ಅತೀ ಶೀಘ್ರದಲ್ಲಿ ಕಾರ್ಡಿಯಾಲಜಿ ಯೂನಿಟ್ ಲಭ್ಯ: ಶಾಸಕ ಡಾ.ಮಂತರ್ ಗೌಡ
ಕುಶಾಲನಗರ: ಜಿಲ್ಲೆಯಲ್ಲಿ ಕಾರ್ಡಿಯಾಲಜಿ ಯೂನಿಟ್ ತೆರೆಯಲು ಸರ್ಕಾರದ ಆದೇಶವಾಗಿದ್ದು, ಆದಷ್ಟು ಬೇಗನೇ ಜಿಲ್ಲೆಯಲ್ಲಿ ಕಾರ್ಡಿಯಾಲಜಿ ಯೂನಿಟ್ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡರವರು ತಿಳಿಸಿದರು.
ಕುಶಾಲನಗರ ಸೈರಸ್ ಆಸ್ಪತ್ರೆಯಲ್ಲಿ ಮಾಧ್ಯಮ ಸ್ಪಂದನದ ವತಿಯಿಂದ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಾರಕ್ಕೆ ೪೦೦-೪೫೦ ರೋಗಿಗಳು ಚಿಕಿತ್ಸೆಗಾಗಿ ಹೊರಗೆ ತೆರಳುತ್ತಿದ್ದಾರೆ. ಆದ್ದರಿಂದ ಜಿಲ್ಲೆಯ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಹಂತಹಂತವಾಗಿ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಕೊಡುವ ಕೆಲಸಕ್ಕೆ ಸರ್ಕಾರ ಮುಂದಾಗಲಿದೆ ಎಂದರು.
ಮಾಧ್ಯಮ ಸ್ಪಂದನದಿಂದ ಯಶಸ್ವಿ ರಕ್ತದಾನ ಶಿಬಿರ ಆಯೋಜಿಸಿದ್ದಾರೆ. ರಕ್ತದಾನ ಮಾಡುವ ಮೂಲಕ ಅದೆಷ್ಟೋ ಜೀವಗಳನ್ನು ಉಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದೀರಾ. ಮಾಧ್ಯಮ ಮಿತ್ರರ ಸಮಾಜಮುಖಿ ಕೆಲಸಗಳಿಗೆ ಸದಾ ನನ್ನ ಸಹಕಾರ ಇರಲಿದೆ ಎಂದರು.
ಮಾಧ್ಯಮ ಸ್ಪಂದನದ ಸಂಸ್ಥಾಪಕರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಸುವ ಜವಾಬ್ದಾರಿ ಶಾಸಕರ ಹೆಗಲ ಮೇಲಿದೆ. ಈ ದಿಸೆಯಲ್ಲಿ ಯುವ ಶಾಸಕ ಡಾ.ಮಂತರ್ ಗೌಡರವರು ಕಾರ್ಯೋನ್ಮುಖರಾಗಬೇಕು ಎಂದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಬಿ.ಆರ್.ಸವಿತಾ ರೈ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಎಲ್ಲರಿಗೂ ಸಮಾನವಾದ ಚಿಕಿತ್ಸೆ ದೊರೆಯುತ್ತಿಲ್ಲ. ಇದರ ಬಗ್ಗೆ ಶಾಸಕರು ಗಮನಹರಿಸಬೇಕು ಎಂದರು.
ಸೈರಸ್ ಆಸ್ಪತ್ರೆಯ ಮೂಳೆ ಶಸ್ತ್ರ ಚಿಕಿತ್ಸೆ ತಜ್ಞರಾದ ಟಿ.ಪಿ.ಜಿನಾಶ್ ಮಾತನಾಡಿ, ಮಾಧ್ಯಮ ಸ್ಪಂದನದ ರಕ್ತದಾನ ಶಿಬಿರದಲ್ಲಿ ಸೈರಸ್ ಆಸ್ಪತ್ರೆಯ ಸಹಯೋಗವಿರುವುದು ಸಂತಸದ ಸಂಗತಿ. ಸೈರಸ್ ಆಸ್ಪತ್ರೆ ಸಮಾಜಮುಖಿ ಕೆಲಸಗಳಿಗೆ ಸದಾ ಸಿದ್ಧವಿರಲಿದೆ ಎಂದರು.
ಈ ಸಂದರ್ಭ ಸೈರಸ್ ಆಸ್ಪತ್ರೆ ವತಿಯಿಂದ ಶಾಸಕರನ್ನು ಗೌರವಿಸಲಾಯಿತು. ಶಾಸಕರು ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿಸಿದರು. ೪೨ ಬಾರಿ ರಕ್ತದಾನ ಮಾಡಿದ ಮಾಧ್ಯಮ ಸ್ಪಂದನದ ಸದಸ್ಯ ಅರುಣ್ ಕುಮಾರ್ ಅವರನ್ನು ಶಾಸಕರು ಅಭಿನಂದಿಸಿದರು.
ಈ ಸಂದರ್ಭ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ.ಕೆ.ಪಿ.ಕರುಂಬಯ್ಯ, ಕುಶಾಲನಗರ ತಾಲ್ಲುಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಮ್.ಎನ್.ಚಂದ್ರಮೋಹನ್, ರಕ್ತದಾನ ಶಿಬಿರದ ಸಂಚಾಲಕರಾದ ಕೆ.ಬಿ.ಶಂಶುದ್ಧೀನ್, ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್, ತಾಲ್ಲೂಕು ಸಂಘದ ಉಪಾಧ್ಯಕ್ಷ ಮುಸ್ತಫಾ, ನಿರ್ದೇಶಕರಾದ ರಘು ಹೆಬ್ಬಾಲೆ, ಎಚ್.ಸಿ.ಜಯಪ್ರಕಾಶ್, ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕರಾದ ಸಂತೋಷ್, ಪತ್ರಕರ್ತರಾದ ಪ್ರದೀಪ್, ಕಿಶೋರ್, ವಿಜಯ್ ಹಾಗೂ ಇನ್ನಿತರರು ಇದ್ದರು.

