State News

ಉದ್ಯೋಗ ಕೊಡಿಸುವ ನೆಪದಲ್ಲಿ ಸ್ನೇಹಿತೆಯರಿಗೇ ವಂಚನೆ ಪ್ರೇಮಿಗಳಿಂದ ಲಕ್ಷಾಂತರ ರೂ. ಪಡೆದು ಪಂಗನಾಮ; ದೂರು ದಾಖಲು

admincoorgdaily

Photo credit: TV09

ಚಿಕ್ಕಬಳ್ಳಾಪುರ, ಡಿ. 22: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸ್ನೇಹಿತೆಯರಿಂದಲೇ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಪ್ರಕರಣ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. ಯುವತಿಯೊಬ್ಬಳು ತನ್ನ ಪ್ರೇಮಿಯೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾಳೆ ಎಂಬ ಆರೋಪದ ಮೇಲೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಂಕಣಗುಂದಿ ಗ್ರಾಮದ ನಿವಾಸಿ ಅನುಷಾ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ನಿವಾಸಿಯಾಗಿರುವ ಆಕೆಯ ಪ್ರೇಮಿ ಅರುಣ್ ವಿರುದ್ಧ ಆರೋಪ ಕೇಳಿಬಂದಿದೆ. ಅರುಣ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಇದ್ದು, ಉತ್ತಮ ಸಂಬಳದ ಉದ್ಯೋಗ ಕೊಡಿಸಿಕೊಡುತ್ತಾನೆ ಎಂದು ಹೇಳಿ ಪರಿಚಯಸ್ಥ ಸ್ನೇಹಿತೆಯರನ್ನು ನಂಬಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಉದ್ಯೋಗಕ್ಕಾಗಿ ಮುಂಗಡ ಹಣ ಕಟ್ಟಬೇಕೆಂದು ತಿಳಿಸಿ ಹಣ ಪಡೆದು, ಬಳಿಕ ಕೆಲಸವನ್ನೂ ಕೊಡದೆ ಹಣವನ್ನೂ ಮರಳಿಸದೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.

ಮಂಚನಬಲೆ ನಿವಾಸಿ ಎಲ್‌ಎಲ್‌ಬಿ ವಿದ್ಯಾರ್ಥಿನಿ ಪ್ರತಿಭಾ ಅವರಿಂದ 1.85 ಲಕ್ಷ ರೂ. ಹಾಗೂ ಕಣಜೇನಹಳ್ಳಿ ನಿವಾಸಿ ಎಂಸಿಎ ಪದವೀಧರೆ ಹರ್ಷಿತಾ ಅವರಿಂದ 2 ಲಕ್ಷ ರೂ. ಹಣ ಪಡೆದು ವಂಚಿಸಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ಹಣವನ್ನು ಮೊದಲು ಅನುಷಾ ತನ್ನ ಖಾತೆಗೆ ಜಮೆ ಮಾಡಿಸಿಕೊಂಡು, ನಂತರ ಅರುಣ್‌ಗೆ ನೀಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ವಂಚನೆಗೆ ಒಳಗಾದ ಇಬ್ಬರೂ ಮಹಿಳೆಯರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಹಣ ವಾಪಸ್ ಕೇಳಿದ ಹಿನ್ನೆಲೆಯಲ್ಲಿ ಅರುಣ್ ಮದುವೆಯನ್ನು ರದ್ದುಪಡಿಸಿದ್ದಾನೆ ಎನ್ನಲಾಗಿದೆ. ಒಂದು ವಾರದೊಳಗೆ ಹಣ ಮರಳಿಸುವುದಾಗಿ ಹೇಳಿ ಅನುಷಾ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟಿರುವುದಾಗಿ ತಿಳಿದು ಬಂದಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.