದ್ದನ್ನು ಪತ್ತೆಹಚ್ಚಿ ಬೆಳಗ್ಗೆ 11 ಗಂಟೆಗೆ ದಾಳಿ ನಡೆಸಿ ಅಪಹೃತರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಘಟನೆಯಲ್ಲಿ ಬಳಸಿದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಬಂಧಿತರಲ್ಲಿ ಚಲಪತಿ, ಭರತ್, ಪವನ್, ಪ್ರಸನ್ನ, ಅತೀಕ್, ಜಬೀವುಲ್ಲಾ ಸೇರಿದಂತೆ ಎಂಟು ಮಂದಿ ಸೇರಿದ್ದಾರೆ. ಇವರಲ್ಲಿ ಚಲಪತಿ ಕೋಲಾರದ ಹೆಡ್ ಕಾನ್ಸ್ಟೇಬಲ್ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

ಇತ್ತೀಚೆಗೆ ಇದೇ ಕಾಲ್‌ಸೆಂಟರ್ ಮೇಲೆ ನಡೆದಿದ್ದ ಪೊಲೀಸರು ದಾಳಿ ಪ್ರಕರಣವನ್ನೇ ಬಂಡವಾಳ ಮಾಡಿಕೊಂಡು ಆರೋಪಿಗಳು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಇನ್ನಷ್ಟು ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0