ಕಾಲೇಜು ಆಡಳಿತ ಕಿರುಕುಳ ಆರೋಪ: ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ

ಕಾಲೇಜು ಆಡಳಿತ ಕಿರುಕುಳ ಆರೋಪ: ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ
Photo credit: TV09(ಮೃತ ಯಶಸ್ವಿನಿ)

ಆನೇಕಲ್, ಜ. 9:ಡೆಂಟಲ್ ಕಾಲೇಜು ಆಡಳಿತ ಮಂಡಳಿಯ ಕಿರುಕುಳಕ್ಕೆ ನೊಂದು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ನಡೆದಿದೆ. ಯಶಸ್ವಿನಿ (23) ಮೃತ ವಿದ್ಯಾರ್ಥಿನಿ.

ಬೊಮ್ಮನಹಳ್ಳಿಯ ಖಾಸಗಿ ಡೆಂಟಲ್ ಕಾಲೇಜಿನಲ್ಲಿ Oral Medicine and Radiology ವಿಭಾಗದಲ್ಲಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದ ಯಶಸ್ವಿನಿಗೆ ಸೆಮಿನಾರ್ ಹಾಗೂ ರೇಡಿಯಾಲಜಿ ಕೇಸ್ ನೀಡದೆ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಬುಧವಾರ ಕಣ್ಣು ನೋವಿನ ಕಾರಣ ಕಾಲೇಜಿಗೆ ಗೈರಾಗಿದ್ದ ಆಕೆ, ಮಾರನೇ ದಿನ ಹಾಜರಾದಾಗ ಆರೋಗ್ಯ ಸಂಬಂಧಿತ ವಿಚಾರಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿ ಅವಮಾನಿಸಲಾಗಿದೆ ಎನ್ನಲಾಗಿದೆ. ಇದರಿಂದ ತೀವ್ರ ಮನಸ್ತಾಪಗೊಂಡ ಯಶಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಮೃತಳ ಪೋಷಕರಾದ ಪರಿಮಳ–ಭೋದೆವಯ್ಯ ದಂಪತಿಯ ಒಬ್ಬಳೇ ಮಗಳಾಗಿದ್ದ ಯಶಸ್ವಿನಿ ಸಾವಿಗೆ ನ್ಯಾಯ ಒದಗಿಸುವಂತೆ ಪೋಷಕರು ಮತ್ತು ಸ್ನೇಹಿತರು ಶವಾಗಾರದ ಎದುರು ಪ್ರತಿಭಟನೆ ನಡೆಸಿದರು. ಕಿರುಕುಳ ನೀಡಿದ ಪ್ರಾಂಶುಪಾಲರು ಹಾಗೂ ಸಂಬಂಧಿತ ಪ್ರಾಧ್ಯಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.