ಆಡಳಿತಾತ್ಮಕ ಹುದ್ದೆಗಳಿಗೆ ಬೇಕಾದ ಶಿಕ್ಷಣಕ್ಕೆ ಒತ್ತು ನೀಡಿ:ವೃತ್ತ ನಿರೀಕ್ಷಕ ಪೆಮ್ಮಚಂಡ ಅನೂಪ್ ಮಾದಪ್ಪ ಸಲಹೆ
ಪೊನ್ನಂಪೇಟೆ: ನಮ್ಮ ಮಕ್ಕಳಿಗೆ ಬರೀ ಮೆಡಿಕಲ್, ಇಂಜಿನಿಯರಿಂಗ್'ನಂತ ವಿದ್ಯಾಭ್ಯಾಸ ಕೊಡುವುದರ ಬದಲು ಆಡಳಿತಾತ್ಮಕ ಪದವಿಯಾದ ಐ.ಎ.ಎಸ್, ಐ.ಪಿ.ಎಸ್. ಹಾಗೂ ರಕ್ಷಣಾ ಇಲಾಖೆಯ ಅಧಿಕಾರಿಯಾಗಲು ಬೇಕಾಗುವ ವಿದ್ಯಾಭ್ಯಾಸ ಕೊಡುವುದು ಒಳ್ಳೆಯದು ಎಂದು ಪೋಲೀಸ್ ವ್ರತ್ತ ನಿರೀಕ್ಷಕರಾದ ಪೆಮ್ಮಚಂಡ ಅನೂಪ್ ಮಾದಪ್ಪ ಸಭಿಕರಿಗೆ ಮಾಹಿತಿ ನೀಡಿದರು.
ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ 9ನೆ ವರ್ಷದ ಚಂಗ್ರಾಂದಿ ಪತ್ತಲೋದಿ 9ನೆ ದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಇಡೀ ಒಂದು ಜಿಲ್ಲೆಯ ಆಡಳಿತ ಅಧಿಕಾರವನ್ನು ಹೊಂದಿರುವ, 72 ಇಲಾಖಾಧಿಕಾರಿಗಳು ತಮ್ಮ ಹಿಡಿತದಲ್ಲಿರುವ ಜಿಲ್ಲಾಧಿಕಾರಿಯ ಪದವಿಯ ಘನತೆಯ ಬಗ್ಗೆ, ಇಡೀ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಅಧಿಕಾರ ಹೊಂದಿರುವ ಪೊಲೀಸ್ ಉನ್ನತಾಧಿಕಾರಿಗಳ ಹುದ್ದೆಯ ಗೌರವದ ಬಗ್ಗೆ ಹಾಗೂ ದೇಶ ರಕ್ಷಣೆ ಮಾಡುವ ಪುಣ್ಯ ಕೆಲಸದ ಶ್ರೇಷ್ಠತೆಯ ಬಗ್ಗೆ ತಂದೆ ತಾಯಿಯರು ಮಕ್ಕಳಿಗೆ ತಿಳುವಳಿಕೆ ನೀಡಬೇಕು.
ಇದಲ್ಲದೆ ಕ್ಷುಲ್ಲಕ ಕಾರಣಕ್ಕೆ ಅಣ್ಣ ತಮ್ಮಂದಿರು ಜಗಳವಾಡುವುದು, ಜಗಳದ ಸಂದರ್ಭ ಪೂಜನೀಯವಾದ ಕೋವಿಯನ್ನು ಬಳಸಿಕೊಂಡು ಅದರ ಮೌಲ್ಯಕ್ಕೆ ಚ್ಯುತಿ ತರುವಂತಹ ಕೆಲಸವನ್ನು ಯಾರೂ ಮಾಡಬೇಡಿ, ಆದಷ್ಟು ಪೊಲೀಸ್ ಸ್ಟೇಷನ್ ಹಾಗೂ ಕೋರ್ಟ್'ನಿಂದ ದೂರವಿರಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.
ಕಾವೇರಿ ಚಂಗ್ರಾಂದಿ' ಸಿನಿಮಾದ ನಿರ್ದೇಶಕ ಬಾಳೆಯಡ ಪ್ರತೀಶ್ ಪೂವಯ್ಯ ಮಾತನಾಡಿ 'ಕೊಡವಾಮೆ ಬಾಳೊ' ಪಾದಯಾತ್ರೆಯ ಸಂದರ್ಭ ಕ್'ಗ್ಗಟ್ಟ್ ನಾಡ್ ಹಿತರಕ್ಷಣಾ ಬಳಗದವರ ಸಲಹೆಯ ಮೇರೆಗೆ ಕೊಡವ ಜನಾಂಗದ ಎಲ್ಲಾ ಹಬ್ಬಗಳನ್ನು ಸಿನಿಮಾ ಮಾಡುವ ಯೋಜನೆ ರೂಪಿಸಿದ್ದು ಈಗಾಗಲೇ 3 ಹಬ್ಬಗಳನ್ನು ಸಿನಿಮಾ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಹಬ್ಬಗಳ ಸಿನಿಮಾ ಮಾಡಲಾಗುವುದು.
ಯಾರಾದರು ಸಿನಿಮಾ ನಿರ್ಮಾಪಕರಾಗಲು ಮುಂದೆ ಬಂದರೆ ಕೊಡವ ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗುವ ಇನ್ನಷ್ಟು ಸಿನಿಮಾ ಮಾಡಬಹುದೆಂದರು.
ಸಿನಿಮಾ ನಿರ್ಮಾಪಕಿ ಕಾಣತಂಡ ಬೀನ ಜಗದೀಶ್ ಮಾತನಾಡಿ ಚಿಕ್ಕ ಮಕ್ಕಳಿಗೆ ನಮ್ಮ ಪದ್ದತಿ-ಸಂಸ್ಕ್ರತಿ- ಹಬ್ಬ ನಮ್ಮ ಜಾನಪದ ಆಟ್-ಪಾಟ್, ಆಚಾರ-ವಿಚಾರಗಳು ಸರಿಯಾಗಿ ತಿಳಿದಿರುವುದಿಲ್ಲ. ಅದನೆಲ್ಲ ಸಿನಿಮಾದ ರೂಪದಲ್ಲಿ ತಯಾರಿಸಿ ಸುಲಭವಾಗಿ ಅರ್ಥ ಮಾಡಿಕೊಡಲು ಈ ತರಹದ ಸಿನಿಮಾ ತಯಾರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ; ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಿಕೊಟ್ಟು ಅವರಲ್ಲಿ ಅಭಿಮಾನ ಹುಟ್ಟಿಸುವುದರೊಂದಿಗೆ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಮಾಡುತ್ತಿರುವ ಈ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮ ವೀಕ್ಷಿಸಲು ತಾವೆಲ್ಲರೂ ಹತ್ತು ದಿನವೂ ಬಂದರೆ ಮಾತ್ರ ನಾವು ಮಾಡುತ್ತಿರುವ ಈ ಕಾರ್ಯಕ್ರಮಕ್ಕೆ ಫಲ ಸಿಕ್ಕಿದಂತೆ ಎಂದರು.
ಈ ಸಂದರ್ಭ ಪ್ರದರ್ಶನ ಕಂಡ 'ಕಾವೇರಿ ಚಂಗ್ರಾಂದಿ' ಹಾಗೂ 'ಕಕ್ಕಡತೊರ್ ನಾಳ್' ಸಿನಿಮಾ ಜನರ ಮೆಚ್ಚುಗೆಗೆ ಪಾತ್ರವಾಯಿತು.* ಈ ಸಂದರ್ಭ ದಾನಿಗಳಾದ ಅಜ್ಜಮಾಡ ಸುಬ್ರಮಣಿ, ಮಚ್ಚಮಾಡ ಸತೀಶ್ ಹಾಗೂ ಕವಿತಾ ಸತೀಶ್'ರನ್ನು ಸನ್ಮಾನಿಸಲಾಯಿತು. ಸನ್ಮಾನಿತರಾದ ಅಜ್ಜಮಾಡ ಸುಬ್ರಮಣಿ, ಮಚ್ಚಮಾಡ ಕವಿತಾ ಸತೀಶ್ ಹಾಗೂ ಸಿನಿಮಾ ನಿರ್ಮಾಪಕ ಕಾಣತಂಡ ಜಗದೀಶ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಕ್ಕಾಟಿರ ಉಷ ಸುನಿಲ್ ಪ್ರಾರ್ಥಿಸಿ, ಕೋಟ್ರಮಡ ಸುಮಂತ್ ಸ್ವಾಗತಿಸಿ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ಮನ್ನೇರ ಸರು ರಮೇಶ್ ವಂದಿಸಿದರು.