ದೇವಸ್ಥಾನಗಳಲ್ಲಿ ಸರ ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ಗ್ಯಾಂಗ್ ಬಂಧನ

Dec 29, 2025 - 23:43
 0  852
ದೇವಸ್ಥಾನಗಳಲ್ಲಿ ಸರ ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ಗ್ಯಾಂಗ್ ಬಂಧನ
Photo credit:Asiant news

 ಮಂಗಳೂರು: ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಷಣ್ಮುಕ ಸುಬ್ರಮಣ್ಯ ದೇವಸ್ಥಾನದಲ್ಲಿ ಭಕ್ತೆಯರನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ ಕಳವು ಮಾಡಲು ಯತ್ನಿಸಿದ್ದ ಕಳ್ಳಿಯರ ತಂಡವನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಭಾನುವಾರ ನಡೆದಿದೆ.

ಇತ್ತೀಚೆಗೆ ಹೆಜಮಾಡಿಯಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರೆಂದು ಶಂಕಿಸಲಾಗಿರುವ ಈ ಕಳ್ಳಿಯರು ಆಟೋದಲ್ಲಿ ಕೆಮ್ಮಿಂಜೆ ದೇವಸ್ಥಾನಕ್ಕೆ ಆಗಮಿಸಿದ್ದರು. ದೇವಾಲಯದಲ್ಲಿ ಅನ್ನಪ್ರಸಾದ ಸೇವಿಸಿದ ಬಳಿಕ ಕೈ ತೊಳೆಯಲು ಬಂದ ಯಮುನಾ ಎಂಬ ವೃದ್ಧೆಯ 14 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಲು ಅವರು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ಈ ಕಳ್ಳಿಯರ ಚಲನವಲನಗಳು ಸಿಸಿಟಿವಿ ದೃಶ್ಯಗಳ ಮೂಲಕ ಈಗಾಗಲೇ ವ್ಯಾಪಕವಾಗಿ ಹರಿದಾಡಿದ್ದರಿಂದ ಎಚ್ಚರಗೊಂಡಿದ್ದ ಭಕ್ತರು ಮತ್ತು ಸ್ಥಳೀಯರು ಅವರನ್ನು ಗುರುತಿಸಿದರು. ತಕ್ಷಣವೇ ಸಾರ್ವಜನಿಕರು ಕಳ್ಳಿಯರನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದರು.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ವಶಕ್ಕೆ ಪಡೆದರು. ಹೆಜಮಾಡಿ ಪ್ರಕರಣದ ಸಂಬಂಧ ಹೆಚ್ಚಿನ ವಿಚಾರಣೆ ಅಗತ್ಯವಿರುವ ಹಿನ್ನೆಲೆಯಲ್ಲಿ, ಪಡುಬಿದ್ರಿ ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರನ್ನು ಗುರಿಯಾಗಿಸಿಕೊಂಡು ಕಳವು ನಡೆಸುತ್ತಿದ್ದ ಅಂತರರಾಜ್ಯ ಕಳ್ಳಿಯರ ತಂಡದ ಚಟುವಟಿಕೆಗಳು ಇದೀಗ ಬಹಿರಂಗಗೊಂಡಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0