ಕುಶಾಲನಗರ ಫಾತಿಮ ಪ್ರೌಢಶಾಲೆಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತ ಪರಿಸರ ಜಾಗೃತಿ
ಕುಶಾಲನಗರ: ಕುಶಾಲನಗರ ತಾಲ್ಲೂಕಿನ ಕುಶಾಲನಗರ ಪಟ್ಟಣದ ಫಾತಿಮ ಪ್ರೌಢಶಾಲೆಯಲ್ಲಿ ಮಂಗಳವಾರ ( ಆಗಸ್ಟ್ 26 ರಂದು ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಕೊಡಗು ಪ್ರಾದೇಶಿಕ ಕಛೇರಿ, ಮಡಿಕೇರಿ ವತಿಯಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ, ಶಾಲಾ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.,) ಶಾಲೆಯ ನೇಸರ ಇಕೋ ಕ್ಲಬ್ ಸಹಯೋಗದೊಂದಿಗೆ ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ ಆಂದೋಲನ: 2025 ನಡೆಸಲಾಯಿತು.
ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಮಹತ್ವದ ಕುರಿತು ಮಾಹಿತಿ ನೀಡಿದ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕರೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿ ಪರಿಸರ ಸ್ನೇಹಿ ಗಣೇಶೋತ್ಸವವನ್ನು ಆಚರಿಸುವಂತೆ ಮಾಹಿತಿ ನೀಡಿದರು. ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಸ್ಥಾಪನೆ ಮಾಡುವಂತೆ ಮತ್ತು ರಾಸಾಯನಿಕ ಬಣ್ಣದ ಹಾಗೂ ಪಿ.ಓ.ಪಿ.ಗಣೇಶ ಮೂರ್ತಿಯನ್ನು ತ್ಯಜಿಸುವ ಕುರಿತು ಜನಜಾಗೃತಿ ಮೂಡಿಸುವಂತೆ ಪ್ರೇಮಕುಮಾರ್ ವಿದ್ಯಾರ್ಥಿಗಳಿಗೆ ತಿಳಿಸಿದರು. ಜೇಡಿಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಮಾಲಿನ್ಯ ತಡೆಗಟ್ಟಿ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಫಾತಿಮ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ಎ.ಜಾನ್ಸನ್ ಮಾತನಾಡಿ, ವಿದ್ಯಾರ್ಥಿಗಳು ಜನರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದರು.
ಶಾಲೆಯ ಶಿಕ್ಷಕಿ ಅನಿತಾ ಸುಪ್ರಿಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಯೋಜನಾ ಸಹಾಯಕ ಆಸ್ಟಿನ್, ಗೈಡ್ಸ್ ಶಿಕ್ಷಕಿ ಬಿ.ಎಂ.ಶಿಫಾನತ್, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು. ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಪರಿಸರ ಘೋಷಣೆಗಳನ್ನು ಪ್ರಚುರಪಡಿಸಿದರು.
ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರ
: "ನಾನು ಪರಿಸರಕ್ಕೆ ಮಾರಕವಾದ ಪಿ.ಓ.ಪಿ.( ಪ್ಲಾಸ್ಟರ್ ಆಫ್ ಪ್ಯಾರಿಸ್ ),ರಾಸಾಯನಿಕ ಬಣ್ಣದ ಗೌರಿ ಮತ್ತು ಗಣೇಶ ಮೂರ್ತಿ ಹಾಗೂ ಮಾಲಿನ್ಯಕಾರಿ ಪ್ಲಾಸ್ಟಿಕ್ ವಸ್ತುಗಳಿಂದ ದೂರವಿರುತ್ತೇನೆ. ನೈಸರ್ಗಿಕವಾಗಿ ಜೇಡಿಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಬಣ್ಣರಹಿತ ಗೌರಿ ಮತ್ತು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ನೈಸರ್ಗಿಕವಾಗಿ ಸಿಗುವ ಹೂವುಗಳಿಂದ ಅಲಂಕರಿಸುತ್ತೇನೆ ಹಾಗೂ ಮನೆಯಲ್ಲಿ ಹಾಗೂ ಸ್ನೇಹಿತರೊಂದಿಗೆ ಸೇರಿ ಪರಿಸರ ಸ್ನೇಹಿ ಗೌರಿ- ಗಣೇಶ ಹಬ್ಬವನ್ನು ಆಚರಿಸುತ್ತೇವೆ ಮತ್ತು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇವೆ" ಎಂದು ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಮಾರ್ಗಸೂಚಿ ಪಾಲಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮನವಿ
: ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತಂತೆ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಈಗಾಗಲೇ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸಮಿತಿಗಳು ಸರ್ಕಾರ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಆಯಾ ಆಯಾ ಊರುಗಳಲ್ಲಿ ಸ್ಥಳೀಯ ಸಂಸ್ಥೆಗಳು ಗಣೇಶ ವಿಸರ್ಜನೆಗೆ ನಿಗದಿಪಡಿಸಿರುವ ಸ್ಥಳೀಯ ಹೊಂಡಗಳಲ್ಲಿ ಮಾತ್ರ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂದು ಪರಿಸರ ಅಧಿಕಾರಿ ರಘುರಾಮ್ ನಾಗರಿಕರಲ್ಲಿ ಕೋರಿದ್ದಾರೆ.