18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಯುವ ಮತದಾರರು ಚುನಾವಣಾ ಗುರುತಿನ‌ ಚೀಟಿ ಪಡೆಯುವ ಮೂಲಕ‌ ಚುನಾವಣೆ ಸಂದರ್ಭದಲ್ಲಿ ತಪ್ಪದೆ ಮತ ಹಕ್ಕು ಚಲಾಯಿಸುವಂತಾಗಬೇಕು; ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕರೆ

Jan 26, 2026 - 12:29
 0  164
18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಯುವ ಮತದಾರರು ಚುನಾವಣಾ ಗುರುತಿನ‌ ಚೀಟಿ ಪಡೆಯುವ ಮೂಲಕ‌ ಚುನಾವಣೆ ಸಂದರ್ಭದಲ್ಲಿ ತಪ್ಪದೆ ಮತ ಹಕ್ಕು ಚಲಾಯಿಸುವಂತಾಗಬೇಕು;  ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕರೆ

ಮಡಿಕೇರಿ:- 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಯುವ ಮತದಾರರು ಚುನಾವಣಾ ಗುರುತಿನ‌ ಚೀಟಿ ಪಡೆಯುವ ಮೂಲಕ‌ ಚುನಾವಣೆ ಸಂದರ್ಭದಲ್ಲಿ ತಪ್ಪದೆ ಮತ ಹಕ್ಕು ಚಲಾಯಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಕರೆ ನೀಡಿದ್ದಾರೆ‌.

         ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ವತಿಯಿಂದ ಭಾನುವಾರ ನಡೆದ ರಾಷ್ಟ್ರೀಯ ಮತದಾರರ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

      ಪ್ರಜಾಪ್ರಭುತ್ವದಲ್ಲಿ ಚುನಾವಣೆಯನ್ನು ಹಬ್ಬ ಎಂದು ಕರೆಯುತ್ತೇವೆ. ಆ ದಿಸೆಯಲ್ಲಿ ಪ್ರಜಾಪ್ರಭುತ್ವದ ಚುನಾವಣಾ ಹಬ್ಬದಲ್ಲಿ ಅರ್ಹರೆಲ್ಲರೂ ತಪ್ಪದೆ ಮತ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

        18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಯುವ ಮತದಾರರು ಮತದಾನದಲ್ಲಿ ಮತ ಹಕ್ಕು ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಹಿಂಜರಿಯದೆ, ಪ್ರಜಾಪ್ರಭುತ್ವ ರಾಷ್ಟ್ರವನ್ನು ಬಲಪಡಿಸುವತ್ತ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು. 

       ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಡೆಸುವಲ್ಲಿ ಚುನಾವಣಾ ಆಯೋಗವು ಸಾಕಷ್ಟು ಸುಧಾರಣೆ ತಂದಿದೆ ಎಂದರು.

        ಮತದಾನದ ಮಹತ್ವ ಕುರಿತು ಸ್ವೀಪ್ ಕಾರ್ಯಕ್ರಮ ಮೂಲಕ ಹೆಚ್ಚಿನ‌ ಜಾಗೃತಿ ಮೂಡಿಸಲಾಗುತ್ತದೆ. ನಮೂನೆ 6, 7 ಮತ್ತು 8 ರಂತೆ ಕ್ರಮವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತೆಗೆದು ಹಾಕುವುದು ಅಥವಾ ಸ್ಥಳಾಂತರಕ್ಕೆ ಅವಕಾಶವಿದ್ದು, ಇದನ್ನು ಅರ್ಹರು ಬಳಸಿಕೊಳ್ಳುವಂತಾಗಬೇಕು ಎಂದು ಎಸ್.ಜೆ. ಸೋಮಶೇಖರ್ ಅವರು ನುಡಿದರು. 

      ಭಾರತ ಚುನಾವಣಾ ಆಯೋಗವು ಮತದಾನ ಹೆಚ್ಚಳಕ್ಕೆ ಹಲವು ಕಾರ್ಯಕ್ರಮ ರೂಪಿಸಿದೆ, ಆ ನಿಟ್ಟಿನಲ್ಲಿ ಯುವ ಜನರು ಮತಹಕ್ಕು ಚಲಾಯಿಸುವ ಮೂಲಕ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಕೋರಿದರು.

    ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಜಿ.ಸುರೇಂದ್ರ ಅವರು ರಾಷ್ಟ್ರೀಯ ಮತದಾರರ ದಿನಕ್ಕೆ ಚಾಲನೆ ನೀಡಿ ಮಾತನಾಡಿ ಭಾರತ ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ಸಂವಿಧಾನ ರಾಷ್ಟ್ರವಾಗಿದೆ ಎಂದರು. 

      ರಾಷ್ಟ್ರವು ಶೇ.65 ಕ್ಕೂ ಹೆಚ್ಚು ಯುವ ಮತದಾರರನ್ನು ಹೊಂದಿದ್ದು, ಯುವ ಜನರು ತಪ್ಪದೆ ಮತದಾನದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. 

       ಇತ್ತೀಚಿನ ವರ್ಷಗಳಲ್ಲಿ ಯುವ ಜನರು ಐಪಿಎಲ್ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಾರೆ, ಮತದಾನ ದಿನದಂದು ಪ್ರವಾಸ ತೆರಳುತ್ತಾರೆ. ಇದರಿಂದ ಪ್ರಜಾಪ್ರಭುತ್ವ ಉಳಿಸಲು ಸಾಧ್ಯವೇ ಎಂಬ ಬಗ್ಗೆ ಪ್ರತಿಯೊಬ್ಬರೂ ಅವಲೋಕಿಸಬೇಕು ಎಂದು‌ ಕಿವಿಮಾತು ಹೇಳಿದರು.

     ಮೊದಲು ಮತದಾನ ಮಾಡಿದ್ದಲ್ಲಿ, ಪ್ರಶ್ನೆ ಮಾಡುವ ಮನೋಭಾವ ಬರಲಿದೆ. ಅದನ್ನು ಬಿಟ್ಟು ರಜೆ ಸಿಕ್ಕಿದೆ ಎಂದು ಪ್ರವಾಸ ಹೊರಡುವವುದು ಸರಿಯಲ್ಲ ಎಂದು ಜಿ.ಸುರೇಂದ್ರ ಅವರು ಹೇಳಿದರು. 

        ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಮಾತನಾಡಿ 18 ವರ್ಷ ಪೂರ್ಣಗೊಂಡ ನಂತರ ಮೊದಲ ಬಾರಿಗೆ ಚುನಾವಣಾ ಗುರುತಿನ ಚೀಟಿ ಪಡೆದಾಗ ಒಂದು ರೀತಿ ರೋಮಾಂಚಕ ವಾಗಿತ್ತು ಎಂದು ಸ್ಮರಿಸಿದರು. 

    ಪ್ರಜಾಪ್ರಭುತ್ವದಲ್ಲಿ ಮತದಾನದ ಮೌಲ್ಯವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಬೇಕು. ಮತದಾನ ಮಾಡುವಾಗ ಎಚ್ಚರ ವಹಿಸಬೇಕು. ಯಾರ ಪ್ರಭಾವಕ್ಕೂ ಒಳಗಾಗದೆ ಮತದಾನ ಮಾಡುವುದು ಅರ್ಹರೆಲ್ಲರ ಜವಾಬ್ದಾರಿಯಾಗಿದೆ ಎಂದರು.

      ಕುಗ್ರಾಮಗಳಲ್ಲಿಯೂ ಸಹ ಹೆಚ್ಚಿನ ಮತದಾನ ಆಗಬೇಕು. ಮತದಾನದಲ್ಲಿ ಖುಷಿಯಿಂದ ಭಾಗವಹಿಸಿ, ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಿನ ಶ್ರಮಿಸಬೇಕು ಎಂದು ಕರೆ ನೀಡಿದರು. 

       ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿ, ಮಾತನಾಡಿದರು.

        18 ವರ್ಷ ತುಂಬಿದ ಹೊಸ ಮತದಾರರಿಗೆ ಚುನಾವಣಾ ಗುರುತಿನ ಚೀಟಿಯನ್ನು ಇದೇ ಸಂದರ್ಭದಲ್ಲಿ ಗಣ್ಯರು ವಿತರಿಸಿದರು. 

      ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ಪ್ರೌಢಶಾಲಾ, ಪದವಿ ಪೂರ್ವ ಮತ್ತು ಪದವಿ ಹಂತದ ವಿದ್ಯಾರ್ಥಿಗಳಿಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. 

     ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಬೂತ್ ಮಟ್ಟದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಜತೆಗೆ ಕಿಟ್ ವಿತರಿಸಲಾಯಿತು.

         ತಹಶಿಲ್ದಾರರಾದ ಆರ್. ಶ್ರೀಧರ, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಶರ್ಮಿಳ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ, ಶಿರಸ್ತೆದಾರರಾದ ಮಧುಕರ, ಮಹೇಶ್, ಚಂದ್ರಶೇಖರ್, ಅನಿಲ್ ಕುಮಾರ್ ಇತರರು ಇದ್ದರು.

      ಭಾಗಮಂಡಲ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಜೆ.ದಿವಾಕರ ಅವರು ನಿರೂಪಿಸಿದರು, ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿನಿಯರು ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡಿದರು, ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಬಿಂದು ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0