ವಿರಾಜಪೇಟೆ: ತೆರೆದ ಬಾವಿಗೆ ಬಿದ್ದು ವೃದ್ಧನ ಸಾವು
ವಿರಾಜಪೇಟೆ:ಕೈತೋಟದಲ್ಲಿ ಕೆಲಸ ಮಾಡುತಿದ್ದ ವೇಳೆ ವೃದ್ಧ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದು ಸಾವು ಸಂಭವಿಸಿದ ಘಟನೆ ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿ ಬಿ.ಕೆ. ಶಿವಪ್ಪ (94) ತೆರೆದ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡ ವ್ಯಕ್ತಿ.
ಮೃತ ಶಿವಪ್ಪ ಅವರು ವೃದ್ದ ವಯಸ್ಸಿನಲ್ಲಿ ತರಕಾರಿ ತೋಟಗಳನ್ನು ನಿರ್ವಹಿಸುತ್ತಾ ಜೀವನ ಕಂಡುಕೊಂಡಿದ್ದರು.ಶನಿವಾರ ಎಂದಿನಂತೆ ಮನೆಯ ಆವರಣದಲ್ಲಿದ್ದ ಕೈತೋಟದಲ್ಲಿ ತರಕಾರಿಗಳ ಗಿಡಗಳಿಗೆ ಆರೈಕೆ ಮಾಡಿ ಮರ ಒಂದರ ಕೊಂಬೆಗಳನ್ನು ಕಡಿದು ಸ್ವಚ್ಛ ಮಾಡುತ್ತಿರುವ ವೇಳೆ ತೆರೆದ ಬಾವಿಯನ್ನು ಗಮನಿಸದೇ ಕಾಲು ಜಾರಿ ಆಕಸ್ಮಿಕವಾಗಿ ಭಾವಿ ಬಿದ್ದಿದ್ದಾರೆ.
ಕೆಲವು ಗಂಟೆಗಳ ಬಳಿಕ ಮನೆಗೆ ಬಂದ ಮಗ ತಂದೆಯನ್ನು ಹುಡುಕಾಡಿದ್ದಾರೆ. ಕೊನೆಗೆ ತೆರೆದ ಬಾವಿಯಲ್ಲಿ ತಂದೆಯಿರುವುದು ಗಮನಿಸಿ ಸ್ಥಳೀಯರ ಸಹಕಾರ ಪಡೆದು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪರೀಕ್ಷೆ ಒಳಪಡಿಸಿದ ವೇಳೆ ಮೃತರಾಗಿದ್ದಾರೆ ಎಂದು ಧೃಡಪಡಿಸಿದ್ದಾರೆ. ಮೃತರ ಮಗ ಸುಮ್ರಮಣಿ ನೀಡಿರುವ ದೂರಿನ ಅನ್ವಯ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್.ಎಸ್. 194 ಆಕಸ್ಮಿಕ ಮರಣ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ವರದಿ:ಕಿಶೋರ್ ಕುಮಾರ್ ಶೆಟ್ಟಿ