ನಿವೃತ್ತಿ ಹೊಂದಿದ ಶಿಕ್ಷಕಿ ಜಯಶ್ರಿಯವರಿಗೆ ಎಸ್.ಡಿ.ಎಂ.ಸಿ. ಮತ್ತು ಶಾಲಾ ಶಿಕ್ಷಕರ ವತಿಯಿಂದ ಬೀಳ್ಕೊಡುಗೆ
ಗೋಣಿಕೊಪ್ಪ: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಎನ್.ಕೆ ಜಯಶ್ರೀ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಬಿಳ್ಕೊಟ್ಟರು. ಸಹ ಶಿಕ್ಷಕರು ವಿವಿಧ ಉಡುಗೊರೆಗಳನ್ನು ನೀಡುವ ಮೂಲಕ ಜಯಶ್ರೀ ಅವರ ನಿವೃತ್ತ ಜೀವನದ ಹೆಜ್ಜೆಯನ್ನು ಸಂಭ್ರಮವಾಗಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ ಕುಮಾರ್, ಮಾರ್ಗದರ್ಶನದಲ್ಲಿ ಸಮಾರಂಭ ನಡೆಯಿತು. ಸನ್ಮಾನಿಸಿ ಮಾತನಾಡಿದ ಮುಖ್ಯ ಶಿಕ್ಷಕ ಕುಮಾರ್, 20 ವರ್ಷಗಳಿಂದ ಶಾಲೆಯಲ್ಲಿ ವಿದ್ಯಾದಾನ ಮಾಡುವ ಮೂಲಕ ಸರ್ವಶ್ರೇಷ್ಠವಾದ ಕಾರ್ಯವನ್ನು ನಡೆಸಿದ್ದಾರೆ. ನಿವೃತ್ತಿ ಜೀವನವು ಅಷ್ಟೇ ಸುಂದರವಾಗಿ ನಡೆಯಲಿ ಎಂದು ಹೇಳಿದರು.
ಶಾಲಾ ಮೇಲುಸ್ತುವಾರಿ ಮತ್ತು ಅಭಿವೃದ್ದಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರಗಳನ್ನು ಬಿತ್ತುವ ಮೂಲಕ ಅವರ ಸುಂದರ ಜೀವನವನ್ನು ಕಟ್ಟಿಕೊಡುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದಾಗಿದೆ. ಅಂತಹ ಜವಾಬ್ದಾರಿಯನ್ನು ನಿಭಾಯಿಸಿದ ಶಿಕ್ಷಕಿ ಜಯಶ್ರೀ ಅವರ ನಿವೃತ್ತಿ ಜೀವನದ ಬದುಕು ಶಾಂತಿಯುತವಾಗಿ ನಡೆಯಲಿ ಎಂದು ಹಾರೈಸಿದರು. ಸೇವಾ ನಿವೃತ್ತಿ ಹೊಂದಿದ ಶಿಕ್ಷಕಿ ಜಯಶ್ರೀ ಮಾತನಾಡಿ, ಮಕ್ಕಳ ಜೊತೆಗೆ ಬೆರೆತು ಸಾಕಷ್ಟು ವಿಶೇಷ ಅನುಭವಗಳನ್ನು ಜೀವನದಲ್ಲಿ ಹೊಂದಲಾಗಿದೆ. ನಿವೃತ್ತಿಯವ ಬಗ್ಗೆ ದುಃಖವಿದ್ದರೂ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಜವಾಬ್ದಾರಿಯ ಹೆಮ್ಮೆಯ ಕಿರೀಟವನ್ನು ಧರಿಸಿ ವೃತ್ತಿ ಸಹಜ ನಿವೃತ್ತಿಯನ್ನು ಹೊಂದುತ್ತಿದ್ದೇನೆ ಎಂದು ಹೇಳಿದರು.
ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಮೊದಲು ಶಾಲೆಯಲ್ಲಿ ಸಮುದಾಯದತ್ತ ಶಾಲೆ ನಡೆಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಫಲಿತಾಂಶವನ್ನು ಪೋಷಕರು ಗಮನಿಸಿದರು. ತರಗತಿಗಳ ಶಿಕ್ಷಕರು ವಿದ್ಯಾರ್ಥಿಗಳು ಪಡೆದ ಫಲಿತಾಂಶಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.
ಶಾಲೆಯ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ದಿವ್ಯ, ಕಲಾ ಶಿಕ್ಷಕ ಸತೀಶ್ ಬಿ.ಆರ್, ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ ಟಿ.ಡಿ, ಸಹಾಯಕ ಶಿಕ್ಷಕರುಗಳಾದ ಜೋಸ್ಲಿಯಾ ಎನ್.ಕೆ, ಇಂದಿರಾ ಎಂ.ಸಿ, ಅನಿತಕುಮಾರಿ ಹೆಚ್.ಇ, ದಮಯಂತಿ, ಸಹನ್ ಎಂ.ಬಿ, ಶಾರದ ಕೆ ಎಸ್, ನಾಗರಾಜು, ಸ್ನೇಹಾ ಕಾವೇರಮ್ಮ, ಸಿದ್ದರಾಜು, ಎನ್, ಮಂಜುಳ ವಿ, ಮತ್ತು ಎಸ್‌ಡಿಎಂಸಿ ಸದಸ್ಯರುಗಳು, ಪೋಷಕರು, ವಿಧ್ಯಾರ್ಥಿಗಳು ಇದ್ದರು.
