ಸೆಲ್ಫಿ ಹುಚ್ಚಿಗೆ ಒಂದೇ ಕುಟುಂಬದ ನಾಲ್ವರು ನೀರು ಪಾಲು
ಮಂಡ್ಯ: ಸಮೀಪದ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಕಾಲು ಜಾರಿ ನೀರಿನ ಪ್ರಬಲ ಸೆಳೆತಕ್ಕೆ ಸಿಲುಕಿದ ಪರಿಣಾಮ ಬೆಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಮತ್ತು ಕಾರಿನ ಚಾಲಕ ಸೇರಿ ಐವರು ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಜಗದಪುರ ಗ್ರಾಮದ ನಿವಾಸಿಗಳಾದ ವಿಜಯಮ್ಮ (52), ಅವರ ಮಗಳು ಪ್ರಿಯಾಂಕಾ ಹಾಗೂ ಶ್ವೇತಾ (38), ಅವರ ಮಗಳು ಚೈತ್ರಾ (20) ಹಾಗೂ ಬೆಂಗಳೂರಿನ ಕಾರಿನ ಚಾಲಕ ಮಹೇಶ್ (30) ಮೃತರು ಎಂದು ಗುರುತಿಸಲಾಗಿದೆ.
ಇವರು ಕಬ್ಬಾಳು ದೇವಸ್ಥಾನದಲ್ಲಿ ಬೀಗರ ಔತಣ ಕೂಟದ ನಿಮಿತ್ತ ಆಗಮಿಸಿ ಪೂಜೆ ಸಲ್ಲಿಸಿದ ಬಳಿಕ ಮಳವಳ್ಳಿ ತಾಲೂಕಿನ ಮುತ್ತತ್ತಿ ಪ್ರವಾಸಿ ತಾಣಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ನಂತರ ಕಾವೇರಿ ನದಿಯಲ್ಲಿ ಸೆಲ್ಫಿ ಕ್ಲಿಕ್ಕಿಸುವ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ನಾಲ್ವರು ಮಹಿಳೆಯರು ನದಿಗೆ ಬಿದ್ದಿದ್ದು, ನದಿಯ ವೇಗದ ಹರಿವು ಅವರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಅವರನ್ನು ರಕ್ಷಿಸಲು ಮುಂದಾದ ಕಾರಿನ ಚಾಲಕ ಮಹೇಶ್ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನೀರಿನಲ್ಲಿ ಮುಳುಗಿದ್ದ ಮೃತದೇಹಗಳನ್ನು ನುರಿತ ಈಜುಗಾರರ ಸಹಾಯದಿಂದ ರಾತ್ರಿ ಸುಮಾರು 7 ಗಂಟೆಯ ವೇಳೆಗೆ ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬಳಿಕ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ವಿ.ಜೆ. ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್ ಹಾಗೂ ಹಲಗೂರು ಪೊಲೀಸ್ ಠಾಣೆಯ ಪಿಎಸ್ಐ ಲೋಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸಿಹೆಚ್‌ಸಿ ಗೋವರ್ಧನ್, ಮೋಹನ್ ಕುಮಾರ್, ಪ್ರಶಾಂತ್ ಕುಮಾರ್ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಗೀತಾ ಅಂಚಿನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಎಸ್ಪಿ ಶೋಭಾರಾಣಿ ಮಾಹಿತಿ ನೀಡಿದರು.
ಎಸ್ಪಿ ವಿವರಣೆ: ಮಹಿಳೆಯರು ಸ್ಥಳಕ್ಕಾಗಮಿಸಿ, ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದರು. ನೀರು ಕಡಿಮೆ ಇದ್ದ ರೀತಿ ಅವರಿಗೆ ಕಾಣಿಸುತ್ತೆ, ಆಗ ಮೊದಲು ರವಿ ಅವರ ಪತ್ನಿ ಶ್ವೇತಾ, ಅವರ ಮಗಳು ಚೈತ್ರಾ, ಮತ್ತು ವಿಜಯಮ್ಮ ಅಂತಾ ರವಿ ಅವರ ಅಕ್ಕ, ರವಿ ಅವರ ಅಕ್ಕನ ಮಗಳು ಪ್ರಿಯಾಂಕಾ ಮತ್ತು ಡ್ರೈವರ್ ಮಹೇಶ್ ಇಷ್ಟು ಜನನೂ ನೀರಲ್ಲಿ ಮುಳುಗ್ತಾರೆ. ಫಸ್ಟು ವಿಜಯಮ್ಮ ನೀರಲ್ಲಿ ಮುಳುಗ್ತಾರೆ. ಅವರನ್ನು ರಕ್ಷಣೆ ಮಾಲು ಹೋಗಿ ಉಳಿದವರು ಸಹ ಮುಳುಗಿದ್ದಾರೆ ಎಂದು ಎಸ್ ಪಿ ಶೋಭಾರಾಣಿ ಮಾಹಿತಿ ನೀಡಿದರು.
ಅವರೆಲ್ಲರೂ ಅಲ್ಲಿಗೆ ಫೋಟೋ ತೆಗೆಸಿಕೊಳ್ಳಲೆಂದೇ ಹೋಗಿದ್ದರು. ನದಿಗಿಳಿದ ಪ್ರದೇಶ ಪಾರದರ್ಶಕವಾಗಿ ಅದರೊಳಗಿನ ಕಲ್ಲುಗಳು ಕಾಣಿಸುತ್ತಿದ್ದವು. ಆದ್ರೆ ಅದರ ಆಳದ ಬಗ್ಗೆ ಅವರಿಗೆ ಗೊತ್ತಾಗಿಲ್ಲ ಎಂದು ಎಸ್ಪಿ ಹೇಳಿದರು.

