ಮಾಧ್ಯಮ ಸ್ಪಂದನ ತಂಡದ ಕೊಡುಗೆ ಅಪಾರ: ವಿ.ಪಿ.ಶಶಿಧರ್ ; ಸೈರಸ್ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ

ಮಾಧ್ಯಮ ಸ್ಪಂದನ ತಂಡದ ಕೊಡುಗೆ ಅಪಾರ: ವಿ.ಪಿ.ಶಶಿಧರ್  ; ಸೈರಸ್ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ

ಕುಶಾಲನಗರ: ಸಮಾಜ ಸೇವೆಯ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಕೊಡಗಿನ ಮಾಧ್ಯಮ ಸ್ಪಂದನ ತಂಡದ ಕೊಡುಗೆ ಅಪಾರವಾದದ್ದು ಎಂದು ತಾಲ್ಲೂಕು ಗ್ಯಾರಂಡಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಭಿಪ್ರಾಯಪಟ್ಟರು. 

ಮಾಧ್ಯಮ ಸ್ಪಂದನ, ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ, ಕೊಡಗು ರಕ್ತನಿಧಿ ಕೇಂದ್ರ ಹಾಗೂ ಸೈರಸ್ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಕುಶಾಲನಗರದ ಸೈರಸ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನ ಪತ್ರಕರ್ತರು ಮಾಧ್ಯಮ ಸ್ಪಂದನ ತಂಡವನ್ನು ಕಟ್ಟಿ ಸಮಾಜಮುಖಿ ಕೆಲಸಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ‌. ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಿ ಅಮೂಲ್ಯವಾದ ಜೀವಗಳನ್ನು ಉಳಿಸುವ ಪ್ರಯತ್ನ ಮಾಡಿರುವ ಮಾಧ್ಯಮ ಸ್ಪಂದನ ತಂಡದ ಕಾರ್ಯ ಶ್ಲಾಘನೀಯ ಎಂದರು. 

ಪ್ರಾಸ್ತಾವಿಕ ನುಡಿ ನುಡಿದ ಮಾಧ್ಯಮ‌ ಸ್ಪಂದನದ ಸ್ಥಾಪಕ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವಾದ ವಿಘ್ನಗಳು ಎದುರಾಗುತ್ತವೆ‌. ಅವುಗಳನ್ನು ಮನಸ್ಸಿಗೆ ಹಾಕದೇ, ನಾವು ಮಾಡುವ ಸೇವೆಗೆ ಯಾವುದೇ ಫಲವನ್ನು ಅಪೇಕ್ಷಿಸದೇ ಕೆಲಸ ಮಾಡಬೇಕು ಎಂದ ಅವರು, ರಕ್ತದಾನ ಶಿಬಿರದ ಮೂಲಕ ಸಂಗ್ರಹಿಸುವ ರಕ್ತ ರಕ್ತನಿಧಿ ಕೇಂದ್ರಕ್ಕೆ ನೀಡಲಾಗುತ್ತದೆ‌. ಇದರಲ್ಲಿ ಯಾವುದೇ ರೀತಿಯ ದುರುಪಯೋಗ ಆಗುವುದಿಲ್ಲ ಎಂದರು. 

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಅನು ಕಾರ್ಯಪ್ಪ ಮಾತನಾಡಿ, ರಕ್ತದ ಅಗತ್ಯವಿದ್ದವರಿಗೆ ಮಾತ್ರ ರಕ್ತದ ಪ್ರಾಮುಖ್ಯತೆ ತಿಳಿದಿರುತ್ತದೆ. ಇಂತಹ ಶಿಬಿರಗಳು ಹಲವಾರು ಜೀವಗಳನ್ನು ಉಳಿಸಲು ಸಹಕಾರಿ ಎಂದರು. 

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಸವಿತಾ ರೈ ಮಾತನಾಡಿ, ಮಾಧ್ಯಮ ಸ್ಪಂದನ ತಂಡ ೨೦೧೯ ರಿಂದಲೂ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದು, ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು. 

ಗೌರವ ಅತಿಥಿಯಾಗಿ ಆಗಮಿಸಿದ್ದ ಜಿ‌.ಎಲ್.ನಾಗರಾಜ್ ಮಾತನಾಡಿ, ರಕ್ತದಾನ ಶ್ರೇಷ್ಠದಾನವಾಗಿದೆ. ಮಾಧ್ಯಮ ಸ್ಪಂದನ ತಂಡ ಬೃಹತ್ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಿದೆ. ನಿಮ್ಮ ಸೇವೆಗೆ ಧನ್ಯವಾದಗಳು. ಇನ್ನೂ ಹೆಚ್ಚು ಸಮಾಜಮುಖಿ ಕೆಲಸಗಳು ನಿಮ್ಮಿಂದಾಗಲಿ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ರಕ್ತದಾನ ಶಿಬಿರದ ಸಂಚಾಲಕ ಕೆ.ಬಿ‌.ಶಂಶುದ್ಧೀನ್ ಮಾತನಾಡಿ, ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ರಕ್ತದಾನ ಶಿಬಿರದ ಜವಾಬ್ದಾರಿ ನೀಡಿದ ಮಾಧ್ಯಮ ಸ್ಪಂದನ ತಂಡದ ಸ್ಥಾಪಕರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ ತಂಡದ ಎಲ್ಲಾ ಸದಸ್ಯರಿಗೆ ಧನ್ಯವಾದಗಳು ಎಂದರು.

ಕೊಡಗು ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ.ಕೆ.ಪಿ.ಕರುಂಬಯ್ಯರವರು, ರಕ್ತ ಹಾಗೂ ರಕ್ತದಾನದ ಪ್ರಾಮುಖ್ಯತೆ ಬಗ್ಗೆ ಉಪನ್ಯಾಸ ನೀಡಿದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಸ್ಮರಣಿಕೆ ವಿತರಿಸಲಾಯಿತು. ಶಿಬಿರದಲ್ಲಿ ಒಟ್ಟು 90 ದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಸಂಘ ಸಂಸ್ಥೆಗಳ ಪ್ರಮುಖರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ ಪತ್ರಕರ್ತರಿಗೆ ಹಾಗೂ ಕುಟುಂಬಸ್ಥರಿಗೆ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು‌. 

ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಮ್.ಎನ್‌.ಚಂದ್ರಮೋಹನ್ ಮಾತನಾಡಿದರು. ಮಾಧ್ಯಮ ಸ್ಪಂದನ ತಂಡದ ಸದಸ್ಯ ರೆಜಿತ್ ಕುಮಾರ್ ನಿರೂಪಿಸಿದರು. ಟಿ.ಆರ್‌.ಪ್ರಭುದೇವ್ ಸ್ವಾಗತಿಸಿದರು. ಎಚ್‌.ಸಿ‌.ಜಯಪ್ರಕಾಶ್ ವಂದಿಸಿದರು. 

ಈ‌ ಸಂದರ್ಭ ಸೈರಸ್ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸೆ ತಜ್ಞರಾದ ಟಿ.ಪಿ.ಜಿನಾಶ್, ಮಾಧ್ಯಮ ಸ್ಪಂದನ ತಂಡದ ಸದಸ್ಯರಾದ ಅರುಣ್, ಪತ್ರಕರ್ತರಾದ ರಘು ಹೆಬ್ಬಾಲೆ, ನಾಗರಾಜ ಶೆಟ್ಟಿ, ಮುಸ್ತಫಾ, ಶಿವರಾಜ್ಣ ಅಕ್ಷಯ್, ಪ್ರದೀಪ್, ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳು, ಸೈರಸ್ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.