ಕಡಗದಾಳು ಬದರ್ ಜುಮಾ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ
ಕಡಗದಾಳು: ಬದರ್ ಜುಮಾ ಮಸೀದಿ ವತಿಯಿಂದ ಪ್ರವಾದಿ ಪೈಗಂಬರ್ ಅವರ ೧೫೦೧ ನೇ ಜನ್ಮದಿನದ ಪ್ರಯುಕ್ತ ಈದ್ ಮಿಲಾದ್ ಆಚರಣೆಯು ೨ ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು. ಮಸೀದಿ ಹಾಗೂ ಮಸೀದಿಗೆ ತೆರಳುವ ರಸ್ತೆಗಳನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳ ಮೂಲಕ ಅಲಂಕರಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕತ್ತಲೆಕಾಡು, ನೀರುಕೊಲ್ಲಿ ಹಾಗೂ ತುರುಕರಟ್ಟಿಯ ಮಕ್ಕಳು, ಯುವಕರು, ಪುರುಷರು ಹಾಗೂ ಮಹಿಳೆಯರು ಬಹುಸಂಖ್ಯೆಯಲ್ಲಿ ಆಗಮಿಸಿದ್ದರು.
ಈ ಸಂದರ್ಭ ಮುಖ್ಯ ಭಾಷಣವನ್ನು ಮಾಡಿದ ಕತ್ತಲೆಕಾಡು ಮದರಸ ಅಧ್ಯಾಪಕ ಹಾಗೂ ಮಸೀದಿಯ ಉಸ್ತಾದರಾದ ಹಂಸ ಸಖಾಫಿ ಅವರು , ಪ್ರವಾದಿ ಪೈಗಂಬರ್ ಅವರು ನಮಗೆ ಕಲಿಸಿಕೊಟ್ಟ ಪ್ರಕಾರ ನಮಾಝ್ ಹಾಗೂ ಪ್ರಾರ್ಥನೆ ಮಾತ್ರವಿದ್ದರೆ ನಿಜವಾದ ಮುಸ್ಲಿಮನಾಗುವುದಿಲ್ಲ, ನಿಜವಾದ ಮುಸ್ಲಿಮನಾದವನು ಸಮಾಜಕ್ಕೆ ಸೇವೆ ಮಾಡುವವನಾಗಿದ್ದಾನೆ. ಎಂದರಲ್ಲದೇ ಇಸ್ಲಾಮಿನ ಹಲವು ಚರಿತ್ರೆಗಳನ್ನು ತಿಳಿಸಿದರು. ತುರುಕರಟ್ಟಿ ಮಸೀದಿಯ ಖತೀಬರಾದ ಹಂಝ ಮದನಿ ಅವರು ಮಾತನಾಡಿ ಪ್ರವಾದಿಯ ಹಾಗೂ ಇಸ್ಲಾಂ ಚರಿತ್ರೆಗಳನ್ನು ಹೇಳಿದರು. ಮಸೀದಿಯ ಜಮಾಅತ್ ಕಮಿಟಿ ಮಾಜಿ ಅಧ್ಯಕ್ಷರಾದ ಯೂಸುಫ್ ಅವರು ಎಲ್ಲರಿಗೂ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಥಳೀಯ ಪ್ರಮುಖರಾದ ನಾಸರ್ ಸಿ.ಕೆ. ಅವರು ಮಾತನಾಡಿ ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದರು. ಮಸೀದಿಯ ಸಭಾಂಗಣದಲ್ಲಿ ನಡೆದ ಮೊದಲನೇ ದಿನದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಹಿರಿಯರ ಹಾಗೂ ಕತ್ತಲೆಕಾಡು ಹಳೆ ವಿದ್ಯಾರ್ಥಿಗಳ ವತಿಯಿಂದ ನಡೆದ ಇಸ್ಲಾಮಿಕ್ ಸಾಂಸ್ಕೃತಿಕ ಕಲೆಯಾದ ದಫ್ ಪ್ರದರ್ಶನವು ಜನರ ಗಮನ ಸೆಳೆಯಿತು.
ಅದೇ ರೀತಿ ಯುವಕರ ಹಾಗೂ ಹಿರಿಯರ ಭಾಷಣ, ಹಾಡು ಹಾಗೂ ಬುರ್ದಾ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಎರಡನೇ ದಿನದ ಕಾರ್ಯಕ್ರಮದಲ್ಲಿ ಮದರಸ ವಿದ್ಯಾರ್ಥಿಗಳ ಅದ್ಭುತ ಕಲಾ ಪ್ರದರ್ಶನಗಳು ನಡೆಯಿತು.
ಮದರಸ ವಿದ್ಯಾರ್ಥಿಗಳಿಗೂ ದಫ್ ಕಲೆ, ಹಾಡುಗಳು ಹಾಗೂ ಭಾಷಣ ಸೇರಿದಂತೆ ಹಲವು ಗಮನ ಸೆಳೆಯುವ ಕಾರ್ಯಕ್ರಮಗಳು ಜರುಗಿದವು.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಶಾಲೆಯ ಹಾಗೂ ನಾಡಿನ ಕೀರ್ತಿಗೆ ಪಾತ್ರರಾದ ಕಡಗದಾಳು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಹರ್ಷಿತ ಬಿ.ಎಸ್, ಭಾನುಪ್ರಿಯ, ಮುಹಮ್ಮದ್ ರಿಯಾಸ್ ಕೆ.ಬಿ, ಮಹಮ್ಮದ್ ಶರೀಫ್ ಹಾಗೂ ನೇತ್ರಾವತಿ ಜೆ.ಆರ್ ಅವರಿಗೆ ತುರುಕರಟ್ಟಿ ಬದರ್ ಜಮಾಅತ್ ಮಸೀದಿಯ ಜಮಾಅತ್ ಕಮಿಟಿಯ ವತಿಯಿಂದ ಸನ್ಮಾನ ಕಾರ್ಯಕ್ರಮ ಮತ್ತು ನಗದು ಬಹುಮಾನ ವಿತರಣೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಉಸ್ತಾದರಾದ ಉಮ್ಮರ್, ಬದರ್ ಜುಮಾ ಮಸೀದಿಯ ಜಮಾಅತ್ ಕಮಿಟಿಯ ಕಾರ್ಯದರ್ಶಿ ಹಮೀದ್ ಕೆ.ಎಂ,ಮಾಜಿ ಅಧ್ಯಕ್ಷರಾದ ನಿಸಾರ್ ಮತ್ತು ಖಾಸಿಂ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ವರದಿ-ಶಾಫಿ, ಕತ್ತಲೆಕಾಡು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
