ಅಬ್ಬಿಫಾಲ್ಸ್ ನಲ್ಲಿ ಕಸ ವಿಂಗಡನಾ ಘಟಕ

ಅಬ್ಬಿಫಾಲ್ಸ್ ನಲ್ಲಿ ಕಸ ವಿಂಗಡನಾ ಘಟಕ

ಮಡಿಕೇರಿ: ಪ್ರವಾಸಿಗರ ದಟ್ಟಣೆಯ ಹಿನ್ನೆಲೆಯಲ್ಲಿ ಮಡಿಕೇರಿ ಸಮೀಪದ ಅಬ್ಬಿಫಾಲ್ಸ್ ನಲ್ಲಿ ಹಸಿ ಕಸ ಮತ್ತು ಒಣ ಕಸದ ಪ್ರತ್ಯೇಕ ವಿಂಗಡಣೆಯ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ ಸಯ್ಯದ್ ಖಾಜಾ ಮೊಹಿದ್ದೀನ್ ತಿಳಿಸಿದರು.ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಜಿಲ್ಲಾ ವರ್ತಕರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಾಲಿನ್ಯ ನಿಯಂತ್ರಣ ಸಂಬಂಧ ನಡೆದ ಚರ್ಚೆಯಲ್ಲಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪರವಾಗಿ ವಿಚಾರ ಮಂಡಿಸಿದ ಜಿಲ್ಲಾ ಚೇಂಬರ್‌ನ ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್ ಅವರು, ಜಿಲ್ಲೆಯಲ್ಲಿ ಒಟ್ಟಾರೆ ಅವೈಜ್ಞಾನಿಕವಾಗಿ ಕಸ ಸಂಗ್ರಹಾತಿ ನಡೆಯುತ್ತಿದೆ ಎಂದು ಹೇಳಿದರು.

 ಪ್ರವಾಸಿಗರಿಗೆ ಕಸವನ್ನು ಹಾಕಲು ಸೂಕ್ತ ವ್ಯವಸ್ಥೆ ಇಲ್ಲದ್ದರಿಂದ ರಸ್ತೆ ಬದಿಯಲ್ಲಿಯೇ ಕಸದ ಬ್ಯಾಗ್‌ಗಳನ್ನು ಎಸೆದು ಹೋಗುತ್ತಿದ್ದು ಈ ಹಿಂದೆ ಅಲ್ಲಲ್ಲೇ ಕಸದ ಬುಟ್ಟಿಗಳನಿಟ್ಟು ಅವುಗಳಿಗೆ ಕಸವನ್ನು ಹಾಕುವ ವ್ಯವಸ್ಥೆ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ವ್ಯವಸ್ಥೆಯನ್ನು ತೆಗೆದುಹಾಕಿದ್ದರಿಂದ ಅತ್ಯಂತ ಅವೈಜ್ಞಾನಿಕವಾಗಿ ರಸ್ತೆ ಬದಿಗಳಲ್ಲೆಲ್ಲ ಕಸದ ರಾಶಿ ಕಂಡುಬರುತ್ತದೆ ಎಂದು ಅವರು ವಿವರಿಸಿದರು. ಅಲ್ಲದೆ ಕೊಡಗು ಜಿಲ್ಲೆಯ ರಾಜಧಾನಿ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳು ಪುರಸಭೆಯ ಕಾಯ್ದೆಯನ್ನು ಬಳಸಿ ಎರಡು ಲೀಟರ್ ಕಡಿಮೆ ಪ್ರಮಾಣದ ನೀರಿನ ಬಾಟಲ್‌ಗಳನ್ನು ನಿಷೇಧಿಸಿದ್ದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇದನ್ನು ಇಡೀ ರಾಜ್ಯದಲ್ಲಿಯೇ ಜಾರಿಗೆಗೊಳಿಸಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

 ಕೊಡಗು ಜಿಲ್ಲೆಗೆ ಸುಮಾರು 50 ಲಕ್ಷ ಪ್ರವಾಸಿಗರು ಪ್ರತಿ ವರ್ಷ ಬರುತ್ತಿದ್ದು ಅವರುಗಳಿಗೆ ಕಸ ವಿಲೇವಾರಿ ಹಾಗೂ ಪ್ಲಾಸ್ಟಿಕ್ ಬಳಕೆ ಬಗ್ಗೆ ತಿಳುವಳಿಕೆ ಮೂಡುವ ಕಾರ್ಯಕ್ರಮಗಳನ್ನು ರಾಜ್ಯ ಪರಿಸರ ಮಂಡಳಿ ಕೈಗೊಳ್ಳಬೇಕೆಂದು ಅವರು ವಿನಂತಿಸಿದರು.

 ಇದಕ್ಕೆ ಉತ್ತರಿಸಿದ ಅಧಿಕಾರಿ ಸಯ್ಯದ್ ಖಾಜ ಮೊಹಿದ್ದೀನ್ ಅವರು ಲಕ್ಷಾಂತರ ಮಂದಿ ಪ್ರವಾಸಿಗರನ್ನು ಸೆಳೆಯುವ ಕೊಡಗಿನಲ್ಲಿ ಕಸ ವಿಲೇವಾರಿಗೆ ಪ್ರತ್ಯೇಕ ರೀತಿಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು. ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ನಿಷೇಧಿಸುವ ಬಗ್ಗೆ ರಾಜ್ಯ ಸರಕಾರ ತೀರ್ಮಾನ ಪ್ರಕಟಿಸಬೇಕು ಎಂದು ಈ ಸಂದರ್ಭ ಅವರು ಹೇಳಿದರು.

ವೇದಿಕೆಯಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ, ಜಿಲ್ಲಾ ಸಮನ್ವಯ ಸಮಿತಿಯ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಎಸ್‌ಕೆಸಿಸಿಯ ಚುನಾಯಿತ ಅಧ್ಯಕ್ಷೆ ಶ್ರೀಮತಿ ಉಮಾರೆಡ್ಡಿ ಹಾಗೂ ಇತರರು ಪಾಲ್ಗೊಂಡಿದ್ದರು. ರಾಜ್ಯ ಸಮ್ಮೇಳನಕ್ಕೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಸುಮಾರು 40 ಮಂದಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.