ಕಣ್ಣಂಗಾಲ ಸರಕಾರಿ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಕಾರ್ಯಕ್ರಮ

ಕಣ್ಣಂಗಾಲ ಸರಕಾರಿ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಕಾರ್ಯಕ್ರಮ

ವಿರಾಜಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ), ವಿರಾಜಪೇಟೆ ತಾಲೂಕಿನ ಅಮ್ಮತಿ ವಲಯದ ಕಣ್ಣಂಗಾಲ ಕಾರ್ಯಕ್ಷೇತ್ರ ವ್ಯಾಪ್ತಿಯ ಹಚ್ಚಿನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ 'ಪರಿಸರ ಕಾರ್ಯಕ್ರಮ ನಡೆಯಿತು.

 ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕರಾದ ಪ್ರೀತಿ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದ ಶಾಲಾ ಶಿಕ್ಷಕಿ ರದೀನಾ, "ಪರಿಸರ ನಮಗಾಗಿ ಇದೆ, ಅದನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. 'ಮನೆಗೊಂದು ಮರ, ಊರಿಗೊಂದು ವನ' ಎಂಬ ಧ್ಯೆಯದೊಂದಿಗೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ನಮ್ಮ ದಿನನಿತ್ಯದ ಅಭ್ಯಾಸವಾಗಬೇಕು. ಸುರಕ್ಷಿತ ನಾಳೆಗಾಗಿ ಇಂದೇ ಎಚ್ಚೆತ್ತುಕೊಂಡು, ಪರಿಸರ ಉಳಿಸಲು ನಾವೆಲ್ಲರೂ ಒಟ್ಟಾಗಿ ಕೈಜೋಡಿಸೋಣ" ಎಂದು ವಿದ್ಯಾರ್ಥಿಗಳಲ್ಲಿ ಪ್ರಜ್ಞೆ ಮೂಡಿಸಿದರು.

ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಹಾಗೂ ಬಹುಮಾನ ವಿತರಣೆ: ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ವಿವಿಧ ಸಸ್ಯಗಳ ಎಲೆಗಳನ್ನು ಗುರುತಿಸುವ ವಿಶಿಷ್ಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.

 ಅಮ್ಮತ್ತಿ ವಲಯ ಮೇಲ್ವಿಚಾರಕರಾದ ದನೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಪರಿಸರ ಕಾಳಜಿಯ ಕುರಿತು ವಿವರಿಸಿದರು. ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಮೇಲ್ವಿಚಾರಕರಾದ ವಸಂತ್, ಸೇವಾ ಪ್ರತಿನಿಧಿ ಸವಿತಾ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಕಮಲಾಕ್ಷಿ, ಶಾಲೆಯ ಸಹ ಶಿಕ್ಷಕಿ ತನುಜಾ ಸೇರಿದಂತೆ ಯೋಜನೆಯ ಪದಾಧಿಕಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.