ಕಾಫಿ ಖರೀದಿಗೆ ಜಿಲ್ಲೆಯ ಖರೀದಿದಾರರ ಹಿಂಜರಿಕೆ ಆರೋಪ: ಗೋಣಿಕೊಪ್ಪಲಿನಲ್ಲಿ ಬೆಳೆಗಾರರ ಸಭೆ

ಕಾಫಿ ಖರೀದಿಗೆ ಜಿಲ್ಲೆಯ ಖರೀದಿದಾರರ ಹಿಂಜರಿಕೆ ಆರೋಪ: ಗೋಣಿಕೊಪ್ಪಲಿನಲ್ಲಿ ಬೆಳೆಗಾರರ ಸಭೆ

ಗೋಣಿಕೊಪ್ಪ:ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ದರ ಏರಿಕೆಯಾದರೂ ಕೊಡಗಿನ ವ್ಯಾಪಾರಿಗಳು ಕಾಫಿ ಖರೀದಿಗೆ ಮುಂದಾಗದಿರುವ ಬಗ್ಗೆ ಬೆಳೆಗಾರರಿಂದ ಹಾಗೂ ರೈತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಬೆಳೆಗಾರರು ಹಾಗೂ ರೈತರ ಸಭೆಯು ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆಯಿತು. ರೈತ ಸಂಘದಿoದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಬೆಳೆಗಾರರು ತಮ್ಮ ಅಭಿಪ್ರಾಯವನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಯ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ಸಭೆಯಲ್ಲಿದ್ದ ಬೆಳೆಗಾರರಾದ ವಕೀಲ ಹೇಮಚಂದ್ರ, ನಾಮೇರ ರವಿ ದೇವಯ್ಯ, ಪ್ರಭು ಶಂಕರ್, ಶಂಕ್ರಪ್ಪ, ಕಡೇಮಾಡ ಸುನೀಲ್ ಮಾದಪ್ಪ, ಸಿ.ಬಿ. ಪೂಣಚ್ಚ, ಚೆಪ್ಪುಡಿರ ಕಾರ್ಯಪ್ಪ ಸುಳ್ಳಿಮಾಡ ಸಂಪತ್, ಟಿ.ಟಿ. ಪೂಣಚ್ಚ, ಮೂಕಳೇರ ರಮೇಶ್ ಬೆಳ್ಳಪ್ಪ, ಸಿ.ಎ. ಕಾರ್ಯಪ್ಪ, ಪುಚ್ಚಿಮಾಡ ಲಾಲಾ ಭೀಮಯ್ಯ, ಕಾಟಿಮಾಡ ಶರೀನ್ ಮುತ್ತಣ್ಣ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯವನ್ನು ಸಭೆಯ ಮುಂದಿಟ್ಟರು.

ಹಿರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಫಿಗೆ ಉತ್ತಮ ಬೆಲೆ ಇದ್ದರೂ ಸ್ಥಳೀಯ ಮಟ್ಟದಲ್ಲಿ ಬೆಳೆಗಾರರಿಗೆ ಉತ್ತಮ ದರ ಸಿಗದಿರುವುದು ಆತಂಕಕಾರಿ ಬೆಳವಣಿಗೆ. ಕೊಡಗಿನಲ್ಲಿ ಹೆಚ್ಚಾಗಿ ಕಾಫಿಯನ್ನು ಉತ್ಪಾದನೆ ಮಾಡಲಾಗುತ್ತಿದೆ. ದರ ನಿಗದಿಗೆ ಕೊಡಗು ಬಂದ್‌ಗೆ ಕರೆ ನೀಡುವುದರಿಂದ ಪ್ರಯೋಜನವಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನ ಜಿಲ್ಲೆಯಿಂದ ಆರಂಭವಾಗಲಿ, ರೈತರೆಲ್ಲರೂ ಈ ವಿಚಾರದಲ್ಲಿ ಕೈ ಜೋಡಿಸುವಂತೆ ಸಲಹೆ ನೀಡಿದರು.

 ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಮಾತನಾಡಿ, ಮಧ್ಯವರ್ತಿಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಬೆಳೆಗಾರರ ಹೋರಾಟಕ್ಕೆ ಚೇಂಬರ್ ಆಫ್ - ಕಾಮರ್ಸ್ ಬೆಂಬಲ ನೀಡಲು ಬಯಸುತ್ತದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಬೆಲೆ ಇದ್ದರೂ ಸ್ಥಳೀಯ ಮಟ್ಟದಲ್ಲಿ ವ್ಯಾಪಾರಿಗಳು ಉತ್ತಮ ಬೆಲೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಕಾಫಿಯನ್ನು ಖರೀದಿಸಲು ಮುಂದೆ ಬರುತ್ತಿಲ್ಲ. ಇದರಿಂದ ರೈತರಿಗೆ ಸಮಸ್ಯೆ ಎದುರಾಗುತ್ತಿದೆ.. ಈ ನಿಟ್ಟಿನಲ್ಲಿ ಸಭೆ ಆಯೋಜಿಸಲಾಗಿದೆ. ಹಲವು ಬೆಳೆಗಾರರು ತಮ್ಮ ಅಭಿಪ್ರಾಯವನ್ನು ಸಭೆಯ ಮುಂದಿಟ್ಟಿದ್ದಾರೆ. ಮುಂದಿನ 10 ದಿನಗಳೊಳಗೆ ಕೊಡಗು ಜಿಲ್ಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೂತನ ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗುವುದು. ರಾಜಕೀಯ ರಹಿತವಾಗಿ ಕಾಫಿ ಬೆಳೆಗಾರರ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ಕಾಫಿ ಮಂಡಳಿ ಅಧಿಕಾರಿಗಳೊಂದಿಗೆ, ಶಾಸಕರು, ಸಂಸದರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಬಗ್ಗೆ ಗಮನ ಸೆಳೆಯಲಾಗುವುದು. ಪ್ರತಿ ನೂತನ ಸಮಿತಿಗೆ ತಾಲೂಕಿನಿಂದ ಅನುಭವಿ ಹೋರಾಟಗಾರರನ್ನು ನೇಮಕ ಮಾಡಿಕೊಳ್ಳಲಾಗುವುದು. ವ್ಯಾಪಾರಿಗಳಿಗೆ ನೀಡುವ ಲೈಸನ್ಸ್ ರದ್ದತಿ ಸೇರಿದಂತೆ ಹಲವು ವಿಚಾರಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚೆ ಮಾಡಲಾಗುವುದು.

ಕೇಂದ್ರ ಸರ್ಕಾರದ ಅಧೀನದಲ್ಲಿ ದರ ನಿಗದಿ ವಿಚಾರ ಇರುವುದರಿಂದ ಸಂಸದರನ್ನೊಳಗೊಂಡ ಸಮಿತಿಯಲ್ಲಿ ಕೇಂದ್ರದ ವಾಣಿಜ್ಯ ಮಂತ್ರಿಗಳನ್ನು ಕೂಡ ಭೇಟಿ ಮಾಡಿ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಂತಹಂತವಾಗಿ ಹೋರಾಟವನ್ನು ಕೈಗೊಳ್ಳಲಾಗುತ್ತದೆ. ಕೊಡಗಿನಿಂದಲೇ ಬೆಳೆಗಾರರ ಹೋರಾಟ ಆರಂಭವಾಗಲಿದ್ದು ನಂತರ ಚಿಕ್ಕಮಗಳೂರು, ಹಾಸನ ಸೇರಿದಂತೆ ಇನ್ನಿತರ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಹೋರಾಟವನ್ನು ಕೈಗೆತ್ತಿಕೊಳ್ಳಲು ಮನವಿ ಮಾಡಲಾಗುವುದು ಎಂದು ಮನು ಸೋಮಯ್ಯ ಮಾಹಿತಿ ನೀಡಿದರು.

ವೇದಿಕೆಯಲ್ಲಿ ರೈತ ಸಂಘದ ಕೊಡಗು ಜಿಲ್ಲಾ ಸಂಚಾಲಕರಾದ ಪುಚ್ಚಿಮಾಡ ಸುಭಾಶ್, ಕೊಡಗು ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಎಸ್.ಎಸ್. ಸುರೇಶ್, ನಾಗರಿಕ ವೇದಿಕೆಯ ಪ್ರಮುಖ ತಾಣಚ್ಚಿರ ಪೂಣಚ್ಚ, ರೈತ ಸಂಘದ ಕಾನೂನು ಸಲಹೆಗಾರರಾದ - ವಕೀಲ ಹೇಮಚಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೈತ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಜಿಲ್ಲಾ ಖಜಾಂಜಿ ಇಟ್ಟಿರ ಸಬಿತ ಭೀಮಯ್ಯ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಂಬ ಕಾರ್ಯಪ್ಪ, ವಿವಿಧ ಹೋಬಳಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು, ವಿವಿಧ ಸಂಘ ಸಂಸ್ಥೆಯ ಪ್ರಮುಖರು ಪಾಲ್ಗೊಂಡಿದ್ದರು.

ವರದಿ:ಚಂಪಾ ಗಗನ, ಪೊನ್ನಂಪೇಟೆ