ಇನ್‌ಸ್ಟಾಗ್ರಾಂ ನೆರವಿನಿಂದ ಮತ್ತೆ ಕುಟುಂಬ ಸೇರಿದ ವೃದ್ಧ

Jan 3, 2026 - 11:30
 0  446
ಇನ್‌ಸ್ಟಾಗ್ರಾಂ ನೆರವಿನಿಂದ ಮತ್ತೆ ಕುಟುಂಬ ಸೇರಿದ ವೃದ್ಧ
Photo credit: Etv bharath

ಚಾಮರಾಜನಗರ, ಜ.2: ಕುಟುಂಬದಿಂದ ಅಕಸ್ಮಾತ್ ಬೇರ್ಪಟ್ಟು ನಿರ್ಗತಿಕನಾಗಿ ದಿನಗಳನ್ನು ಕಳೆಯುತ್ತಿದ್ದ ಮಧ್ಯಪ್ರದೇಶದ ವೃದ್ಧ ವ್ಯಕ್ತಿಯೊಬ್ಬರು, ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಸಹಾಯದಿಂದ ಮತ್ತೆ ಕುಟುಂಬದ ಮಡಿಲು ಸೇರಿದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಸಂತೇಮರಹಳ್ಳಿಯಲ್ಲಿ ನಡೆದಿದೆ.

ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಅಮರ್‌ಪುರ್ ತಾಲ್ಲೂಕಿನ ಧನ್ವಾಸಿ ಗ್ರಾಮದ ಪ್ರೀತಂ ಸಿಂಗ್ (60) ಅವರು ಕೆಲ ತಿಂಗಳುಗಳ ಹಿಂದೆ ಕುಟುಂಬದವರೊಂದಿಗೆ ಕೂಲಿ ಕೆಲಸಕ್ಕಾಗಿ ಯಳಂದೂರಿಗೆ ಬಂದಿದ್ದರು. ಈ ವೇಳೆ ಅಚಾನಕ್‌ವಾಗಿ ಕುಟುಂಬದಿಂದ ಬೇರ್ಪಟ್ಟ ಅವರು, ದಾರಿ ಹಾಗೂ ಸ್ಥಳೀಯ ಭಾಷೆ ತಿಳಿಯದೇ ಪರದಾಡುವ ಸ್ಥಿತಿಗೆ ತಲುಪಿದ್ದರು.

ಹಿಂದಿ ಹೊರತುಪಡಿಸಿ ಬೇರೆ ಭಾಷೆ ತಿಳಿಯದಿದ್ದ ಪ್ರೀತಂ ಸಿಂಗ್‌ ಅವರಿಗೆ ಮನೆಯವರ ದೂರವಾಣಿ ಸಂಖ್ಯೆಯೂ ನೆನಪಿರಲಿಲ್ಲ. ಊರಿಗೆ ಮರಳುವ ದಾರಿಯೂ ಗೊತ್ತಾಗದೇ, ಕುಟುಂಬದ ಪಾಲಿಗೆ ನಾಪತ್ತೆಯಾಗಿದ್ದರು. ಈ ಅವಧಿಯಲ್ಲಿ ಯಳಂದೂರು ಬಸ್ ನಿಲ್ದಾಣದ ಸುತ್ತಮುತ್ತ ಅಲೆದಾಡುತ್ತಾ, ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಮಲಗಿ ದಿನಗಳನ್ನು ಕಳೆಯುತ್ತಿದ್ದರು.

ನಿರ್ಗತಿಕನ ಸ್ಥಿತಿಯನ್ನು ಗಮನಿಸಿದ ಯಳಂದೂರು ಠಾಣೆಯ ಪೊಲೀಸರು, ನವೆಂಬರ್ 11ರಂದು ಅವರನ್ನು ಸಂತೇಮರಹಳ್ಳಿಯ ಜ್ಞಾನ ಸಿಂಧು ವೃದ್ಧಾಶ್ರಮಕ್ಕೆ ದಾಖಲಿಸಿದ್ದರು. ಅಲ್ಲಿ ಇದ್ದಾಗ ಪ್ರೀತಂ ಸಿಂಗ್‌ ಅವರು ತಮ್ಮ ಊರು ಮತ್ತು ಕುಟುಂಬದ ಬಗ್ಗೆ ಹಿಂದಿಯಲ್ಲಿ ವಿವರಿಸುತ್ತಿದ್ದರೂ, ಊರಿನ ಹೆಸರಿನ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಗೊಂದಲ ಉಂಟಾಗಿತ್ತು.

ವೃದ್ಧಾಶ್ರಮದ ಅಧೀಕ್ಷಕ ಎಂ. ಮಹಾದೇವಸ್ವಾಮಿ ಹಾಗೂ ಸಮಾಜಸೇವಕ ಹೆಚ್‌.ಬಿ. ಪ್ರಕಾಶ್‌ ಅವರು ವೃದ್ಧರನ್ನು ಕುಟುಂಬದ ಮಡಿಲಿಗೆ ಮರಳಿ ಸೇರಿಸುವ ಪ್ರಯತ್ನ ನಡೆಸಿದರು. ಈ ನಡುವೆ ವೃದ್ಧಾಶ್ರಮಕ್ಕೆ ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಸತ್ಯ ಎಜುಕೇರ್ ಕಾಂಪಿಟೆನ್ಸಿ ಟ್ರಸ್ಟ್‌ನ ಮಹೇಶ್ ಅವರು ಪ್ರೀತಂ ಸಿಂಗ್‌ ಅವರ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿ ಸಹಾಯ ಕೋರಿದರು. ಈ ವಿಡಿಯೋವನ್ನು ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಸಾಮಾಜಿಕ ಜಾಲತಾಣ ಗುಂಪೊಂದರಲ್ಲಿ ಹಂಚಿಕೊಳ್ಳಲಾಗಿತ್ತು.

ಇನ್‌ಸ್ಟಾಗ್ರಾಂನಲ್ಲಿ ಹರಡಿದ ಮಾಹಿತಿಯ ಆಧಾರದಲ್ಲಿ ಡಿಸೆಂಬರ್ 30ರಂದು ಪ್ರೀತಂ ಸಿಂಗ್‌ ಅವರ ಪುತ್ರ ರಾಜೇಶ್ ಸಿಂಗ್ ಧುರ್ವಿ ಸಂತೇಮರಹಳ್ಳಿಗೆ ಆಗಮಿಸಿ ತಂದೆಯನ್ನು ಗುರುತಿಸಿದರು. ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ, ಯಳಂದೂರು ಪೊಲೀಸರ ಮೂಲಕ ಪ್ರೀತಂ ಸಿಂಗ್‌ ಅವರನ್ನು ಮಗನಿಗೆ ಒಪ್ಪಿಸಲಾಯಿತು.

“ಯಳಂದೂರು ಬಸ್ ನಿಲ್ದಾಣದ ಬಳಿ ವಾಸವಾಗಿದ್ದ ಪ್ರೀತಂ ಸಿಂಗ್‌ ಅವರನ್ನು ಪೊಲೀಸರು ವೃದ್ಧಾಶ್ರಮಕ್ಕೆ ದಾಖಲಿಸಿದ್ದರು. ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋ ಮೂಲಕ ಕುಟುಂಬದವರು ಪತ್ತೆಯಾಗಿದ್ದಾರೆ. ಇದೀಗ ಮಗ ಬಂದು ಅವರನ್ನು ಕರೆದುಕೊಂಡು ಹೋಗಿದ್ದಾರೆ” ಎಂದು ವೃದ್ಧಾಶ್ರಮದ ಅಧೀಕ್ಷಕ ಮಹಾದೇವಸ್ವಾಮಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 0