ಕೂಡಿಗೆ ಡಯಟ್ ಸಂಸ್ಥೆಯಲ್ಲಿ ನಾಳೆ ವೃತ್ತಿ ಮಾರ್ಗದರ್ಶನ ಮೇಳ2026: ಯಶಸ್ಸಿಗೆ ಪ್ರಾಂಶುಪಾಲರ ಮನವಿ
ಕೂಡಿಗೆ: ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ – ಕರ್ನಾಟಕದ ರಾಜ್ಯ ನಿರ್ದೇಶನಾಲಯದ ನಿರ್ದೇಶನದಂತೆ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಯಲ್ಲಿ ಆರಂಭಿಸಲಾಗಿರುವ ಜಿಲ್ಲಾ ವೃತ್ತಿಪರ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ಘಟಕದ ವತಿಯಿಂದ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯಲ್ಲಿ ಶುಕ್ರವಾರ( ಮಾ.27 ರಂದು ) ಜಿಲ್ಲಾ ವೃತ್ತಿಪರ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ( ಕೆರಿಯರ್ ) ಮೇಳವನ್ನು ಬೆಳಿಗ್ಗೆ 10.00 ಗಂಟೆಗೆ ಏರ್ಪಡಿಸಲಾಗಿದೆ ಎಂದು ಡಯಟ್ ಸಂಸ್ಥೆಯ ಪ್ರಾಂಶುಪಾಲರು ಆದ ಜಿಲ್ಲಾ ಪದನಿಮಿತ್ತ ಉಪನಿರ್ದೇಶಕರು(ಅಭಿವೃದ್ದಿ) ರಾಮಚಂದ್ರ ರಾಜೇ ಅರಸ್ ಗುರುವಾರ ತಿಳಿಸಿದರು.
ಕೂಡಿಗೆ ಡಯಟ್ ಸಂಸ್ಥೆಯಲ್ಲಿ ನಡೆಯಲಿರುವ ಜಿಲ್ಲಾ ವೃತ್ತಿಪರ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ಮೇಳಕ್ಕೆ ಸಂಸ್ಥೆಯ ಆವರಣದಲ್ಲಿ ವಿವಿಧ ಇಲಾಖೆಗಳು ಮತ್ತು ವಿವಿಧ ಸಂಸ್ಥೆಗಳ ನಡೆಯಲಿರುವ ಪ್ರದರ್ಶನ ಹಾಗೂ ಮಾಹಿತಿಗಳಿಗೆ ಸಿದ್ದಪಡಿಸಿರುವ ಮಳಿಗೆ( ಸ್ಟಾಲ್) ಗಳ ವ್ಯವಸ್ಥೆಯನ್ನು ಪರಿಶೀಲಿಸಿ ಮಾತನಾಡಿದರು. ಈ ವೃತ್ತಿಪರ ಮೇಳದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಅವರ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಮುಂದಿನ ವೃತ್ತಿ ಜೀವನದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳು, ಬ್ಯಾಂಕ್ ಗಳು ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮಳಿಗೆ (ಸ್ಟಾಲ್)ಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು. ಸರ್ಕಾರಿ ವಿವಿಧ ಇಲಾಖೆಗಳು ಹಾಗೂ ಬ್ಯಾಂಕ್ ಗಳು ಭಾಗವಹಿಸಲಿದ್ದು ತಜ್ಞರಿಂದ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಸೂಕ್ತ ತಿಳುವಳಿಕೆ ಮತ್ತು ವಿವಿಧ ಇಲಾಖೆಗಳಿಂದ ಸಿಗುವ ಮಾಹಿತಿಗಳು, ಬ್ಯಾಂಕ್ ಗಳಿಂದ ಲಭ್ಯವಾಗುವ ಶಿಕ್ಷಣ ಸಾಲ ಸೌಲಭ್ಯಗಳು ಇತ್ಯಾದಿ ಮಾಹಿತಿ ಬಗ್ಗೆ ಸಂಪೂರ್ಣ ವಿವರ ಲಭ್ಯವಾಗುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಈ ಕುರಿತ ತರಬೇತಿಗಳು ಲಭ್ಯವಾಗಲಿವೆ ಎಂದು ಸಂಸ್ಥೆಯ ಪ್ರಾಂಶುಪಾಲರು ರಾಮಚಂದ್ರ ರಾಜೇ ಅರಸ್ ವಿವರಿಸಿದರು.
ಈ ವೃತ್ತಿ ಮಾರ್ಗದರ್ಶನ ಮೇಳದಲ್ಲಿ 10 ನೇ ತರಗತಿ ಮತ್ತು 12 ನೇ ತರಗತಿ ನಂತರದ ಶಿಕ್ಷಣ ಮಾರ್ಗಗಳು, ಜೊತೆಗೆ ಸಿ.ಇ.ಟಿ, ನೀಟ್, ಜೆ.ಇ.ಇ. ಪರೀಕ್ಷೆ ಮುಂತಾದ ಕೋರ್ಸ್ಗಳ ಪ್ರವೇಶ ಪರೀಕ್ಷೆಗಳ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳು, ಬ್ಯಾಂಕ್ ಗಳು ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮಳಿಗೆ (ಸ್ಟಾಲ್)ಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.
9 ರಿಂದ 12 ನೇ ತರಗತಿ ವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ವೃತ್ತಿಪರ ಕೋಸ್ ðಗಳ ವಿದ್ಯಾರ್ಥಿಗಳು, ಅವರ ಪೋಷಕರು, ಮಹಿಳೆಯರು ಹಾಗೂ ಸಾರ್ವಜನಿಕರು ಈ ವೃತ್ತಿ ಮೇಳಕ್ಕೆ ಆಗಮಿಸಿ ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಪ್ರಾಂಶುಪಾಲರಾದ ರಾಮಚಂದ್ರ ರಾಜೇ ಅರಸ್ ಮನವಿ ಮಾಡಿದ್ದಾರೆ.
ಮೇಳದ ಪೂರ್ವಸಿದ್ಧತೆ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಹಿರಿಯ ಉಪನ್ಯಾಸಕ ಎಚ್.ಎಚ್.ಸತೀಶ್, ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಎನ್.ವಿ.ಸ್ವಾಮಿ, ಬಿ.ಎನ್.ಪುಷ್ಪ, ಉಪನ್ಯಾಸಕರಾದ ವಿ.ವಿಜಯ್, ಕೆ.ಎಸ್.ನಳಿನಾಕ್ಷಿ, ಪಿ.ಪಿ.ಗಾಯತ್ರಿ, ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ತಾಂತ್ರಿಕ ಸಲಹೆಗಾರ ಹರೀಶ್ , ಶಿಕ್ಷಕರು ಇದ್ದರು.