ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಕ್ಲಬ್ ವತಿಯಿಂದ ಅಬಾಕಸ್ ಉಚಿತ ತರಬೇತಿ ಸಮಾರೋಪ

Apr 5, 2026 - 18:23
 0  119
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಕ್ಲಬ್ ವತಿಯಿಂದ ಅಬಾಕಸ್ ಉಚಿತ ತರಬೇತಿ ಸಮಾರೋಪ

ಕುಶಾಲನಗರ, ಏ.5 : ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ( ಕೂಡ್ಲೂರು ) ಸರ್ಕಾರಿ ಪ್ರೌಢಶಾಲೆಯಲ್ಲಿ ಕುಶಾಲನಗರದ ಸ್ಮಾರ್ಟ್ ಬ್ರೈನ್ ಅಬಾಕಸ್ ಅಕಾಡೆಮಿ ಸಹಯೋಗದೊಂದಿಗೆ ಶಾಲೆಯ ರಾಮನುಜಂ ಗಣಿತ ಕ್ಲಬ್ ವತಿಯಿಂದ ಅಬಾಕಸ್ ಕಲಿಕಾ ಉಚಿತ ತರಬೇತಿಯ ಸಮಾರೋಪ ಸಮಾರಂಭ ಹಾಗೂ ಅಬಾಕಸ್ ಕಲಿಕೆಯ ವಿದ್ಯಾರ್ಥಿಗಳಿಗೆ ನೀಡಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಅಬಾಕಸ್ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಪ್ರಶಂಸನಾ ಪತ್ರ ವಿತರಿಸಿ ಮಾತನಾಡಿದ ಪಿರಿಯಾಪಟ್ಟಣ ತಾಲ್ಲೂಕಿನ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಆದ ದಾನಿಯೂ ಆದ ಸೈಜನ್ ಪೀಟರ್, ಅಬಾಕಸ್ ಕಲಿಕೆಯು ಮಕ್ಕಳ ಮಾನಸಿಕ ಬೆಳವಣಿಗೆಗೆ ಅವರಲ್ಲಿ ಲೆಕ್ಕಾಚಾರದ ಕೌಶಲ್ಯ ಗಳನ್ನು ಬೆಳೆಸುವುದರೊಂದಿಗೆ ಮಕ್ಕಳ ಜ್ಞಾನ ವೃದ್ಧಿಗೆ ತುಂಬಾ ಸಹಕಾರಿಯಾಗಿದೆ ಎಂದರು.

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಅಬಾಕಸ್ ಕಲಿಕೆಯ ಮೂಲಕ ತಮ್ಮ ಜ್ಞಾನ ಕೌಶಲ್ಯ ವಿಶೇಷ ಕಲಿಕೆ ಸಾಮರ್ಥ್ಯ ಬೆಳೆಸಿಕೊಂಡು ಸಮಾಜದಲ್ಲಿ ಗುರುತಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಅಬಾಕಸ್ ಕಲಿಕಾ ತರಬೇತಿಯ ಮಹತ್ವ ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ,ಅಬಾಕಸ್ ಕಲಿಕೆಯು ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ಮನಸ್ಸನ್ನು ಕೇಂದ್ರೀಕರಿಸುವ ಕೌಶಲ್ಯಗಳು ಕಲಿಕೆಯ ಒಂದು ಭಾಗವಾಗಿದೆ ಎಂದರು.

 ಅಬ್ಯಾಕಸ್ ತರಬೇತಿಯು ಗಣಿತದ ಕೌಶಲ್ಯಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರೊಂದಿಗೆ ಮಕ್ಕಳಲ್ಲಿ ಕ್ರಿಯಾತ್ಮಕ ಹಾಗೂ ತಾರ್ಕಿಕ ಶಕ್ತಿಯನ್ನು ಉದ್ದೀಪನಗೊಳಿಸಲು ಸಹಕಾರಿಯಾಗಿದೆ.ಗಣಿತ ಕೌಶಲ್ಯವನ್ನು ಇನ್ನಷ್ಟು ಚುರುಕುಗೊಳಿಸಲು ಸಹಕಾರಿಯಾಗಿದೆ ಎಂದರು. ತಮ್ಮ ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಮಾರ್ಟ್ ಬ್ರೈನ್ ಅಬಾಕಸ್ ಅಕಾಡೆಮಿಯ ನೆರವಿನೊಂದಿಗೆ ಗಣಿತ ಶಿಕ್ಷಕಿ ಬಿ.ಎನ್.ಸುಜಾತ ಅವರ ವಿಶೇಷ ಆಸಕ್ತಿಯ ಫಲವಾಗಿ ಅಬಾಕಸ್ ಅಕಾಡೆಮಿಯ ಕುಸುಮ ರಾಜ್ ಮತ್ತು ದಾನಿ ಸೈಜನ್ ಪೀಟರ್ ಅವರ ಸಹಕಾರದಿಂದ ಮಕ್ಕಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ.

ಇದರಿಂದ ಮಕ್ಕಳು ಗಣಿತದ ಸಮಸ್ಯೆಗಳನ್ನು ಸರಳವಾಗಿ ಪರಿಹರಿಸಲು ಸಾಧ್ಯವಾಗಿದೆ ಎಂದು ಪ್ರೇಮಕುಮಾರ್ ತಿಳಿಸಿದರು. ಸ್ಮಾರ್ಟ್ ಬ್ರೈನ್ ಅಬಾಕಸ್ ಅಕಾಡೆಮಿ ನಿರ್ದೇಶಕಿ ಕುಸುಮ ಎಸ್. ರಾಜ್ ಮಾತನಾಡಿ, ಮಕ್ಕಳ ಕಲಿಕೆಯ ಪ್ರತಿಭೆಯ ಅನಾವರಣಕ್ಕೆ ಅಬಾಕಸ್ ಕಲಿಕೆಯು ಪೂರಕವಾಗಿದೆ. ಅಬ್ಯಾಕಸ್ ಕಲಿಕಾ ವಿಧಾನವು ಮಕ್ಕಳು ಮಣಿಗಳು, ಸಂಖ್ಯೆಗಳು ಮತ್ತು ಬಣ್ಣಗಳ ಮೂಲಕ ಕಲಿಯುವುದನ್ನು ಆಕರ್ಷಕವಾಗಿಸುತ್ತದೆ ಎಂದರು.

 ದಾನಿಯೂ ಆದ ಸೈಜನ್ ಪೀಟರ್ ಅವರು ಮಕ್ಕಳ ಅಬಾಕಸ್ ಕಲಿಕಾ ತರಬೇತಿಗೆ ಮಕ್ಕಳ ಕಲಿಕಾ ಸಾಮಾಗ್ರಿ ಸೇರಿದಂತೆ ತರಬೇತಿಗೂ ಆರ್ಥಿಕವಾಗಿಯೂ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ ಎಂದು ಪ್ರಶಂಸಿದರು. ಶಾಲೆಯ ಗಣಿತ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಎನ್.ಸುಜಾತ ಮಾತನಾಡಿ, ಅಬಾಕಸ್ ಕಲಿಕೆಯಿಂದ ನಮ್ಮ ಶಾಲೆಯ ಮಕ್ಕಳಲ್ಲಿ ಗಣಿತ ಕಲಿಕೆಯು ತುಂಬಾ ಸಹಕಾರಿಯಾಗಿದೆ ಎಂದರು. ಅಬ್ಯಾಕಸ್ ಕಲಿಕೆಯು ಮಕ್ಕಳಿಗೆ ಗುಣಾಕಾರ, ವ್ಯವಕಲನ, ಸಂಕಲನ ಮತ್ತು ಭಾಗಾಕಾರ ಮುಂತಾದ ಲೆಕ್ಕಾಚಾರಗಳನ್ನು ಕಲಿಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಅಬಾಕಸ್ ತರಬೇತುದಾರರಾದ ಕಾವ್ಯ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ. ದಯಾನಂದ ಪ್ರಕಾಶ್, ಗೈಡ್ಸ್ ಶಿಕ್ಷಕಿ ಕೆ.ಟಿ.ಸೌಮ್ಯ , ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಡಿ.ರಮ್ಯ, ಬಿ.ಎನ್.ಸುಜಾತ, ಅನ್ಸಿಲಾ ರೇಖಾ, ಎಸ್.ಎಂ.ಗೀತಾ ಸಿಬ್ಬಂದಿ ಎಂ. ಉಷಾ ಹಾಗೂ ವಿದ್ಯಾರ್ಥಿಗಳು ಇದ್ದರು.

 ಪ್ರಶಂಸನಾ ಪತ್ರ ವಿತರಣೆ; ಅಬಾಕಸ್ ಪರೀಕೆಯ 2, 3 ಮತ್ತು 4 ಹಂತದ ಪರೀಕ್ಷೆಯನ್ನು ತೇರ್ಗಡೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರಶಂಸನಾ ಪತ್ರ ವಿತರಿಸಲಾಯಿತು. ಸನ್ಮಾನ; ಶಾಲೆಯಲ್ಲಿ ಮಕ್ಕಳಿಗೆ ಅಬಾಕಸ್ ಕಲಿಕಾ ತರಬೇತಿ ಸಂಘಟಿಸಲು ನೆರವು ನೀಡಿದ ದಾನಿ ಸೈಜನ್ ಪೀಟರ್, ಅಬಾಕಸ್ ಅಕಾಡೆಮಿಯ ನಿರ್ದೇಶಕಿ ಕುಸುಮ ಎಸ್. ರಾಜ್, ಅಬಾಕಸ್ ತರಬೇತಿ ಶಿಕ್ಷಕಿ ಕಾವ್ಯ ಹಾಗೂ ಶಾಲೆಯ ಗಣಿತ ಶಿಕ್ಷಕಿ ಬಿ.ಎನ್.ಸುಜಾತ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0