Kodagu

ಮಡಿಕೇರಿ ಹಾಗೂ ಕುಶಾಲನಗರ ಭಾಗಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳ ನಿಷೇಧ ಕುರಿತ ಆದೇಶ ಪುನರ್ ಪರಿಶೀಲನೆ ನಡೆಸಲು ಒತ್ತಾಯ

admincoorgdaily

ಮಡಿಕೇರಿ ಹಾಗೂ ಕುಶಾಲನಗರ ಭಾಗಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳ ನಿಷೇಧ ಕುರಿತ ಆದೇಶ ಪುನರ್ ಪರಿಶೀಲನೆ ನಡೆಸಲು ಒತ್ತಾಯ

ಮಡಿಕೇರಿ: ಮಡಿಕೇರಿ ಹಾಗೂ ಕುಶಾಲನಗರ ಭಾಗಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳ ನಿಷೇಧ ಕುರಿತ ಆದೇಶವು ಸಂವಿಧಾನದ ಕಲಂ ೨೧ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ತಕ್ಷಣ ಪುನರ್‌ಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆ ಪ್ರಮುಖರು ಒತ್ತಾಯಿಸಿದರು.

ಜಿಲ್ಲೆಯ ನಾಗರಿಕರಾಗಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಪ್ಲಾಸ್ಟಿಕ್ ಬಳಕೆ ನಿಯಂತ್ರಣದ ಉದ್ದೇಶವನ್ನು ಬೆಂಬಲಿಸುತ್ತೇವೆ. ಆದರೆ, ಮಡಿಕೇರಿ ಹಾಗೂ ಕುಶಾಲನಗರ ಭಾಗಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳ ನಿಷೇಧಕ್ಕೆ ಸಂಬಂಧಿಸಿದ ಇತ್ತೀಚಿನ ಆದೇಶವು ಕಾನೂನು, ತರ್ಕ ಹಾಗೂ ಮಾನವೀಯತೆಯ ಮಾನದಂಡಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಆದೇಶವನ್ನು ಪುನರ್ ಪರಿಶೀಲಿಸಬೇಕು ಅಥವಾ ಎಲ್ಲಾ ರೀತಿಯ ಪ್ಲಾಸ್ಟಿಕ್ ಬಾಟಲಿ ಮತ್ತು ಪ್ಲಾಸ್ಟಿಕ್‌ನಲ್ಲಿ ಬಿಸ್ಕೆಟ್, ಇನ್ನಿತರೆ ತಿಂಡಿಗಳ ಪ್ಯಾಕೆಟ್‌ಗಳನ್ನು ನಿಶೇಧಿಸಿ ಆದೇಶಹೊರಡಿಸಬೇಕು ಎಂದು ವೇದಿಕೆಯ ರಾಜ್ಯ ಕಾರ್ಯದರ್ಶಿ ಎಂ.ಎಂ.ದಾವೂದ್ ಆಗ್ರಹಿಸಿದರು.

ಪ್ರವಾಸಿಗರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ರೋಗಿಗಳು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು ಅಗತ್ಯವಾಗಿದೆ. ಈ ನಿಷೇಧದಿಂದಾಗಿ ನೈಜ ತೊಂದರೆ ಹಾಗೂ ಅಪಾಯ ಉಂಟಾಗುತ್ತಿದೆ. ಆರೋಗ್ಯಕ್ಕೆ ಹಾನಿಕಾರಕವೆಂದು ವೈಜ್ಞಾನಿಕವಾಗಿ ಸಾಬೀತಾಗಿರುವ ತಂಪು ಪಾನೀಯಗಳು ಅದೇ ಪ್ಲಾಸ್ಟಿಕ್ ಬಾಟಲಿನಲ್ಲಿ ನಿರ್ಬಂಧವಿಲ್ಲದೆ ಮಾರಾಟವಾಗುತ್ತಿದೆ. ಇದಕ್ಕೆ ಯಾವುದೇ ಬ್ಯಾನ್‌ಗಳಿಲ್ಲ. ಆದರೆ, ಮಾನವನ ಜೀವಕ್ಕೆ ಅಗತ್ಯವಾದ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳನ್ನೇ ನಿಷೇಧಿಸಿರುವುದು ಮಲತಾಯಿ ಧೋರಣೆ ತೋರಿದಂತಾಗಿದೆ. ಈ ಸಂಬಂಧ ಆದೇಶವನ್ನು ೧೫ ದಿನದೊಳಗೆ ಪುನರ್ ಪರಿಶೀಲಿಸದಿದ್ದಲ್ಲಿ ಕುಶಾಲನಗರ ಪುರಸಭೆ, ಮಡಿಕೇರಿ ನಗರಸಭೆ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಮುತ್ತುರಾಜು, ಕಾರ್ಯಧ್ಯಕ್ಷ ಪ್ರಭು ಮುದ್ದಪ್ಪ, ಗೌರವಾಧ್ಯಕ್ಷ ಪಿ.ಕೆ.ಯಾದವ್, ಉದ್ಯಮಿಗಳಾದ ಸತೀಶ್, ಕವನ್ ಬಿದ್ದಪ್ಪ ಇದ್ದರು.