ಮಧ್ಯರಸ್ತೆಯಲ್ಲೇ ತುರ್ತು ಶಸ್ತ್ರಚಿಕಿತ್ಸೆ: ಯುವಕನ ಜೀವ ಉಳಿಸಿದ ವೈದ್ಯರು

Dec 24, 2025 - 10:50
Dec 24, 2025 - 18:15
 0  1.1k
ಮಧ್ಯರಸ್ತೆಯಲ್ಲೇ ತುರ್ತು ಶಸ್ತ್ರಚಿಕಿತ್ಸೆ: ಯುವಕನ ಜೀವ ಉಳಿಸಿದ ವೈದ್ಯರು
(ಫೋಟೋ: ವೈದ್ಯರು)

ಎರ್ನಾಕುಲಂ, ಡಿ. 24: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವಕನೊಬ್ಬನ ಪ್ರಾಣ ಉಳಿಸಲು ಮೂವರು ವೈದ್ಯರು ಮಧ್ಯರಸ್ತೆಯಲ್ಲೇ ತುರ್ತು ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ಎರ್ನಾಕುಲಂ ಜಿಲ್ಲೆಯ ದಕ್ಷಿಣ ಪರವೂರಿನಲ್ಲಿ ನಡೆದಿದೆ.

ಕೊಲ್ಲಂ ಮೂಲದ ಲಿನು ಎಂಬ ಯುವಕ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ರಕ್ತ ಹಾಗೂ ಕೊಳಕು ಶ್ವಾಸಕೋಶಕ್ಕೆ ಪ್ರವೇಶಿಸಿ ಉಸಿರಾಟಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಜೀವ ಉಳಿಯುವ ಸಾಧ್ಯತೆ ಕಡಿಮೆ ಎಂದು ಅಂದಾಜಿಸಿದ ವೈದ್ಯರು ಸ್ಥಳದಲ್ಲೇ ತಕ್ಷಣ ಚಿಕಿತ್ಸೆ ಆರಂಭಿಸಿದರು.

ಘಟನಾ ಸ್ಥಳದಲ್ಲಿದ್ದ ಡಾ. ಮನೂಪ್, ಡಾ. ಥಾಮಸ್ ಪೀಟರ್ ಹಾಗೂ ಡಾ. ದಿಧಿಯಾ ಅಗತ್ಯ ವೈದ್ಯಕೀಯ ಉಪಕರಣಗಳಿಲ್ಲದ ಪರಿಸ್ಥಿತಿಯಲ್ಲಿ ರೇಜರ್ ಬ್ಲೇಡ್‌ಗಳು ಮತ್ತು ಪೇಪರ್ ಸ್ಟ್ರಾಗಳ ಸಹಾಯದಿಂದ ತುರ್ತು ಶಸ್ತ್ರಚಿಕಿತ್ಸೆ ನಡೆಸಿದರು. ಪರಿಣಾಮವಾಗಿ ಯುವಕನ ಉಸಿರಾಟ ಪುನಃ ಆರಂಭವಾಯಿತು.

ಕರ್ತವ್ಯದ ಬಳಿಕ ಕ್ರಿಸ್‌ಮಸ್ ಆಚರಣೆಗೆ ತೆರಳುತ್ತಿದ್ದ ವೇಳೆ ಅಪಘಾತದ ದೃಶ್ಯ ವೈದ್ಯರ ಗಮನಕ್ಕೆ ಬಂದಿದೆ. ಮೂವರು ಗಾಯಾಳುಗಳಲ್ಲಿ ಲಿನು ಮಾತ್ರ ಗಂಭೀರ ಸ್ಥಿತಿಯಲ್ಲಿ ಇದ್ದ ಕಾರಣ ವಿಳಂಬವಿಲ್ಲದೆ ರಸ್ತೆಬದಿಯಲ್ಲೇ ಚಿಕಿತ್ಸೆ ನೀಡಲಾಯಿತು.

ಸ್ಥಳೀಯರು ಅಗತ್ಯ ವಸ್ತುಗಳನ್ನು ಒದಗಿಸಿ ಸಹಕಾರ ನೀಡಿದರೆ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಆಂಬ್ಯುಲೆನ್ಸ್ ಆಗಮಿಸುವ ಹೊತ್ತಿಗೆ ಲಿನು ಉಸಿರಾಡಲು ಆರಂಭಿಸಿದ್ದರು. ಬಳಿಕ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಎರ್ನಾಕುಲಂ ವೆಲ್‌ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧ್ಯರಸ್ತೆಯಲ್ಲೇ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ ವೈದ್ಯರ ಸಮಯಪ್ರಜ್ಞೆ ಹಾಗೂ ಮಾನವೀಯ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0