ನಾಪೋಕ್ಲುವಿನಲ್ಲಿ ಎಸ್ ಎನ್ ಡಿ ಪಿ ಶಾಖೆಯ ಸೌಹಾರ್ದ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ :ಕ್ರೀಡೆಗಳು ಪರಸ್ಪರ ಸೌಹಾರ್ದತೆಯ ಸಂಕೇತ -ಲೋಕೇಶ್ ಅಭಿಮತ

Nov 20, 2025 - 12:55
 0  264
ನಾಪೋಕ್ಲುವಿನಲ್ಲಿ ಎಸ್ ಎನ್ ಡಿ ಪಿ ಶಾಖೆಯ ಸೌಹಾರ್ದ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ   :ಕ್ರೀಡೆಗಳು ಪರಸ್ಪರ ಸೌಹಾರ್ದತೆಯ ಸಂಕೇತ -ಲೋಕೇಶ್ ಅಭಿಮತ

ನಾಪೋಕ್ಲು : ಕ್ರೀಡೆಗಳ ಆಯೋಜನೆಯು ಸಮಾಜದಲ್ಲಿ ಪರಸ್ಪರ ಸೌಹಾರ್ದತೆಯ ಸಂಕೇತವನ್ನು ಪ್ರತಿಪಾದಿಸುತ್ತದೆ ಎಂದು ಜಿಲ್ಲಾ ಎಸ್ ಎನ್ ಡಿ ಪಿ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಹೇಳಿದರು.

ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆ ವತಿಯಿಂದ 171ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ ಪ್ರಯುಕ್ತ ಆಯೋಜಿಸಲಾದ ಕ್ರಿಕೆಟ್, ಹಗ್ಗಜಗ್ಗಾಟ ಸೌಹಾರ್ದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ದೀಪ ಬೆಳಗಿಸುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು,

 ಕ್ರೀಡೆಯು ವ್ಯಾಯಾಮ ಮಾತ್ರವಲ್ಲದೆ ಮನೋರಂಜನೆ ಕೂಡ ಆಗಿದೆ. ಕ್ರೀಡೆಗಳ ಆಯೋಜನೆಯಿಂದ ಸಮಾಜದಲ್ಲಿ ಪರಸ್ಪರ ಸೌಹಾರ್ದತೆ ಹೆಚ್ಚಾಗಲು ಕಾರಣವಾಗಿದೆ.ಕ್ರೀಡೆ ಒಂದು ರೀತಿಯಲ್ಲಿ ಆರ್ಥಿಕವಾಗಿ ಸದೃಢವಾಗಲು ಮೂಲ ಕಾರಣ.ಸಮಾಜದಲ್ಲಿ ಯಾವುದೇ ಧರ್ಮ,ಜಾತಿ, ರಾಜಕೀಯವಿಲ್ಲದೆ ಕ್ರೀಡಾ ಪ್ರತಿಭೆಗಳಿಗೆ ಗೌರವ ಸಿಗುವುದು ಕ್ರೀಡೆಯಿಂದ ಮಾತ್ರ ಎಂದರು.

ವಿವಿಧ ಭಾಗಗಳಿಂದ ಬರುವ ಕ್ರೀಡಾ ಪ್ರತಿಭೆಗಳು ಪರಸ್ಪರ ಸೌಹಾರ್ದತೆಯ ಸಂಬಂಧವನ್ನು ಬೆಳೆಸಲು ಕ್ರೀಡೆ ಒಂದು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಜಿಲ್ಲಾ ಎಸ್ ಎನ್ ಡಿ ಪಿ ಸಂಘಟನೆಯ ಕಾರ್ಯದರ್ಶಿ ಪ್ರೇಮಾನಂದ ಅವರು ಮಾತನಾಡಿ ಎಸ್ ಎನ್ ಡಿ ಪಿ ಸಂಘಟನೆ 1903ರಲ್ಲಿ ಮಹಾನ್ ಮಾನವತಾವಾದಿ ಶ್ರೀ ನಾರಾಯಣ ಗುರುಗಳು ಹುಟ್ಟು ಹಾಕಿದ ಬಲಿಷ್ಠ ಸಂಘಟನೆಯಾಗಿದೆ.ಈ ಸಂಘಟನೆಯು ಇಂದು ಕೊಡಗು ಜಿಲ್ಲೆಯಾದ್ಯಂತ 18 ಸಾವಿರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿದೆ. ಶ್ರೀ ನಾರಾಯಣಗಳು ಗುರುಗಳ ಆದರ್ಶ ಸಿದ್ಧಾಂತಗಳನ್ನು ಪಾಲಿಸಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆ ಯೋಜನೆ ಮಾಡುವ ಮೂಲಕ ಸಂಘಟನೆ ಇಂದು ಯಶಸ್ಸನ್ನು ಕಂಡಿದೆ.ಇತ್ತೀಚಿನ ದಿನಗಳಲ್ಲಿ ಪ್ರಾರ್ಥನಾ ಮಂದಿರಗಳಲ್ಲಿ ನಡೆಯುವ ಕಾರ್ಯಕ್ರಮಗಳು ಆಯಾ ಧರ್ಮದವರಿಗೆ ಮಾತ್ರ ಸೀಮಿತವಾಗಿರುವ ಸ್ಥಿತಿ ನಿರ್ಮಾಣವಾಗುತ್ತಿರುವಾಗ ಕ್ರೀಡಾ ಧರ್ಮ ಮತ್ತು ಸೇನಾ ಧರ್ಮದಲ್ಲಿ ಇರುವ ಹಾಗೇ ಎಲ್ಲಾ ಜನಾಂಗದವರನ್ನು ಒಗ್ಗೂಡಿಸಿ ಆಯೋಜಿಸಿರುವಂತಹ ಕ್ರೀಡಾಕೂಟ ಯಶಸ್ಸನ್ನು ಕಾಣಲಿ ಎಂದರು.

ನಾಪೋಕ್ಲು ಶ್ರೀ ಪೊನ್ನು ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಎ. ಕೆ. ಚಂದ್ರನ್ ಪ್ರಾಸ್ತಾವಿಕವಾಗಿ ಮಾತನಾಡಿ ಕ್ರೀಡಾಕೂಟಕ್ಕೆ ಶುಭಕೋರಿದರು.

ಎಸ್ ಎನ್ ಡಿ ಪಿ ಸಂಘಟನೆ ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ. ಸಿ. ಲವ ಅವರ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆಯಲ್ಲಿ ಭಾಗಮಂಡಲ ಎಸ್ ಎನ್ ಡಿ ಪಿ ಉಪಾಧ್ಯಕ್ಷ ಕೆ.ಎಸ್.ಸುರೇಶ್,ನಾಪೋಕ್ಲು ಆಟೋ ಚಾಲಕರ ಸಂಘದ ಅಧ್ಯಕ್ಷ ಟಿ.ಪಿ.ಸುಕುಮಾರ್, ಆಚರಣೆ ಸಮಿತಿಯ ಅಧ್ಯಕ್ಷ ಶ್ರೀಧರ್, ಮಾಜಿ ಅಧ್ಯಕ್ಷ ಟಿ.ಸಿ. ರಾಜೀವ್,ಸಿದ್ದಾಪುರ ಬಿಎಸ್ಎನ್‌ಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ಆನಂದ್,ನಾಪೋಕ್ಲು ಫ್ಯಾಕ್ಸ್ ನಿರ್ದೇಶಕ ಟಿ. ಎ. ಮಿಟ್ಟು, ನಾಪೋಕ್ಲು ಎಸ್ ಎನ್ ಡಿ ಪಿ ಶಾಖೆಯ ಕಾರ್ಯದರ್ಶಿ ಕಿಶೋರ್, ಸಹಕಾರ್ಯದರ್ಶಿ ಅಜಿತ್,ಸಂಘಟನಾ ಕಾರ್ಯದರ್ಶಿ ಕೆ.ಎಂ.ಚಿನ್ನ, ಉಪಾಧ್ಯಕ್ಷ ಎಂ.ಕೆ.ತಂಗನ್, ಸ್ವಸಹಾಯ ಮಹಿಳಾ ಸಂಘದ ಆಶಾ,ಸುಲೋಚನಾ ಸೇರಿದಂತೆ ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆಯ ಪದಾಧಿಕಾರಿಗಳು,ಸದಸ್ಯರು, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು, ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯ ಅನಿಲ್ ಪ್ರಾರ್ಥಿಸಿದರು. ರವಿ ಓಂಕಾರ್ ಸ್ವಾಗತಿಸಿ ಸರ್ವರನ್ನು ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0