ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ಭಾವಚಿತ್ರ ಸೆರೆಹಿಡಿಯಿರಿ 100 ರೂ ಬಹುಮಾನ ಗೆಲ್ಲಿ: ಕಸ ವಿಲೇವಾರಿ ಸಮಸ್ಯೆ ನೀಗಿಸಲು ಹೊಸ ಮಾರ್ಗ‌ ಕಂಡುಕೊಂಡ ವಿರಾಜಪೇಟೆ ಪುರಸಭೆ

ಸಾರ್ವಜನಿಕ ಸ್ಥಳಗಳಲ್ಲಿ  ಕಸ ಹಾಕುವವರ ಭಾವಚಿತ್ರ ಸೆರೆಹಿಡಿಯಿರಿ 100 ರೂ ಬಹುಮಾನ ಗೆಲ್ಲಿ:  ಕಸ ವಿಲೇವಾರಿ ಸಮಸ್ಯೆ ನೀಗಿಸಲು ಹೊಸ ಮಾರ್ಗ‌ ಕಂಡುಕೊಂಡ ವಿರಾಜಪೇಟೆ ಪುರಸಭೆ
ಸಭೆಯಲ್ಲಿ ಹಿರಿಯ ಸದಸ್ಯ ಪೃಥ್ವಿನಾಥ್ ಹಾಗೂ ಸದಸ್ಯರ ನಡುವೆ ವಾಗ್ವಾದ ನಡೆದ ಸಂದರ್ಭ

ವಿರಾಜಪೇಟೆ:ನಗರದಲ್ಲಿ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಿಗಾಗಿ ವಿನೂತನವಾಗಿ ಕಸ ವಿಲೇವಾರಿ ಮಾಡಲು ಸ್ವಚ್ಛತೆಗಾಗಿ ಕಾರ್ಯಕ್ರಮಗಳು ಹಮ್ಮಿಕೊಂಡರು ಸಮಸ್ಯೆ ಗಾಢವಾಗಿ ಬೆಳೆಯುತ್ತಿದೆ. ಹಿನ್ನೆಲೆಯಲ್ಲಿ ವಿರಾಜಪೇಟೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಕಸ ಹಾಕುವವರ ಭಾವಚಿತ್ರ ಸೆರೆಹಿಡಿದು 100ರೂ ಗೆಲ್ಲಿರಿ ಎಂಬ ವಿನೂತನ ಕಾರ್ಯಕ್ಕೆ ಪುರಸಭೆ ಅಣಿಯಾಯಿತು.

ಪುರಸಭೆ ವಿರಾಜಪೇಟೆ ಸಾಮಾನ್ಯ ಸಭೆಯು ಪುರಸಭೆ ಅಧ್ಯಕ್ಷರಾದ ಮನೆಯಪಂಡ ದೇಚಮ್ಮ ಕಾಳಪ್ಪ ಅಧ್ಯಕ್ಷತೆಯಲ್ಲಿ ಮುಖ್ಯಾಧಿಕಾರಿ ಗಳಾದ ಪಿ.ಕೆ. ನಾಚಪ್ಪ ಅವರ ಉಪಸ್ಥಿತಿ ಯಲ್ಲಿ ಪುರಸಭೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. 

ಕಸ ವಿಲೇವಾರಿ ಮತ್ತು ಕಸದ ಸಮಸ್ಯೆಗಳ ಬಗ್ಗೆ ಹಾಗೂ ಪೌರ ಕಾರ್ಮಿಕರಿಗೆ ದಿನನಿತ್ಯ ಅನುಭವಿಸುವ ಯಾತನೆಯ ಬಗ್ಗೆ ಸಮಸ್ಯೆ ಪರಿಹಾರ ತಿಳಿಸುವಂತೆ ಅಧ್ಯಕ್ಷರು ಸದಸ್ಯರಲ್ಲಿ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ್ದ ಸದಸ್ಯರಾದ ಡಿ.ಪಿ.ರಾಜೇಶ್ ಅವರು ನಗರದಲ್ಲಿ ಕೆಲವು ಆಯ್ದ ಭಾಗಗಳಲ್ಲಿ ವಿನೂತನವಾಗಿ ಕಸ ಮುಕ್ತಿಗಾಗಿ ಯೋಜನೆ ತಯಾರಿಸಿದರು ಯಾವುದೇ ಪರಿಹಾರ ಕಾಣದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು, ಕಸ ಹಾಕುವವರ ಸ್ಥಳದಲ್ಲೇ ಚಿತ್ರ ಸೆರೆಹಿಡಿದು ಸಾಮಾಜಿಕ ಜಾಲತಾಣದ ಮೂಲಕ ರವಾನೆ ಮಾಡಿದಲ್ಲಿ ಅವರಿಗೆ ಪುರಸಭೆ ವತಿಯಿಂದ 100 ರೂ ಬಹುಮಾನ ನೀಡುವಂತೆ ಘೋಷಣೆ ಮಾಡಿ ಇದರಿಂದ ಕಸ ಹಾಕುವವರ‌ ಮಾನ ಹರಾಜಾಗುತ್ತದೆ. ಪತ್ರಿಕೆಗಳಲ್ಲಿ ಪ್ರಸಾರ ಮಾಡಿ,ಅಲ್ಲದೇ ಕಸ ಹಾಕಿದವರ ಕಸವನ್ನು ಮನೆ ಮುಂದೆ ಹಾಕಿ , ಮುಂದೆ ಕಸ ಹಾಕುವುದನ್ನು ನಿಲ್ಲಿಸುತ್ತಾರೆ ಎಂದು ಹೇಳಿದರು. ಇದಕ್ಕೆ ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ಒಪ್ಪಿಗೆ ಸೂಚಿಸಿದರು.

ನಗರದ ಅಭಿವೃದ್ಧಿಗಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಸುಮಾರು 20 ಕೋಟಿ ಅನುದಾನ ಶ್ರಮವಹಿಸಿ ತಂದಿರುತ್ತಾರೆ. ಇದೀಗ ಮೊದಲ ಹಂತದ ಸುಮಾರು 9 ಕೋಟಿ ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ತಾ. 24 ರಂದು ನಗರದ ವಿವಿಧ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಲಿದ್ದಾರೆ‌ ಎಂದು ಸಭೆಯಲ್ಲಿ ಅಧ್ಯಕ್ಷರು ಮಾಹಿತಿ ನೀಡಿದರು. ಮುಂದಿನ ಹಂತದ ಕಾಮಗಾರಿಗಳಿಗೆ ಟೆಂಡರ್ ಮುಗಿದ ಬಳಿಕ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ನಗರದಲ್ಲಿ ರಸ್ತೆ ಅಗಲೀಕರಣ ಮತ್ತು ವಾಹನ ದಟ್ಟಣೆಯ ಬಗ್ಗೆ ಸಾರ್ವಜನಿಕ ಪುಕಾರುಗಳು ಬರುತ್ತಿರುವ ಹಿನ್ನಲೆಯಲ್ಲಿ ಮುಖ್ಯ ರಸ್ತೆಯ ಬದಿಯಲ್ಲಿ ಪುರಾತನ ಕಟ್ಟಡಗಳನ್ನು ಕೆಡವಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣ ಮಾಡುವ ವ್ಯಕ್ತಿಗಳು ವಾಹನ ನಿಲುಗಡೆ ಗೆ ಸ್ಥಳ ಬಿಡದೆ ಕಟ್ಟಡ ಮುಂದೆ ಬೇಲಿ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನು 

ತೆರವುಗೊಳಿಸಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ ಅವರು ಸಭೆಯಲ್ಲಿ ಮನವಿ ಮಾಡಿದರು. ಅಧ್ಯಕ್ಷರು ಮುಂದುವರೆದು ಪುರಸಭೆ ಸಿಬ್ಬಂದಿಗಳೊಂದಿಗೆ ಪೊಲೀಸರ ಸಹಕಾರ ಪಡೆದು ಬೇಲಿ ತೆರವುಗೊಳಿಸಲು ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.

ಸಾಮಾನ್ಯ ಸಭೆಗೆ ಮುನ್ನ ಮಾತನಾಡಲು ಅವಕಾಶ ನೀಡಿ ಎಂದು ಹಿರಿಯ ಸದಸ್ಯರಾದ ಸಿ.ಕೆ. ಪೃಥ್ವಿನಾಥ್ ಪಟ್ಟು ಹಿಡಿದು ಕೊಂಚ ಸಮಯ ಸಭೆಯಲ್ಲಿ ಗೊಂದಲ ಸೃಷ್ಟಿ ಮಾಡಿದರು. ವಿವಾದಗಳು ತಾರಕಕ್ಕೇರಿದಾಗ ಪೊಲೀಸರ ಪ್ರವೇಶವಾಯಿತು. ಸದಸ್ಯರ ಸಮಯೋಚಿತ ವಿವೇಚನೆಯಿಂದ ಗೊಂದಲ ತಿಳಿಯಾಗಿ ಪೊಲೀಸರು ಹೊರ ನಡೆದರು.ಸಭೆಯ ಆರಂಭದಲ್ಲಿ ಅಗಲಿದ ಸದಸ್ಯರಾದ ಬೋವೇರಿಯಂಡ ಆಶಾ ಸುಬ್ಬಯ್ಯ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಪುರಸಭೆಯ ಉಪಾಧ್ಯಕ್ಷರಾದ ಫಸಿಹಾ ತಬುಸ್ಸಂ, ಸದಸ್ಯರಾದ ಮೊಹಮ್ಮದ್ ರಾಫಿ, ಹೆಚ್.ಎಸ್. ಮತೀನ್,ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್, ಆರೋಗ್ಯ ಸಮಿತಿ ಅದ್ಯಕ್ಷರಾದ ಪೂರ್ಣಿಮಾ, ಸುನಿತಾ ಜೂನಾ, ಅನಿತಾ ಕುಮಾರ್,ಸುಭಾಷ್, ರಜನೀಕಾಂತ್ ವಿ.ಆರ್., ಅಗಸ್ಟೀನ್ ಬೆನ್ನಿ, ಯಶೋಧ ಮಂದಣ್ಣ,ಹಾಗೂ ಸರ್ಕಾರದ ನಾಮ ನಿರ್ದೇಶಿತ ಸದಸ್ಯರು ,ಪುರಸಭೆ ಅಭಿಯಂತರ ಹೇಮ ಕುಮಾರ್, ಪರಿಸರ ಅಭಿಯಂತರ ರೀತು ಸಿಂಗ್,ಕಂದಾಯ ಅಧಿಕಾರಿ ಸೋಮೇಶ್ ,ಪುರಸಭೆ ಯ ಸಿಬ್ಬಂದಿಗಳು ಹಾಜರಿದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ