ಪಯ್ಯವೂರು ಊಟ್ ಉತ್ಸವದಲ್ಲಿ ದೇವರ ತಡಂಬು ನೃತ್ಯ

Feb 22, 2026 - 13:15
 0  626
ಪಯ್ಯವೂರು ಊಟ್ ಉತ್ಸವದಲ್ಲಿ ದೇವರ ತಡಂಬು ನೃತ್ಯ

ವಿರಾಜಪೇಟೆ: ಕೊಡಗಿನ ಗಡಿಭಾಗದಲ್ಲಿರುವ ಕೇರಳ ರಾಜ್ಯದ ಕಣ್ಣೂರಿನಲ್ಲಿರುವ ಪಯ್ಯವೂರು ಈಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಪಯ್ಯವೂರು ಊಟ್ ಉತ್ಸವ ನಡೆಯುತ್ತಿದ್ದು ಮೂರು ದಿನಗಳ ಕಾಲ ನಡೆಯುತ್ತಿರುವ ಕೊಡಗಿನವರ ಊಟ್ ಹಬ್ಬದಲ್ಲಿ ಕೊಡಗಿನಿಂದ ಹೆಚ್ಚಿನ ಭಕ್ತರ ಪ್ರವಾಹವನ್ನು ಕಾಣುತ್ತಿದೆ.

ಊಟ್ ಮಹೋತ್ಸವದ ಎಂಟನೇ ಊಟ್ ಹಬ್ಬದ ದಿನದಿಂದ ಕೊಡಗಿನಿಂದ ಅಚ್ಚರಿಯ ಸಂಖ್ಯೆಯಲ್ಲಿ ಭಕ್ತರ ಹರಿವು ಕಂಡುಬಂದಿದೆ. ಶುಕ್ರವಾರ ಬೆಳಿಗ್ಗೆ ಕಡಿಯತ್ತ್ನಾಡಿನಿಂದ ಪ್ರಮುಖ ಕುಟುಂಬದವರು ಕಾಡು ದಾರಿಯಲ್ಲಿ ಎತ್ತ್ ಪೋರಾಟ್ ದೊಂದಿಗೆ ದೇವರ ನೈವೇದ್ಯಕ್ಕೆ ಅಕ್ಕಿ ಸುರಿಯುವ ಮೂಲಕ ದೇವಾಲಯಕ್ಕೆ ಆಗಮಿಸಿದ ನಂತರ, ಪಯ್ಯವೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಕೊಡಗಿನವರಿಂದ ತುಂಬಿ ತುಳುಕುತ್ತಿದ್ದವು.

ಸಂಜೆ ಊಟ್ 8ರ ಸಂಜೆ ಕಡಿಯತ್ತ್ನಾಡಿನವರಿಂದ ವಿವಿಧ ಸಾಂಪ್ರಾದಾಯಿಕ ನೃತ್ಯ, ಮತ್ತು ದೇವರ ತಿರುವಳ ನಡೆಯಿತು. ರಾತ್ರಿ 9 ಗಂಟೆ ಸುಮಾರಿಗೆ, ದೊಡ್ಡ ಹಬ್ಬಕ್ಕೆ ಅಕ್ಕಿಯನ್ನು ಅಳೆಯುವಾಗ, ಕೊಡಗಿನವರಿಂದ ದೇವರ ತಿರುವಳ(ದೇವರು ಮೈಮೇಲೆ ಬರುವುದು) ನಡೆಯಿತು. ಈ ಸಂದರ್ಭ ಕೆಲವು ವಿಚಾರಗಳನ್ನು, ಸಮಸ್ಯೆಗಳನ್ನು ಕಿರಾಥಮೂರ್ತಿಯ ಪ್ರತಿನಿಧಿಯಾದ ಕೊಮರಥಚ್ಚನ್ ಮುಂದೆ ಹೇಳಲಾಗುತ್ತದೆ. ಮತ್ತು ಸಮಸ್ಯೆಯನ್ನು ಬಗೆಹರಿಸಲಾಯಿತು. ಊಟ್ 9ರಂದು ಶನಿವಾರ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈಶ್ವರನಿಗೆ ರುದ್ರಾಭಿಷೇಕ, ಮೃಂತ್ಯುಂಜಯ ಹೋಮ, ಸೇರಿದಂತೆ ವಿವಿಧ ಪೂಜೆಗಳನ್ನು ಸಲ್ಲಿಸಿದರು.

ಸಂಜೆ ವೇಳೆ ದೇವರ ನೃತ್ಯಬಲಿ, ತಡಂಬು ನೃತ್ಯ, ಸೇರಿದಂತೆ ಕೊಡಗಿನವರಿಂದ ವಿಶೇಷ ಆಚರಣೆಗಳು ನಡೆಯಿತು. ಊಟ್ 10ರಂದು ಇಂದು ಬೆಳಿಗ್ಗೆ 4 ಗಂಟೆಯಿಂದ ವಿವಿಧ ಕಡೆಗಳಿಂದ ವೃತಧಾರಿಯಾಗಿ ನೈಯ್ಯಮೃತ(ತುಪ್ಪ) ದೇವರಿಗೆ ಅಭಿ಼ಷೇಕ ಮಾಡಲು ತಂದು ಪ್ರದರ್ಶನ ನೀಡಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಕೊಮರಥಚ್ಚನ್ ಮತ್ತು ನೆಯ್ಯಮೃತ್ಕರ್‌ಗಳಿಂದ ನೃತ್ಯ ನಡೆಯಲಿದೆ, ಹಗಲು ಕೇರಳ ಮತ್ತು ಕೊಡಗಿನವರ ಸಮಾಗಮದಲ್ಲಿ ದೇವರ ನೃತ್ಯಬಲಿ ಪ್ರದರ್ಶನ, ತಡಂಬು ನೃತ್ಯ, ಚಂಡೆಮೇಳ ಸೇರಿದಂತೆ ವಿವಿಧ ಧಾರ್ಮಿಕ ಪೂಜೆ ಪುನಸ್ಕಾರಗಳು ನಡೆದ ಬಳಿಕ ಕೊಡಗಿನವರ ಊಟ್ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ. ಬಳಿಕ ಕೊಡಗಿನವರು ಹಾಗೂ ಅವರೊಂದಿಗೆ ತೆರಳಿದ ಎತ್ತುಗಳು ತಮ್ಮ ನಾಡಿಗೆ ಮರಳುತ್ತವೆ.

ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ, ಕೋಮರತಚ್ಚನ್ ರಾಜನ್ ನಂಬಿಯಾರ್, ಚೆಯ್ಯಂಡಾಣೆಯ ಬೊವ್ವೇರಿಯಂಡ, ಮುಂಡ್ಯೋಳಂಡ ಕುಟುಂಬದ ತಕ್ಕ ಮುಖ್ಯಸ್ಥರು, ಕಡಿಯತ್ತ್ನಾಡಿಗೊಳಪಟ್ಟ ಪಯ್ಯವೂರು ದೇವಸ್ಥಾನದ ತಕ್ಕಾಮೆಗೆ ಒಳಪಟ್ಟ ವಿವಿಧ ಗ್ರಾಮಗಳ ಕುಟುಂಬದ ಪ್ರಮುಖರು ಸೇರಿದಂತೆ ವಿವಿದೆಡೆಗಳಿಂದ ಆಗಮಿಸಿದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

ಇದೇ ಸಂದರ್ಭ ಜೀವನ್ ಜ್ಯೋತಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ.ಆಪರೇಟಿವ್ ಬ್ಯಾಂಕ್ ಅವರು ಸಿದ್ದಪಡಿಸಿದ ಈಶ್ವರ ದೇವರ ಕಥಾ ಸಾರಂಶವನ್ನೊಳಗೊಂಡ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭ ವಿರಾಜಪೇಟೆಯ ಬ್ಯಾಂಕ್ ವ್ಯವಸ್ಥಾಪಕರಾದ ಸರಳ ಮಣಿಲಾಲ್ ಸೇರಿದಂತೆ ಇತರರು ಇದ್ದರು.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0