ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಡಾ ಅಂಬೇಡ್ಕರ್ , ಡಾ ಬಾಬು ಜಗಜೀವನ್ ರಾಮ್ ಜಯಂತಿ; ಸಾಧಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಕುಶಾಲನಗರ, ಮೇ.1:ಕೇಂದ್ರಕನ್ನಡ ಸಾಹಿತ್ಯ ವೇದಿಕೆ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಕೊಡಗು ಜಿಲ್ಲಾ ಘಟಕ ವತಿಯಿಂದ ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್ ಮತ್ತು ಸಂಗಮ ಟಿ.ವಿ. ಆಶ್ರಯದಲ್ಲಿ ಕುಶಾಲನಗರದಲ್ಲಿ ಗುರುವಾರ ಭಾರತ ರತ್ನ, ಸಂವಿಧಾನ ಶಿಲ್ಪಿಡಾ ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರು ಹಾಗೂ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ 10 ಮಂದಿ ವಿದ್ಯಾರ್ಥಿಗಳಿಗೆ ಶಿಕ್ಷಣ ಜ್ಞಾನಿ*ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಜೀವನ ಮತ್ತು ಆದರ್ಶ ಹಾಗೂ ಇಂದಿನ ಶಿಕ್ಷಣದ ಅವಶ್ಯಕತೆ ಕುರಿತು ಮಾತನಾಡಿದ ಕೊಡಗು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ಡಾ ಜಮೀರ್ ಅಹಮದ್ ,
ಸಮಾಜದಲ್ಲಿನ ಶೋಷಿತರು, ಕಾರ್ಮಿಕರು, ಮಹಿಳೆಯರ ಉನ್ನತಿಗೆ ಹೋರಾಡಿದ, ಅಸಹಾಯಕರ ಧ್ವನಿಯಾದ, ಸಮಾನತೆಯ ಕನಸು ಕಂಡ ಮಹಾನ್ ನಾಯಕ ಬಾಬಾ ಸಾಹೇಬ್ ಡಾ ಅಂಬೇಡ್ಕರ್ ಅವರು,ಎಲ್ಲರ ಬದುಕಿಗೆ ಸ್ಫೂರ್ತಿಯಾಗಿ ಶಿಕ್ಷಣ, ಸಂಘಟನೆ, ಹೋರಾಟ, ಸಮಾನತೆ, ಸ್ವಾವಲಂಬಿ ಬದುಕು, ಜಾತಿ ರಹಿತ ಸಮಾಜ, ಮಹಿಳಾ ಸಬಲೀಕರಣ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗಾಗಿ ಜೀವನದುದ್ದಕ್ಕೂ ಹೋರಾಡಿದ ಅವರ ಸೇವೆ ಅವಿಸ್ಮರಣೀಯವಾಗಿದೆ ಎಂದು ಬಣ್ಣಿಸಿದರು.
ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರು, ಸುದೀರ್ಘ ಕಾಲದವರೆಗೆ ಕೇಂದ್ರದ ಸಚಿವರಾಗಿ ಸೇವೆ ಸಲ್ಲಿಸಿದವರು. ಜಾತ್ಯತೀತತೆ, ಸಾಮಾಜಿಕ ಸಾಮರಸ್ಯ, ಕೃಷಿ, ಅರ್ಥಶಾಸ್ತ್ರ, ಆಹಾರ ಉತ್ಪಾದನೆ, ರಕ್ಷಣಾ ನಿರ್ವಹಣೆ, ಕಾರ್ಮಿಕ ಕಲ್ಯಾಣ, ಮಹಿಳಾ ಸಬಲೀಕರಣಕ್ಕೆ ಅವರ ಕೊಡಗು ಶ್ಲಾಘನೀಯವಾಗಿದೆ. ನಮ್ಮ ದೇಶದ ಪ್ರಗತಿಗೆ ಅವರು ವಿವಿಧ ಸಂದರ್ಭಗಳಲ್ಲಿ ನೀಡಿದ ನಿರ್ಣಾಯಕ ಪಾತ್ರಕ್ಕಾಗಿ ಅವರ ಹೆಸರು ಭಾರತದ ರಾಜಕೀಯ ಸನ್ನಿವೇಶದಲ್ಲಿ ದಾಖಲಿಸಲ್ಪಟ್ಟಿದೆ ಎಂದು ತಿಳಿಸಿದರು.
ಡಾ ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರ ಜೀವನ ಮತ್ತು ಹೋರಾಟ ಹಾಗೂ ಸಾಧನೆಗಳ ಕುರಿತು ಮಾತನಾಡಿದ ಹಿರಿಯ ಸಾಹಿತಿ ಭಾರದ್ವಾಜ ಕೆ.ಆನಂದತೀರ್ಥ, ಡಾ ಅಂಬೇಡ್ಕರ್ ಅವರು ನೇರ ನಡೆ- ನುಡಿ ಮತ್ತು ನಿಷ್ಠುರವಾದಿಯಾಗಿ ಈ ದೇಶದ ಅದ್ಭುತ ನಾಯಕರಾಗಿ ಹೊರಹೊಮ್ಮಿದರೆ, ಸೌಮ್ಯ ಸ್ವಭಾವದ ಬಾಬು ಜಗಜೀವನ್ ರಾಮ್ ಈ ದೇಶ ಕಂಡ ಉತ್ತಮ ರಾಜಕಾರಣಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಸೇವಕರೂ ಆದ ಮುಂಬೈ ನ ಉದ್ಯಮಿ ಬಿ.ಎಸ್.ಸದಾಶಿವಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಇಂತಹ ಮಹಾನ್ ನಾಯಕರ ಆದರ್ಶ ಹಾಗೂ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್.ಎಂ.ರಘು ಮಾತನಾಡಿ, ಇಂತಹ ಮಹಾನ್ ನಾಯಕರ ಜನ್ಮ ದಿನಾಚರಣೆ ಆಚರಿಸುವ ಮೂಲಕ ಅವರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ದಿಸೆಯಲ್ಲಿ ಇಂತಹ ಕಾರ್ಯಕ್ರಮಗಳೊಂದಿಗೆ ಸಮಾಜ ಸೇವೆಗೆ ಶ್ರಮಿಸಿದವರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಸನ್ಮಾನಿಸಲಾಗುತ್ತಿದೆ ಎಂದರು.
ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಸನ್ಮಾನಿಸಿ ಗೌರವಿಸಿದರು. ಸಂಗೊಳ್ಳಿರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಡಿ.ಆರ್.ಪ್ರಭಾಕರ್,ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್,
ಚನ್ನಯ್ಯನಕೋಟೆಯ ಸಮಾಜ ಸೇವಕ ಎಚ್.ಎಸ್.ಗಣೇಶ್,ಕಿರುತೆರೆ ಕಲಾವಿದೆ ಎಚ್.ಎಂ.ಮೀನಾಕ್ಷಿ,ಗಾಯಕ ರವಿ ಆರ್.ಶಾಸ್ತ್ರಿ, ಹರದೂರು ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎಂ.ಎ.ಮುಸ್ತಾಪ ಇತರರು ಇದ್ದರು.
ಶಿಕ್ಷಕಿ ರಶ್ಮಿ ನಿರ್ವಹಿಸಿದರು. ಶಿಕ್ಷಕಿ ಮಂಜು ಭಾರ್ಗವಿ ಸ್ವಾಗತಿಸಿದರು. ರಘು ವಂದಿಸಿದರು.ಗಾಯಕ ರವಿ ಆರ್.ಶಾಸ್ತ್ರಿ , ಗೀತೆಗಳನ್ನು ಹಾಡಿ ಗಮನ ಸೆಳೆದರು.