ಡಾ.ಕೋಡಿ ಕುಶಾಲಪ್ಪ ಗೌಡರ ನೆಂಪುನ ಕಾರ್ಯಕ್ರಮ

Aug 29, 2026 - 22:41
 0  11
ಡಾ.ಕೋಡಿ ಕುಶಾಲಪ್ಪ ಗೌಡರ ನೆಂಪುನ ಕಾರ್ಯಕ್ರಮ

ಮಡಿಕೇರಿ:-ಅರೆಭಾಷೆಗೆ ಒಂದು ಸಾಂಸ್ಕೃತಿಕ ನೆಲೆಗಟ್ಟನ್ನು ಹಾಕಿಕೊಟ್ಟು ವ್ಯಾಕರಣದ ಶಿಸ್ತನ್ನು ರೂಡಿಸಿದವರು ಭಾಷೆ ವಿಜ್ಞಾನಿ ಕೋಡಿ ಕುಶಾಲಪ್ಪ ಗೌಡರು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ನುಡಿದರು. 

ಕರ್ನಾಟಕ ಅರೆಭಾಷೆಗೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘ ಸುಳ್ಯ ಹಾಗೂ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಸುಳ್ಯ ಇವರುಗಳ ಸಹಯೋಗದಲ್ಲಿ ನಡೆದ ಡಾ.ಕೋಡಿ ಕುಶಾಲಪ್ಪ ಗೌಡರ ನೆಂಪುನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಅರೆಭಾಷೆಯನ್ನು ಆಡುಭಾಷೆ ಎಂದು ಪರಿಗಣಿಸದೆ, ಅದರ ಭಾಷಿಕ ಸ್ವರೂಪ ಹಾಗೂ ವೈಶಿಷ್ಠ್ಯಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕೆಂಬ ದೃಷ್ಟಿಕೋನವನ್ನು ಬೆಳೆಸಿದವರಲ್ಲಿ ಕೋಡಿಯವರು ಪ್ರಮುಖರು ಎಂದು ಹೇಳುತ್ತಾ, ಕನ್ನಡದ ಸಹೋದರ ಭಾಷೆಗಳನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮದು ಎಂದು ನುಡಿದರು.

ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ಅವರು ಮಾತನಾಡಿ ಗೌಡ ವಿದ್ಯಾ ಸಂಘವು ಹಲವಾರು ವಿದ್ಯಾರ್ಥಿಗಳಿಗೆ ಆಶ್ರಯವನ್ನು ನೀಡಿದ್ದು ಕೋಡಿಯವರು ಅಂತಹ ಅಗ್ರಗಣ್ಯರಲ್ಲಿ ಒಬ್ಬರು ಎಂದು ತಿಳಿಸಿದರು. 

ಹಿಂದಿನ ಕಾಲದಲ್ಲಿ ಅರೆಭಾಷಿಕರ ಬದುಕು, ಶಿಸ್ತು, ಸಾಮಾಜಿಕ ಸ್ಥಿತಿಗತಿ, ಒಗ್ಗಟ್ಟನ್ನು ಮೆಲುಕು ಹಾಕಿದ ಅವರು ಸಂಸ್ಕೃತಿ ಮತ್ತು ಸಂಸ್ಕಾರವು ಉತ್ತಮ ಸಹಜೀವನ ಮತ್ತು ಸಹಬಾಳ್ವೆ ಹಾಗೂ ಅಭಿವೃದ್ಧಿಯ ಮೂಲ ಎಂದು ವಿವರಿಸಿದರು. 

ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಅರೆಭಾಷೆ ಅಕಾಡೆಮಿಯು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. 

ಎಲ್ಲ ಭಾಷೆಗಳಲ್ಲಿ ಮಾತೃಭಾಷೆಯೇ ಶ್ರೇಷ್ಠ, ಸಂಸ್ಕಾರ ಸಂಸ್ಕೃತಿಯೇ ನಮ್ಮ ತಂದೆ-ತಾಯಿ ಅದನ್ನು ತೊರೆದು ನಾವು ಹೋಗಬಾರದು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಾರದಾ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಪ್ರಸನ್ನ ನಿಡ್ಯಮಲೆ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಸ್ವರ್ಣಕಲಾ ಅವರು ಕೋಡಿ ಕುಶಾಲಪ್ಪ ಗೌಡರ ಸಾಹಿತ್ಯಿಕ ಕೊಡುಗೆ ಸ್ಮರಿಸಿ ಅದರ ಮಹತ್ವ ವಿವರಿಸಿದರು.

ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಕೋಡಿ ಕುಶಾಲಪ್ಪ ಗೌಡರ ಶಿಷ್ಯ ಸಾಹಿತಿ ಸಂಜೀವ ಕುದ್ಪಾಜೆ ಅವರು ತಮ್ಮ ಗುರುಗಳಾದ ಕೋಡಿಯವರೊಂದಿಗಿನ ಒಡನಾಟವನ್ನು ಸ್ಮರಿಸಿದರು. 

ಕೋಡಿಯವರ ಸರಳತೆ, ಔದಾರ್ಯ ಹಾಗೂ ಸ್ನೇಹಪರ ವ್ಯಕ್ತಿತ್ವವನ್ನು ಸಭೆಯ ಮುಂದಿಟ್ಟರು. ಸಮಾಜದಲ್ಲಿ ಘನತೆಯ ವ್ಯಕ್ತಿತ್ವ ಹೊಂದಿದ್ದ ಕೋಡಿಯವರು, ಎಲ್ಲರನ್ನೂ ಗೌರವಿಸುತ್ತಿದ್ದರು ಎಂದು ತಿಳಿಸಿದರು. 

ಭಾಷೆ ವಿಜ್ಞಾನಿಯಾಗಿದ್ದ ಕೋಡಿಯವರು ಅರೆಭಾಷೆಯ ಬಗ್ಗೆ ಆಂಗ್ಲಭಾಷೆಯಲ್ಲಿ ಬರೆದು ಭಾಷಯನ್ನು ವಿಶ್ವವ್ಯಾಪಿಯಾಗಿ ಪಸರಿಸಿದರು. ಕೋಡಿ ಅವರು ಭಾಷೆ ವಿದ್ವಾಂಸರಾಗಿದ್ದರೂ ಅವರೊಳಗಿದ್ದ ಹಾಸ್ಯಪ್ರಜ್ಞೆ, ವಿನೋದ ಮನೋಭಾವ ಹಾಗೂ ಲಾಲಿತ್ಯ ಬಗ್ಗೆ ಮನೋಜ್ಞವಾಗಿ ವಿವರಿಸಿದರು.

"ಅರೆಭಾಷೆ ಕೋಡಿ ಕುಶಾಲಪ್ಪ ಗೌಡರ ಕೊಡುಗೆ" ಎಂಬ ವಿಷಯದ ಕುರಿತು ಮಾತನಾಡಿದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಡಾ.ಎನ್.ವಿ.ಕರುಣಾಕರ ಅವರು ಮಾತನಾಡಿ ಕೋಡಿ ಅವರು ಪಂಪಭಾರತ ಆಧಾರಿತ ಅರೆಭಾಷೆ ಮಹಾಭಾರತ ಕೃತಿ ರಚಿಸಿದರೂ ಅವರು ಅದರಲ್ಲಿ ತಮ್ಮ ಸ್ವಂತಿಕೆಯನ್ನು ತುಂಬಿದವರು ಎಂದು ಕೊಂಡಾಡಿದರು. 

ತಮ್ಮ ಅರೆಭಾಷೆ ಕೃತಿಯಲ್ಲಿ ಅರೆಭಾಷಿಕರ ಜನಜೀವನದ ಹೂರಣವನ್ನು ತುಂಬಿಸಿ ಅದನ್ನು ಮತ್ತಷ್ಟು ಆಪ್ತವಾಗಿಸಿದವರು ಎಂದು ನುಡಿದರು. 

ಇತರರ ಕೆಲಸದಲ್ಲಿ ತಪ್ಪುಗಳು ನುಸುಳಿದ್ದರೆ ಅದನ್ನು ಟೀಕಿಸುವ ಬದಲಿಗೆ ಅದಕ್ಕಿಂತ ಉತ್ತಮವಾದ ಸರಿಯಾದ ಕೆಲಸವನ್ನು ನಾವು ಮಾಡಿ ತೋರಬೇಕು ಎಂಬುದು ಅವರ ಧೋರಣೆಯಾಗಿತ್ತು ಎಂಬುದಾಗಿ ಕೋಡಿಯವರನ್ನು ಸಮೀಪದಿಂದ ಕಂಡು ಅರಿತಿದ್ದ ಕರುಣಾಕರ ಅವರು ತಿಳಿಸಿದರು. 

ಅರೆಭಾಷೆ ವ್ಯಾಕರಣದಲ್ಲಿ ಭಾಷೆ ಉತ್ಪತ್ತಿಯನ್ನು, ಧ್ವನಿಯಾದ ಸ್ವರೂಪವನ್ನು ವ್ಯಾಖ್ಯಾನಿಸಿ ಉದಾಹರಣೆ ಸಹಿತ ಸ್ಪಷ್ಟಪಡಿಸಿದರು. ಕೋಡಿಯವರು ಹಾಕಿಕೊಟ್ಟಿರುವ ನೆಲೆಗಟ್ಟನ್ನು ನಾವು ಮೀರಿ ಹೋಗಲು ಸಾಧ್ಯವಿಲ್ಲ. ಏನಿದ್ದರೂ ಅದರ ಆಧಾರದಲ್ಲೇ ನಾವು ಮುಂದೆ ಸಾಗಬೇಕಿದೆ ಎಂದು ಅರೆಭಾಷೆಗೆ ಕೋಡಿಯವರು ನೀಡಿದ ಕೊಡುಗೆಯ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿದ್ದ ಗೋಪಾಲ ಪೆರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯೆ ಚಂದ್ರಾವತಿ ಬಡ್ಡಡ್ಕ ವಂದಿಸಿದರು. ಸದಸ್ಯರಾದ ಚಂದ್ರಶೇಖರ ಪೇರಾಲು ಹಾಗೂ ಡಾ.ಎನ್.ಎ. ಜ್ಞಾನೇಶ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂಜಾಶ್ರೀ ವಿತೇಶ್ ಕೋಡಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0