ಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿ ಸಭೆ: ಕೇಂದ್ರ ಸರ್ಕಾರದ ಹಲವು ಯೋಜನಾ ಕಾರ್ಯಕ್ರಮ ಪರಿಣಾಮಕಾರಿಯಾಗಿ ತಲುಪಿಸಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಮಡಿಕೇರಿ ಜೂ.22:-ಸಂಸದರಾದ ಯುದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯಲ್ಲಿ ಪಾರಂಪರಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು, ಅಮೃತ್ 2.0 ಯೋಜನೆ, ಜಲಜೀವನ್ ಅಭಿಯಾನ, ಸ್ವಚ್ಛ ಭಾರತ ಅಭಿಯಾನ, ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಣ ಹಾಗೂ ಕೃಷಿ ಚಟುವಟಿಕೆ ಸಂಬಂಧ ಸುದೀರ್ಘ ಚರ್ಚೆ ನಡೆಯಿತು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆಯ ಆರಂಭದಲ್ಲಿ ಮಡಿಕೇರಿ ನಗರದ ಪಾರಂಪರಿಕ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಸಂಬಂಧ ಈಗಾಗಲೇ ಹಲವು ಬಾರಿ ಚರ್ಚೆ ನಡೆದಿದ್ದು, ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ನಗರಸಭೆ ಪೌರಾಯುಕ್ತರಿಗೆ ಸಂಸದರು ನಿರ್ದೇಶನ ನೀಡಿದರು.
ಮಳೆ ಮತ್ತಿತರ ಕಾರಣ ನೀಡದೆ ಕೆಲಸ ಆಗಬೇಕು. ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಲಾಗಿದ್ದು, ಇನ್ನು ಯಾವುದೇ ಕಾರಣ ನೀಡಬಾರದು ಎಂದು ಸಂಸದರು ನಿರ್ದೇಶನ ನೀಡಿದರು.
ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಬೇರೆ ಬೇರೆ ಜಿಲ್ಲೆಯಲ್ಲಿ ಯಾವ ರೀತಿ ತ್ಯಾಜ್ಯ ವಿಲೇವಾರಿ ಮಾಡುತ್ತಾರೆ. ಅದನ್ನು ಸಹ ಗಮನಿಸಿ ಅದರಂತೆ ಕ್ರಮವಹಿಸಬೇಕು ಎಂದರು.
ಇದಕ್ಕೆ ಧ್ವನಿಗೂಡಿಸಿದ ವಿಧಾನಪರಿಷತ್ತು ಸದಸ್ಯರಾದ ಎಸ್.ಎಲ್.ಭೋಜೇಗೌಡ ಹಾಗೂ ಸುಜಾ ಕುಶಾಲಪ್ಪ ಅವರು ಅನುಪಾಲನಾ ವರದಿಯಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಸಬೂಬು ನೀಡುವಂತಿಲ್ಲ ಎಂದು ತಾಕೀತು ಮಾಡಿದರು.
ಈ ಕುರಿತು ದಿಶಾ ಸಮಿತಿ ಸದಸ್ಯರಾದ ಡಾ.ನವೀನ್ ಕುಮಾರ್, ಆರ್.ಕೆ.ಚಂದ್ರು, ನಾಗೇಶ್ ಕುಂದಲ್ಪಾಡಿ, ಕಾಂತಿ ಸತೀಶ್ ಅವರು ಧ್ವನಿಗೂಡಿಸಿದರು.
ನಾಗೇಶ್ ಕುಂದಲ್ಪಾಡಿ ಅವರು ಕೇಂದ್ರ ಸರ್ಕಾರದಿಂದ ಕಸವಿಲೇವಾರಿ, ಅಮೃತ್ 2.0 ಯೋಜನೆ, ಜೆಜೆಎಂ, ವಿಶ್ವಕರ್ಮ, ಸ್ವಚ್ಛಭಾರತ ಅಭಿಯಾನ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಇನ್ನಷ್ಟು ಮಾಹಿತಿ ನೀಡಬೇಕು. ಈ ಯೋಜನೆಗಳಿಗೆ ನಿರೀಕ್ಷೆಗೂ ಮೀರಿ ಅನುದಾನ ಬರುತ್ತಿದೆ. ಅನುಷ್ಠಾನ ಮಾಡಬೇಕಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಈ ಕುರಿತು ಮಾತನಾಡಿದ ವಿಧಾನ ಪರಿಷತ್ತು ಸದಸ್ಯರಾದ ಸುಜಾ ಕುಶಾಲಪ್ಪ ಅವರು ಜಿಲ್ಲೆಯ ಹಲವು ಕಡೆ ರಸ್ತೆ ಬದಿ
ಕಸವನ್ನು ಬೀಸಾಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕು ಎಂದರು.
ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ಕಸ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಈ ಬಗ್ಗೆ ವಿಶೇಷ ಆಸಕ್ತಿ ವಹಿಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲೆಯ ಹೋಂಸ್ಟೇ ಮತ್ತು ರೆಸಾರ್ಟ್‍ಗಳಲ್ಲಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಕೇರಳ ಮತ್ತು ಅಸ್ಸಾಂನಲ್ಲಿ ತ್ಯಾಜ್ಯವನ್ನು ಸರಿಯಾದ ನಿರ್ವಹಣೆ ಮಾಡಲಾಗುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಯಥೇಚ್ಛವಾಗಿ ಕಂದಾಯ ಬರುತ್ತಿದ್ದರು ಸರಿಯಾದ ನಿರ್ವಹಣೆ ಕಾಣುತ್ತಿಲ್ಲ ಎಂದು ಸುಜಾ ಕುಶಾಲಪ್ಪ ಅವರು ಅತೃಪ್ತಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೇ.100 ರಷ್ಟು ಕಸ ವಿಲೇವಾರಿಗೆ ಒತ್ತು ನೀಡಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಡಸ್ಟ್ ಬಿನ್ ಇಡಲಾಗಿದೆ ಎಂದರು.
‘ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ ಅವರು ಅಧಿಕಾರಿಗಳು ಶ್ರದ್ಧೆ ಹಾಗೂ ಬದ್ಧತೆಯಿಂದ ಕೆಲಸ ಮಾಡಿದಲ್ಲಿ ಸುಲಲಿತವಾಗಿ ಕರ್ತವ್ಯ ನಿರ್ವಹಿಸಬಹುದಾಗಿದೆ. ಆದರೆ ಕತೆ ಹೇಳುವುದನ್ನು ಬಿಡಬೇಕು. ಅಧಿಕಾರಿಗಳ ಕಥೆ ಕೇಳಿಕೊಂಡು ಹೋಗಲು ಬಂದಿಲ್ಲ. ಫಲಿತಾಂಶ ಅತೀ ಮುಖ್ಯ ಎಂದು ಕಿಡಿ ಕಾರಿದರು.’
ಈ ಕುರಿತು ಮಾತನಾಡಿದ ಸಂಸದರು ಕಸದ ವಿಚಾರಗಳು ಮುಂದಿನ ಸಭೆಗೆ ಬರಬಾರದು. ಈ ಬಗ್ಗೆ ಯೋಜನೆ ರೂಪಿಸಿ ವರದಿ ನೀಡುವಂತೆ ತಾಕೀತು ಮಾಡಿದರು.
ಆರ್.ಕೆ.ಚಂದ್ರು ಮಾತನಾಡಿ ಹಾಡಿಗಳಲ್ಲಿಯೂ ಸಹ ತ್ಯಾಜ್ಯ ವಿಲೇವಾರಿ ಸಂಬಂಧ ಅರಿವು ಮೂಡಿಸಬೇಕು. ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದರು.
ಅಮೃತ್ 2.0 ಯೋಜನೆಯಡಿ ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆ ಮತ್ತು ಪೊನ್ನಂಪೇಟೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಎಂಜಿನಿಯರ್ ಜಯಕುಮಾರ್ ಅವರು 45 ಕೋಟಿ ರೂ. ವೆಚ್ಚದಲ್ಲಿ ಯೋಜನಾ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಶೇ.70 ರಷ್ಟು ಪ್ರಗತಿ ಸಾಧಿಸಲಾಗಿದ್ದು, ಈ ಆರ್ಥಿಕ ವರ್ಷಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಅಮೃತ್ 2.0 ಯೋಜನೆ ಜಿಲ್ಲೆಯಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದು ಸಂಸದರು ನಿರ್ದೇಶನ ನೀಡಿದರು.
ರಾಜ್ಯದಲ್ಲಿ ಹೆಚ್ಚಾಗಿ ಮಳೆ ಬೀಳುವ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದು ಬೇಸರ ತರಿಸುತ್ತದೆ. ಈ ವರ್ಷ ಮುಂಗಾರು ಆರಂಭ ಸರಿಯಾಗಿ ಮಳೆ ಆಗದಿದ್ದರೂ ಸಹ ಜಲಮೂಲವನ್ನು ಸಂರಕ್ಷಿಸುವಲ್ಲಿ ಮುಂದಾಗಬೇಕು. ಕೆರೆ, ಕಟ್ಟೆ, ಬಾವಿ, ಹಳ್ಳ, ಕೊಳ್ಳಗಳು ಹಾಗೂ ತೊರೆಗಳಲ್ಲಿ ನೀರು ಇದ್ದು, ಕುಡಿಯುವ ನೀರು ಪೂರೈಕೆಯಲ್ಲಿ ಟ್ಯಾಂಕರ್ ಬಳಸುವುದು ಸರಿಯಲ್ಲ ಎಂದರು.
ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ, ಮುಂದಿನ ದಿನಗಳಲ್ಲಿ ಮಳೆ ಆಗುವ ಸಾಧ್ಯತೆ ಇದ್ದು, ಕುಡಿಯುವ ನೀರು ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.
ಅಮೃತ್ 2.0 ಯೋಜನೆ ಪ್ರಗತಿ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ದಿಶಾ ಸಮಿತಿ ಸದಸ್ಯರಾದ ನಾಗೇಶ್ ಕುಂದಲ್ಪಾಡಿ ಅವರು ಒತ್ತಾಯಿಸಿದರು.
ಜಲಜೀವನ್ ಮಿಷನ್ ಯೋಜನೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್ ಅವರು ಜಲಜೀವನ್ ಮಿಷನ್‍ಯಡಿ ಪ್ರತಿ ಮನೆಗೂ ನಲ್ಲಿ ನೀರು ಪೂರೈಸುವತ್ತ ಗಮನಹರಿಸಲಾಗಿದೆ ಎಂದರು.
ಭೋಜೇಗೌಡ ಅವರು ಜಲಜೀವನ್ ಮಿಷನ್ ಪ್ರಗತಿ ಯೋಜನೆ ಸಂಬಂಧಿಸಿದಂತೆ ಸ್ಥಳೀಯ ಪ್ರತಿನಿಧಿಗಳನ್ನು ಆಹ್ವಾನಿಸಿ ಮಾಹಿತಿ ನೀಡಬೇಕು. ಕಾಮಗಾರಿ ಪೂರ್ಣಗೊಂಡಿರುವ ನಂತರ ಸ್ಥಳೀಯರಿಗೆ ಮಾಹಿತಿ ನೀಡಬೇಕು ಎಂದರು.
ಈ ಕುರಿತು ಮಾತನಾಡಿದ ನಾಗೇಶ್ ಕುಂದಲ್ಪಾಡಿ ಅವರು ಕೇಂದ್ರ ಸರ್ಕಾರ ಅಮೃತ್ 2.0 ಯೋಜನೆ ಸಂಬಂಧಿಸಿದಂತೆ ಶೇ.10 ರಷ್ಟು ಪ್ರಗತಿ ಸಾಧಿಸಿಲ್ಲ. ಕಾಮಗಾರಿ ಪೂರ್ಣಗೊಂಡ ನಂತರ ಪಂಚನಾಮೆ ಆಗಬೇಕು. ಆದರೆ ಇದು ಯಾವುದೇ ಕೆಲಸ ಆಗಿಲ್ಲ ಎಂದು ದೂರಿದರು. ಜಲಜೀವನ್ ಮಿಷನ್ ಯೋಜನೆ ಸಂಬಂಧಿಸಿದಂತೆ ಮಾಹಿತಿ ತರಿಸಿಕೊಳ್ಳಲಾಗುವುದು ಎಂದರು.
ತಾ.ಪಂ.ಇಒಗಳು ಎಲ್ಲಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಈ ಯೋಜನೆ ಬಗ್ಗೆ ಮಾಹಿತಿ ಪಡೆಯಬೇಕು. ಕೇಂದ್ರ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅರ್ಹರಿಗೆ ತಲುಪಬೇಕು ಎಂದರು.
ಈ ಕುರಿತು ಮಾತನಾಡಿದ ಸಂಸದರು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ವರದಿ ನೀಡಿ, ಗ್ರಾಮ ಪಂಚಾಯಿತಿಗೆ ವರದಿ ನೀಡಬೇಕು ಎಂದರು.
ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಪ್ರಗತಿ ಸಂಬಂಧಿಸಿದಂತೆ ಮುಂದಿನ ಸಭೆಯಲ್ಲಿ ಸರಿಯಾದ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ಕ್ರಮವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಭಾರತ ಸಂಚಾರ ನಿಗಮ ನಿಯಮಿತ ಅಗತ್ಯ ಇರುವ ಕಡೆಗಳಲ್ಲಿ ಟವರ್ ನಿರ್ಮಿಸಲು ಅವಕಾಶ ಕಲ್ಪಿಸಬೇಕು. ಟವರ್ ನಿರ್ಮಾಣಕ್ಕೆ ಭೂಮಿ ಒದಗಿಸುವಂತೆ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯಡಿ ನಬಾರ್ಡ್‍ನಿಂದ ಹಾಸ್ಟೆಲ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಸದರು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಕೊಡ್ಲಿಪೇಟೆ ವಸತಿ ಶಾಲೆಯಲ್ಲಿ ಗುಣಮಟ್ಟದ ಆಹಾರ ಪೂರೈಸಬೇಕು. ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಎಲ್ಲಾ ವಸತಿ ಶಾಲೆಗಳಿಗೂ ಭೇಟಿ ನೀಡಲಾಗುವುದು ಎಂದು ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ನಾಗೇಶ್ ಕುಂದಲ್ಪಾಡಿ ಅವರು ವಿದ್ಯಾರ್ಥಿ ನಿಲಯದಲ್ಲಿ ದೂರು ದುಮ್ಮಾನ ಬರದಂತೆ ಎಚ್ಚರವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ನವೀನ್ ಕುಮಾರ್ ಅವರು ಜಿಲ್ಲೆಯಲ್ಲಿ ವಿದ್ಯಾರ್ಥಿ ನಿಲಯಕ್ಕೆ ಹೆಚ್ಚಿನ ಬೇಡಿಕೆಯಿದ್ದು, ವಿದ್ಯಾರ್ಥಿ ನಿಲಯ ಆರಂಭಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ ಅವರು ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ, ನೋಟ್‍ಪುಸ್ತಕ ಒದಗಿಸಬೇಕು. ಶಾಲೆಯ ಮಾನ್ಯತಾ ನವೀಕರಣ ಕಡತಕ್ಕೆ ಸಹಿ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇತರರನ್ನು ಆಹ್ವಾನಿಸಿ ಸಭೆ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದರು.
ಜಿಲ್ಲೆಯಲ್ಲಿ 7 ಪಿಎಂಶ್ರೀ ಶಾಲೆಗಳು ಇದ್ದು, ಇನ್ನಷ್ಟು ಶಾಲೆಗಳ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಭೋಜೇಗೌಡ ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು ಜಿಲ್ಲೆಯಲ್ಲಿ ಕಾಡಾನೆ ಹಾಗೂ ಮಾನವ ಸಂಘರ್ಷ ತಡೆಯುವಲ್ಲಿ ಪಕ್ಷಾತೀತವಾಗಿ ಎಲ್ಲರೂ ಕಾರ್ಯಯೋಜನೆ ರೂಪಿಸಬೇಕು ಎಂದರು.
ಪ್ರೋಜೆಕ್ಟ್ ಎಲಿಪೆಂಟ್ ಯೋಜನೆ ಸಂಬಂಧಿಸಿದಂತೆ ಹೆಚ್ಚಿನ ಹಣ ಕೇರಳ ರಾಜ್ಯ ಪಡೆದಿದ್ದು, ಕರ್ನಾಟಕಕ್ಕೆ ಕಡಿಮೆ ಹಣ ಬಂದಿದೆ ಎಂಬ ಅಪಪ್ರಚಾರ ಮಾಡಲಾಗುತ್ತಿದ್ದು, ಇದು ಸರಿಯಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಹಣ ಬಂದಿದ್ದು, ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಜಾ ಕುಶಾಲಪ್ಪ ಅವರು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯವರ ಕಿರುಕುಳ ಹೆಚ್ಚಾಗಿದ್ದು, ಇದು ನಿಲ್ಲಬೇಕು. ರೈತರು ಹಾಗೂ ಇತರರಿಗೆ ತೊಂದರೆ ನೀಡಬಾರದು. ಸ್ಥಳೀಯರಿಂದಲೇ ಅರಣ್ಯ ಉಳಿದಿದೆ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಹಲವು ಸುತ್ತಿನ ಚರ್ಚೆಗಳು ನಡೆದಿದೆ ಎಂದರು.
ಭೋಜೇಗೌಡ ಅವರು ಮಾತನಾಡಿ ವನ್ಯಪ್ರಾಣಿಗಳು ಕಾಡಿನಲ್ಲಿ ಇರುವಂತಾಗಲು ಹಲಸು, ಬಿದಿರು, ಬಾಳೆ ಮತ್ತಿತರ ಹಣ್ಣಿನ ಗಿಡಗಳನ್ನು ನೆಡುವಂತಾಗಬೇಕು. ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ಬುಡಸಮೇತ ತೆರವುಗೊಳಿಸಬೇಕು. ಜೊತೆಗೆ ಸೋಲಾರ್ ತಂತಿ ಬೇಲಿ ಅಳವಡಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಈ ಬಾರಿ ಕಡಿಮೆ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಭಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸುವಂತೆ ಸಂಸದರು ಸೂಚಿಸಿದರು.
ಡಾ.ನವೀನ್ ಕುಮಾರ್ ಅವರು ಮಾತನಾಡಿ ಕಾಫಿ ಮಂಡಳಿಯಿಂದ ಕೇಂದ್ರ ಸರ್ಕಾರದ ಹಲವು ಯೋಜನೆಗಳಿದ್ದು, ಕೃಷಿಕರಿಗೆ ಈ ಯೊಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಕೇಂದ್ರ ಸರ್ಕಾರದ ಹಲವು ಯೋಜನೆಗಳಿದ್ದು, ಅವುಗಳ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ಸೌಲಭ್ಯವನ್ನು ತಲುಪಿಸಬೇಕು ಎಂದರು.
ಉಪ ಅರಣ್ಯ ಸಂಕ್ಷಣಾಧಿಕಾರಿ ಅಭಿಷೇಕ್ ಅವರು ಮಾತನಾಡಿ ವನ್ಯಪ್ರಾಣಿಗಳ ಹಾವಳಿ ತಡೆಯುವಲ್ಲಿ ಪ್ರತೀ ಕಿ.ಮೀ.ಗೆ ಒಂದೂವರೆ ಕೋಟಿ ರೂ. ಬೇಕಾಗುತ್ತದೆ ಎಂದು ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.

