ಚಿಕ್ಕಬಳ್ಳಾಪುರ: ಪತಿಯ ಕಿರುಕುಳಕ್ಕೆ ಬೇಸತ್ತು ನವ ವಿವಾಹಿತೆ ಆತ್ಮಹತ್ಯೆ| ಡೆತ್ ನೋಟ್ ನಲ್ಲಿ ಪತಿಯ ಅನ್ಯಸಂಬಂಧದ ಬಗ್ಗೆ ಉಲ್ಲೇಖ
ಚಿಕ್ಕಬಳ್ಳಾಪುರ, ಅ. 9: ಪತಿಯ ಕಿರುಕುಳ ಮತ್ತು ಅನ್ಯಸಂಬಂಧದ ಶಂಕೆಯಿಂದ ಬೇಸತ್ತು ನವ ವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡಾವಲಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮೃತರನ್ನು ಕೆ.ಎಸ್. ಜಯಶ್ರೀ (25) ಎಂದು ಗುರುತಿಸಲಾಗಿದ್ದು, ಶಿಡ್ಲಘಟ್ಟ ತಾಲ್ಲೂಕಿನ ಕೊಂಡಪ್ಪನಹಳ್ಳಿಯ ಚಂದ್ರಶೇಖರ್ ಅವರೊಂದಿಗೆ ಸುಮಾರು ಆರು ತಿಂಗಳ ಹಿಂದೆ ವಿವಾಹವಾಗಿದ್ದರು. ಆರಂಭದಲ್ಲಿ ದಾಂಪತ್ಯ ಜೀವನ ಸುಸೂತ್ರವಾಗಿದ್ದರೂ, ಬಳಿಕ ಚಂದ್ರಶೇಖರ್ ಮತ್ತೊಬ್ಬ ಯುವತಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಜಯಶ್ರೀಗೆ ತಿಳಿದು ಬಂದಿದೆ.
ಈ ಕುರಿತು ಜಯಶ್ರೀ ಪತಿಯನ್ನು ಪ್ರಶ್ನಿಸಿದಾಗ, ಚಂದ್ರಶೇಖರ್ ಕೋಪಗೊಂಡು ಆಕೆಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಲಾಗಿದೆ. ಇದರಿಂದ ಮನ ನೊಂದ ಜಯಶ್ರೀ ತನ್ನ ತವರಾದ ಕೊಂಡಾವಲಹಳ್ಳಿಯಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ನಂತರ ಗ್ರಾಮಸ್ಥರು ಚಂದ್ರಶೇಖರ್ ಬಂಧನದವರೆಗೆ ಶವ ಸಂಸ್ಕಾರ ನಡೆಸುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಮಾಹಿತಿ ಪಡೆದ ಗುಡಿಬಂಡೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
“ಮದುವೆ ಆಗುವಾಗ ಇಷ್ಟ ಪಟ್ಟು ಮಾಡಿಕೊಳ್ಳಬೇಕು, ಕಷ್ಟ ಪಟ್ಟು ಅಲ್ಲ. ನಾನು ಇವರಿಬ್ಬರ ಮಧ್ಯೆ ಯಾಕೆ ಅಡ್ಡ ಬರಬೇಕು? ಇಬ್ಬರೂ ಯಾವಾಗಲೂ ಫೋನ್, ಮೆಸೇಜ್ ಮಾಡುತ್ತಿರುತ್ತಾರೆ. ಯಾರ ಫೋನ್ ಅಂತ ಕೇಳಿದರೆ ‘ಫ್ರೆಂಡ್’ ಅಂತ ಹೇಳ್ತಾರೆ. ಎಷ್ಟೇ ಕ್ಲೋಸ್ ಫ್ರೆಂಡ್ ಆದರೂ ಇಷ್ಟು ಸಂಪರ್ಕ ಇರೋದು ಏಕೆ? ಇದನ್ನು ಕೇಳಿದರೆ ಕೋಪಗೊಂಡು ನನ್ನ ಜೊತೆ ಮಾತನಾಡೋದಿಲ್ಲ. ಇವರಿಗೆ ನಾನು ಇಷ್ಟವಿಲ್ಲ ಎಂಬುದು ಮದುವೆಯ ಬಳಿಕ ಗೊತ್ತಾಯಿತು. ಈ ವಿಚಾರ ನಮ್ಮ ಅಪ್ಪ, ಅಮ್ಮಗೂ ಗೊತ್ತಿಲ್ಲ,” ಎಂದು ಜಯಶ್ರೀ ಅವರು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
What's Your Reaction?
Like
0
Dislike
0
Love
0
Funny
1
Angry
0
Sad
3
Wow
0
