ಈಡಿ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ದರೋಡೆ: ನಾಲ್ವರು ಅರೆಸ್ಟ್

Dec 2, 2025 - 20:56
 0  627
ಈಡಿ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ದರೋಡೆ: ನಾಲ್ವರು ಅರೆಸ್ಟ್
Photo credit: TV09

ಹುಬ್ಬಳ್ಳಿ, ಡಿ. 02: ಈಡಿ ಅಧಿಕಾರಿಗಳ ಹೆಸರಿನಲ್ಲಿ ಚಿನ್ನದ ವ್ಯಾಪಾರಿಯೊಬ್ಬರಿಂದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಗ್ಯಾಂಗ್‌ ನ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆಪಡೆದಿದ್ದಾರೆ. ದೋಚಿದ್ದ ಚಿನ್ನ ಮತ್ತು ನಗದು ಸೇರಿ ಪ್ರಮುಖ ಸಾಕ್ಷ್ಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಮುಂಬೈನ ಅಂಕುಶ ಕದಂ, ಚಂದ್ರಶೇಖರ, ವಿಲಾಸ ಮೋಹಿತೆ ಹಾಗೂ ಗುಜರಾತ್‌ನ ಜಿಜ್ಞೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ₹6.65 ಲಕ್ಷ ಮೌಲ್ಯದ 56.26 ಗ್ರಾಂ ಚಿನ್ನ, ₹60,000 ನಗದು, 7 ಮೊಬೈಲ್‌ಗಳು ಜಪ್ತಿ ಮಾಡಲಾಗಿದೆ.

ಚಿನ್ನಾಭರಣ ಅಂಗಡಿಗಳಿಗೆ ಆಭರಣ ಪೂರೈಸುವ ಕೇರಳದ ಸುದೀನ್ ಎಂ.ಆರ್. ನವೆಂಬರ್ 15ರಂದು ಮಂಗಳೂರರಿನಿಂದ ಬೆಳಗಾವಿಗೆ ಪ್ರಯಾಣಿಸುವ ವೇಳೆ ಹುಬ್ಬಳ್ಳಿಯ ಚೆನ್ನಮ್ಮ ವೃತ್ತ ಸಮೀಪದ ನೀಲಿಜನ್ ರಸ್ತೆಯಲ್ಲಿ, ಈಡಿ ಅಧಿಕಾರಿಗಳಂತೆ ನಟಿಸಿದ ಗ್ಯಾಂಗ್‌ ಅವರನ್ನು ದರೋಡೆ ಮಾಡಿತ್ತು.

ಹಿಂದಿಯಲ್ಲಿ ಮಾತನಾಡುತ್ತಿದ್ದ ಆರೋಪಿಗಳು ಗುರುತಿನ ಚೀಟಿ ತೋರಿಸಿ “ವಿಚಾರಣೆಗೆ ಬರಬೇಕು” ಎಂದು ಕಾರಿನಲ್ಲಿ ಕರೆದೊಯ್ದಿದ್ದರು. ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದೀರಿ ಎಂದು ಬೆದರಿಸಿ, ಅವರ ಮೊಬೈಲ್ ಸಿಮ್ ತೆಗೆದು, ಹಲ್ಲೆ ನಡೆಸಿ, ₹3.2 ಕೋಟಿ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಕಿತ್ತುಕೊಂಡಿತ್ತು.

ವಿವೇಕ್ ಎಂಬ ಸಹೋದ್ಯೋಗಿಯನ್ನು ಬೆಳಗಾವಿಯ ಕಿತ್ತೂರು ಬಳಿ ಇಳಿಸಿದ ಗ್ಯಾಂಗ್, ಬಳಿಕ ಸುದೀನ್‌ರನ್ನು ಎಂ.ಕೆ. ಹುಬ್ಬಳ್ಳಿ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿತ್ತು.

ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ದರೋಡೆ ಕೇಸ್‌ ಅನ್ನು ಸಿಸಿಬಿಗೆ ಹಸ್ತಾಂತರಿಸಲಾಗಿತ್ತು. ಸಿಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.ಮತ್ತಷ್ಟು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0