ಮೇಕೆಗಳನ್ನು ಹಂಚಿಕೊಳ್ಳುವ ವಿವಾದ: ತಂದೆಯನ್ನೇ ನದಿಗೆ ತಳ್ಳಿದ ಮಗ!,

ಮೇಕೆಗಳನ್ನು ಹಂಚಿಕೊಳ್ಳುವ ವಿವಾದ: ತಂದೆಯನ್ನೇ ನದಿಗೆ ತಳ್ಳಿದ ಮಗ!,
ಮೃತ ವ್ಯಕ್ತಿ

ಚಾಮರಾಜನಗರ, ಅ.28: ಮೇಕೆಗಳನ್ನು ಹಂಚಿಕೊಳ್ಳುವ ವಿಚಾರಕ್ಕೆ ಉಂಟಾದ ವಿವಾದ ಭೀಕರ ಅಂತ್ಯ ತಂದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಸಮೀಪದ ಆತೂರು ಗ್ರಾಮದಲ್ಲಿ ಪುತ್ರನೊಬ್ಬ ತಂದೆಯನ್ನೇ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಹತ್ಯೆಯಾದವರನ್ನು ಗೋಪಿನಾಥಂ ಗ್ರಾಮದ ಶಂಕರನ್ (70) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಮೃತರ ಎರಡನೇ ಪುತ್ರ ಗೋವಿಂದರಾಜ್ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ದಿನಗಳಿಂದ ಶಂಕರನ್ ಕಾಣೆಯಾಗಿರುವ ಹಿನ್ನೆಲೆಯಲ್ಲಿ ಕುಟುಂಬದವರು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಶನಿವಾರ ಸಂಜೆ ಕಾವೇರಿ ನದಿಯಲ್ಲಿ ಶಂಕರನ್ ಅವರ ಮೃತದೇಹ ಪತ್ತೆಯಾದ ಬಳಿಕ ಪ್ರಕರಣ ಹತ್ಯೆಯ ತಿರುವು ಪಡೆದಿತು.

ಮೃತನ ಪತ್ನಿ ಪಳನಿಯಮ್ಮ ನೀಡಿದ ದೂರಿನ ಪ್ರಕಾರ, ಮೇಕೆಗಳನ್ನು ಹಂಚಿಕೊಳ್ಳುವ ವಿಚಾರಕ್ಕೆ ತಂದೆ–ಮಗನ ನಡುವೆ ವಾಗ್ವಾದ ಉಂಟಾಗಿ, ಅದೇ ಕೋಪದಲ್ಲಿ ಗೋವಿಂದರಾಜ್ ಆಯುಧದಿಂದ ತಂದೆಯನ್ನು ಹೊಡೆದು ನಂತರ ಕಾವೇರಿ ನದಿಗೆ ತಳ್ಳಿದ್ದಾನೆ ಎನ್ನಲಾಗಿದೆ.

ಘಟನೆಯ ನಂತರ ಶೋಧ ನಡೆಸಿದ ಮಲೆಮಹದೇಶ್ವರ ಬೆಟ್ಟ ಪೊಲೀಸರು ಆರೋಪಿ ಮಗನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.